ಬಜೆಟ್ ಗೆ ಅಂಗೀಕಾರ: ವಿಧಾನಮಂಡಲ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಧರಣಿ, ಕೋಲಾಹಲ ಎಬ್ಬಿಸಿದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. 

Published: 24th March 2021 06:24 PM  |   Last Updated: 24th March 2021 06:24 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : UNI

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಧರಣಿ, ಕೋಲಾಹಲ ಎಬ್ಬಿಸಿದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. 

ಧರಣಿ ಪ್ರತಿಭಟನೆ ನಡುವೆ 2021 – 22 ನೇ ಸಾಲಿನ ಬಜೆಟ್ ಗೆ ಬೆಳಿಗ್ಗೆ ಸದನದಲ್ಲಿ ಅನುಮೊದನೆ ದೊರೆಯಿತು. ಬಳಿಕ ಮಧ್ಯಾಹ್ನ ಸಭೆ ಸೇರಿದಾಗ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನೀಡಿರುವ ಹೇಳಿಕೆ ಸದ್ದು ಮಾಡಿತು. ನಂತರ ವಿಧಾನಪರಿಷತ್ತಿನಲ್ಲಿ ಬಜೆಟ್ ಅಂಗೀಕಾರಾಗಿರುವುದನ್ನು ಸದನದ ಗಮನಕ್ಕೆ ತಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು ಅನಿರ್ದಿಷ್ಟವಧಿಗೆ ಮುಂದೂಡಿದರು. 

ಇಂದು ಬೆಳಿಗ್ಗೆ ಸದನ ಸೇರಿದಾಗ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿ ಘೋಷಣೆ ಕೂಗಿದರು. ಧರಣಿ, ಪ್ರತಿಭಟನೆಗಳ ನಡುವೆಯೇ ಹಣಕಾಸು ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಜೆಟ್ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದರು. ಕಳೆದ ಒಂದು ವರ್ಷದಲ್ಲಿ ಕೋವಿಡ್-19 ನಿಂದಾಗಿ ಸ್ಥಗಿತಗೊಂಡಿದ್ದ ಆರ್ಥಿಕತೆ ಇದೀಗ ಚೇತರಿಸಿಕೊಳ್ಳುತ್ತಿದೆ. ಹೊಸ ಸವಾಲುಗಳನ್ನು ಎದುರಿಸುವ ಅನಿವಾರ್ಯತೆಯಲ್ಲಿ ನಾವಿದ್ದು, ಸೋಂಕು ನಿಯಂತ್ರಣದ ಜೊತೆಗೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳನ್ನೂ ಸಹ ಮುಂದುವರಿಸುತ್ತೇವೆ ಎಂದರು. ಕೊರೋನಾ ಸಂಕಷ್ಟದಿಂದ ತತ್ತರಿಸಿದ ಆರ್ಥಿಕ ಪರಿಸ್ಥಿತಿ ನಡುವೆಯೇ ತಾವು ಅಭಿವೃದ್ದಿ ಪರ ಬಜೆಟ್ ಮಂಡಿಸಿರುವುದಾಗಿ ಯಡಿಯೂರಪ್ಪ  ಸಮರ್ಥಿಸಿಕೊಂಡರು. ಕಾಂಗ್ರೆಸ್ ಸದಸ್ಯರ ಪ್ರತಿಭಟನೆ, ಗದ್ದಲದ ನಡುವೆ ೨೦೨೧-೨೨ನೇ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ, ಸರ್ಕಾರ ಹೆಚ್ಚಿನ ಸಾಲ ಮಾಡಬೇಕಾಗಿ ಬಂದಿದೆ. ಆದರೆ ಅದು ವಿತ್ತೀಯ ನಿರ್ವಹಣೆ ಕಾಯ್ದೆ ವಿಧಿಸಿದ ಮಿತಿಯಲ್ಲಿದೆ ಎಂದು ಹೇಳಿದರು. ಕ್ರಮೇಣ ಆರ್ಥಿಕ ಬೆಳವಣಿಗೆ ಚೇತರಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಭರವಸೆ ವ್ಯಕ್ತಪಡಿಸಿದರು.ಬಳಿಕ ಮೂರನೇ ಕಂತಿನ ಅನುದಾನದ ಬೇಡಿಕೆಗಳನ್ನು ಮಂಡಿಸಿದರು.

ಧರಣಿ ನಡುವೆಯೇ ಅನುದಾನದ ಬೇಡಿಕೆಗಳು, 2021-22ನೇ ಸಾಲಿನ ಬಜೆಟ್ ಗೆ ಸದನದಲ್ಲಿ ಅನುಮೋದನೆ ನೀಡಲಾಯಿತು. ಸದನದಲ್ಲಿ ಗದ್ದಲ ಉಂಟು ಮಾಡಿದ ಸದಸ್ಯರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನದಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಗಂಭೀರತೆಯಿಂದ ವರ್ತಿಸಬೇಕು. ಈ ರೀತಿ ಗದ್ದಲ ಉಂಟು ಮಾಡುವುದು ಸರಿಯಲ್ಲ ಎಂದು ಹೇಳಿದರು. ಸಂಸದೀಯ ಕಾರ್ಯಕಲಾಪಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ. ಭಿನ್ನಾಭಿಪ್ರಾಯಗಳಿದ್ದರೆ ಸದನದ ಹೊರಗೆ ಬಗೆಹರಿಸಿಕೊಳ್ಳಬೇಕು ಎಂದರು.

ಬಳಿಕ, ಮುಖ್ಯಮಂತ್ರಿ ಅವರು ಕರ್ನಾಟಕ ಸಾರ್ವಜನಿಕ ಸಂಗ್ರಹ ವಿಧೇಯಕವನ್ನು ಮಂಡಿಸಿದರು. ಧರಣಿ ನಡುವೆಯೇ ಈ ಮಸೂದೆಗೆ ಸದನ ಅನುಮೋದನೆ ನೀಡಿತು. ಬಳಿಕ ಸಭಾಧ್ಯಕ್ಷರು  ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು. ಭೋಜನ ವಿರಾಮದ ನಂತರವೂ ಗದ್ದಲ ಕೋಲಾಹಲ ಉಂಟಾದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು

ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಕುರಿತ ಸಿ.ಡಿ ಪ್ರಕರಣ ಸಂಬಂಧ ಚರ್ಚೆಗೆ ಪಟ್ಟು ಹಿಡಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿದರು. ಇದರ ಪರಿಣಾಮ ವಿಧಾನ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವದಿಗೆ ಮುಂದೂಡಲಾಯಿತು.

ಹಲವು ಸದನ ಸಮಿತಿಗಳ ಕಾಲಾವಕಾಶ ವಿಸ್ತರಣೆ

ರಾಜ್ಯದಲ್ಲಿರುವ ಕ್ಲಬ್‍ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಿ ವರದಿ ನಿಡಲು ರಚಿಸಲಾಗಿರುವ ಸದನ ಸಮಿತಿಯ ವರದಿ ಸಲ್ಲಿಸಲು 6 ತಿಂಗಳ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.

ವಿಶೇಷ ಸದನ ಸಮಿತಿಯ ಅಧ್ಯಕ್ಷ ಎನ್. ರವಿಕುಮಾರ್ ಅವರು ಕಾಲಾವಕಾಶ ಕೋರಿ ವಿಧಾನಪರಿಷತ್‍ನಲ್ಲಿ ಸಲ್ಲಿಸಿದ ಪ್ರಸ್ತಾವವನ್ನು ಎಲ್ಲಾ ಸದಸ್ಯರ ಅನುಮತಿ ನೀಡಿದ ನಂತರ ಕಾಲಾವಕಾಶ ವಿಸ್ತರಿಸಲಾಯಿತು.


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp