ರಾಜ್ಯದಲ್ಲಿ ಶೀಘ್ರ ಉಚಿತ ಮರಳು ನೀತಿ ಜಾರಿ: ಮುರುಗೇಶ್ ನಿರಾಣಿ

ರಾಜ್ಯದಲ್ಲಿ ಕಡುಬಡವರಿಗೂ ಅನುಕೂಲವಾಗುವಂತೆ ಉಚಿತ ಮರಳು ನೀತಿಯನ್ನು ಜಾರಿಗೆತರುವುದಾಗಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ವಿಧಾನಸಭೆಗೆ ಶುಕ್ರವಾರ ತಿಳಿಸಿದರು.

Published: 19th March 2021 01:44 PM  |   Last Updated: 19th March 2021 01:52 PM   |  A+A-


Murugesh Nirani

ಮುರುಗೇಶ್ ನಿರಾಣಿ

Posted By : Srinivasamurthy VN
Source : UNI

ಬೆಂಗಳೂರು: ರಾಜ್ಯದಲ್ಲಿ ಕಡುಬಡವರಿಗೂ ಅನುಕೂಲವಾಗುವಂತೆ ಉಚಿತ ಮರಳು ನೀತಿಯನ್ನು ಜಾರಿಗೆತರುವುದಾಗಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ವಿಧಾನಸಭೆಗೆ ಶುಕ್ರವಾರ ತಿಳಿಸಿದರು.
 
ಪ್ರಶ್ನೋತ್ತರ ಅವಧಿಯಲ್ಲಿ ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಡವರಿಗೆ ಮನೆ ಕಟ್ಟಿಕೊಳ್ಳಲು ತೊಂದರೆಯಾಗದಂತೆ ಒಂದು ಟನ್ ಮರಳಿಗೆ 100 ಅಥವಾ 200 ರೂಪಾಯಿ ದರದಲ್ಲಿ ನೀಡಲು ಅನುಕೂಲವಾಗುವಂತೆ ಹೊಸ ಮರಳು ನೀತಿಯನ್ನು ಜಾರಿಗೆ ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಿದರು. 

10 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಮನೆ ಕಟ್ಟಿಕೊಳ್ಳುವ ಬಡವರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಹೊಸ ಮರಳು ನೀತಿಯನ್ನು ಜಾರಿಗೆ ತಂದು ಅವರಿಗೆ ಅನುಕೂಲ ಮಾಡಿಕೊಡಲಾಗುವುದು. ಅಂತೆಯೇ ಅಕ್ರಮ ಮರಳು ಬ್ಲಾಕ್ ಮಾಡುವ ದಂಧೆ ತಡೆಗಟ್ಟಲು ಇಲಾಖೆ ಕಟ್ಟುನಿಟ್ಟಿನ ಕ್ರಮವನ್ನುಕೈಗೊಂಡಿದೆ. ಈ ಆರೋಪಕ್ಕೆ ಸಂಬಂಧಪಟ್ಟಂತೆ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಹಾಸನ ಜಿಲ್ಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮರಳನ್ನು ಪೂರೈಕೆ ಮಾಡಲಾಗುತ್ತಿದೆ. ಯಾವುದೇ ರೀತಿಯ ತಾರತಮ್ಯವಿಲ್ಲದೆ ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತಹ ಹೊಸ ನೀತಿಯೊಂದನ್ನು ಸರ್ಕಾರ ಜಾರಿಗೆ ತರಲಿದೆ ಎಂದು ನಿರಾಣಿ ಹೇಳಿದರು. 

ಮರಳು ನೀತಿ ವಿಷಯ ಸದನದಲ್ಲಿ ಬಹಳ ಗಂಭೀರವಾಗಿ ಚರ್ಚೆಯಾಯಿತು. ಬಾಲಕೃಷ್ಣ ಅವರ ಆತಂಕಕ್ಕೆ ಇತರೆ ಸದಸ್ಯರಾದ ಅನ್ನದಾನಿ, ಎಚ್.ಡಿ.ರೇವಣ್ಣ, ಶಿವಲಿಂಗೇಗೌಡ ಮೊದಲಾದವರು ಧ್ವನಿಗೂಡಿಸಿದರು.  ಬಳಿಕ ಬಾಲಕೃಷ್ಣ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಷ್ಟು ಮರಳು ದೊರೆಯುತ್ತಿಲ್ಲ. ಇದರಿಂದ ಬಡವರು, ಮಧ್ಯಮ ವರ್ಗದ ಜನತೆ ಮನೆ ಕಟ್ಟಿಕೊಳ್ಳಲು ಬಹಳ ತೊಂದರೆ ಪಡುತ್ತಿದ್ದಾರೆ. ಜಿಲ್ಲೆಯಲ್ಲಿ 9 ಲಕ್ಷ ಟನ್ ಮರಳಿನ ಬೇಡಿಕೆ ಇದೆ. ಆದರೆ, ಕೇವಲ 2 ಲಕ್ಷ ಟನ್ ಮರಳು ಕೂಡ ದೊರೆಯುತ್ತಿಲ್ಲ. ಇದರಿಂದ ಜನ ಸಾಮಾನ್ಯರು ಬವಣೆ ಪಡುತ್ತಿದ್ದಾರೆ. ಕೆರೆಯ ಮಣ್ಣನ್ನು ಫಿಲ್ಟರ್ ಮಾಡಿ ಮರಳು ಎಂದು ಮಾರಾಟ ಮಾಡುತ್ತಿದ್ದಾರೆ. ಅಮಾಯಕ ಜನರು ಮೋಸ ಹೋಗುತ್ತಿದ್ದಾರೆ. ಯಾವುದು ಮಣ್ಣು, ಯಾವುದು ಮರಳು ಎಂಬುದೂ ಗೊತ್ತಾಗುತ್ತಿಲ್ಲ. ಇದನ್ನು ತಡೆಯಲು ಇಲಾಖೆ ಯಾವ ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿದರು. 

ಬಳಿಕ ಅನ್ನದಾನಿ ಮಾತನಾಡಿ, ರೈತರು ಎತ್ತಿನ ಗಾಡಿಯಲ್ಲಿ ತಮ್ಮ ಜಮೀನಿನಲ್ಲಿ ಸಿಕ್ಕಿದ ಮರಳನ್ನು ತೆಗೆದುಕೊಂಡು ಹೋದರೆ ಪೊಲೀಸರು ಕೇಸು ದಾಖಲು ಮಾಡುತ್ತಾರೆ. ಆದರೆ, ಕಾವೇರಿ ನದಿ ತೀರದ ವ್ಯಾಪ್ತಿಯಲ್ಲಿ ರಾತ್ರೋರಾತ್ರಿ ನೂರಾರು ಲಾರಿಗಳು ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿವೆ. ಇದಕ್ಕೆ ಪೊಲೀಸರು ಕುಮ್ಮಕ್ಕು ಇದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬೇರೆ ಪಕ್ಷಗಳ ಸದಸ್ಯರು ಕೂಡ ಈ ಬಗ್ಗೆ ಮಾತನಾಡಿ ರಾಜ್ಯದಲ್ಲಿ ಮರಳಿನ ಅಭಾವದಿಂದ ಜನ ಸಾಮಾನ್ಯರು ಬಹಳ ಬವಣೆ ಪಡುತ್ತಿದ್ದಾರೆ. ಪುಟ್ಟ ಮನೆ ಕಟ್ಟಿಕೊಳ್ಳಲು ಆಗುತ್ತಿಲ್ಲ ಎಂದು ಸರ್ಕಾರದ ಗಮನ ಸೆಳೆದರು. ಪ್ರಶ್ನೋತ್ತರ ಅವಧಿ ಆಗಿರುವುದರಿಂದ ಹೆಚ್ಚಿನ ಚರ್ಚೆಗೆ ಅವಕಾಶ ಕೊಡುವುದಿಲ್ಲ. ಬೇರೆ ರೂಪದಲ್ಲಿ ಪ್ರಸ್ತಾಪ ಮಾಡಿ ಎಂದು ಸ್ಪೀಕರ್ ಕಾಗೇರಿ ಚರ್ಚೆಗೆ ತೆರೆ ಎಳೆದರು.


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp