ರಾಜ್ಯದಲ್ಲಿ ಬಂದ್ ಬದಲು ಪ್ರತಿಭಟನೆ: ನೈತಿಕ ಬೆಂಬಲ ನೀಡಲು ರೈತ ಸಂಘಟನೆಗಳ ನಿರ್ಧಾರ
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಶುಕ್ರವಾರದ ಭಾರತ್ ಬಂದ್ ರಾಜ್ಯದಲ್ಲಿ ಪ್ರತಿಭಟನೆ ಮಟ್ಟಕ್ಕೆ ಸೀಮಿತವಾಗಲಿದೆ. ಏಕೆಂದರೆ, ರಾಜ್ಯದ ಪ್ರಮುಖ ರೈತ ಸಂಘಟನೆಗಳು ಸೇರಿದಂತೆ ಬಹುತೇಕ ಸಂಘಟನೆಗಳು ಬಂದ್'ಗೆ ನೈತಿಕ ಬೆಂಬಲ ನೀಡಲು ನಿರ್ಧರಿಸಿವೆ.
Published: 26th March 2021 07:40 AM | Last Updated: 26th March 2021 12:48 PM | A+A A-

ರಾಕೇಶ್ ಟಿಕಾಯತ್
ಬೆಂಗಳೂರು: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಶುಕ್ರವಾರದ ಭಾರತ್ ಬಂದ್ ರಾಜ್ಯದಲ್ಲಿ ಪ್ರತಿಭಟನೆ ಮಟ್ಟಕ್ಕೆ ಸೀಮಿತವಾಗಲಿದೆ. ಏಕೆಂದರೆ, ರಾಜ್ಯದ ಪ್ರಮುಖ ರೈತ ಸಂಘಟನೆಗಳು ಸೇರಿದಂತೆ ಬಹುತೇಕ ಸಂಘಟನೆಗಳು ಬಂದ್'ಗೆ ನೈತಿಕ ಬೆಂಬಲ ನೀಡಲು ನಿರ್ಧರಿಸಿವೆ.
ಕೆಲ ಸಂಘಟನೆಗಳು ಬಂದ್ ಪ್ರಯುಕ್ತ ಪ್ರತಿಭಟನೆ, ಮೆರವಣಿಗೆ, ರ್ಯಾಲಿ ನಡೆಸಲು ನಿರ್ಧರಿಸಿವೆ. ಇನ್ನು ಬಸ್, ಆಟೋ, ರೈಲು, ಮೆಟ್ರೋ ರೈಲು, ವಿಮಾನ, ಸರಕು ಸಾಗಣೆ ವಾಹನ, ಅಗತ್ಯ ವಸ್ತುಗಳ ಸಾಗಣೆ ವಾಹನಗಳ ಸಂಚಾರ ಎಂದಿನಂತೆ ಮುಂದುವರೆಯಲಿವೆ.
ಇನ್ನು ವ್ಯಾಪಾರಿಗಳು, ಉದ್ದಮಿಗಳು, ಕಾರ್ಖಾನೆಗಳು, ಅಂಗಡಿ-ಮುಂಗಟ್ಟುಗಳು, ಹೋಟೆಲ್, ರೆಸ್ಟೋರೆಂಟ್, ಚಿತ್ರಮಂದಿರ, ಮಾಲ್'ಗಳು, ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಕಳೆದ 6 ತಿಂಗಳುಗಳಿಂದ ರಾಜ್ಯದಲ್ಲಿ ಮೂರು-ನಾಲ್ಕು ಬಾರಿ ಬಂದ್ ಆಚರಣೆ ಮಾಡಲಾಗಿದೆ. ಶುಕ್ರವಾರದ ಭಾರತ್ ಬಂದ್ ಬಗ್ಗೆ ಪೂರ್ವಯೋಜಿತವಾಗಿ ಸಂಘಟನೆಗಳೊಂದಿಗೆ ಚರ್ಚಿಸದಿರುವುದರಿಂದ ಯಶಸ್ವಿ ಬಂದ್ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ಸಂಘಟನೆಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ತಿದ್ದುಪಡಿ ಕಾಯ್ದೆಗಳ ಅಣಕು ಶವಯಾತ್ರೆ ನಡೆಸಲಿದ್ದೇವೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಇದೇ ವೇಳೆ ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ಸರ್ಕಾರ ರಾಜ್ಯದಲ್ಲಿ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು, ರೈತರನ್ನು ಮೌನವಾಗಿಸುವ ಸಲುವಾಗಿ ಪೊಲೀಸರನ್ನು ಬಳಕೆ ಮಾಡಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರತೀಯೊಬ್ಬರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ತಿಳಿಸಿದ್ದಾರೆ.