ಗ್ರಾಮಗಳ ಮೇಲೆ ಆನೆಗಳ ದಾಳಿ ತಡೆಯಲು ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಾಣ: ಅರಣ್ಯ ಇಲಾಖೆಯ 'ಹಳೇ' ಮಾಸ್ಟರ್ ಪ್ಲಾನ್

ಗ್ರಾಮಗಳ ಮೇಲೆ ಆನೆಗಳ ದಾಳಿ ತಡೆಯಲು ಅರಣ್ಯ ಇಲಾಖೆ ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಾಣಕ್ಕೆ ಮುಂದಾಗಿದ್ದು, ಅರಣ್ಯ ಇಲಾಖೆಯ ಈ 'ಹಳೇ' ಮಾಸ್ಟರ್ ಪ್ಲಾನ್ ನಿಂದಾಗಿ ಅರಣ್ಯಗಳ ಸಮೀಪದ ಗ್ರಾಮಸ್ಥರು ನಿಟ್ಟಿಸಿರು ಬಿಡುವಂತಾಗಿದೆ. 

Published: 26th March 2021 08:39 PM  |   Last Updated: 26th March 2021 08:39 PM   |  A+A-


rail barricades

ರೈಲ್ವೇ ಬ್ಯಾರಿಕೇಡ್

The New Indian Express

ಹಾಸನ: ಗ್ರಾಮಗಳ ಮೇಲೆ ಆನೆಗಳ ದಾಳಿ ತಡೆಯಲು ಅರಣ್ಯ ಇಲಾಖೆ ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಾಣಕ್ಕೆ ಮುಂದಾಗಿದ್ದು, ಅರಣ್ಯ ಇಲಾಖೆಯ ಈ 'ಹಳೇ' ಮಾಸ್ಟರ್ ಪ್ಲಾನ್ ನಿಂದಾಗಿ ಅರಣ್ಯಗಳ ಸಮೀಪದ ಗ್ರಾಮಸ್ಥರು ನಿಟ್ಟಿಸಿರು ಬಿಡುವಂತಾಗಿದೆ. 

ಹೌದು.. ಆನೆಗಳು ಅರಣ್ಯ ಪ್ರದೇಶದಿಂದ ಹಾದಿ ತಪ್ಪದಂತೆ ತಡೆಯಲು ಅರಣ್ಯ ಇಲಾಖೆ ಹಾಸನ ಮತ್ತು ಕೊಡಗು ಗಡಿ ಗ್ರಾಮಗಳಲ್ಲಿ ಸುಮಾರು 4.5 ಕಿ.ಮೀ.ಗಿಂತಲೂ ಹೆಚ್ಚು ರೈಲ್ವೇ ಹಳಿ ಬ್ಯಾರಿಕೇಡ್ ಗಳನ್ನು ನಿರ್ಮಾಣ ಮಾಡಲಿದೆ. ಇದು ಮೊದಲ ಹಂತದ ಯೋಜನೆಯಾಗಿದ್ದು ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯನ್ನು ಹೆಚ್ಚಿಸಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಹಾಸನ ಮತ್ತು ಮಡಿಕೇರಿ ಜಿಲ್ಲೆಗಳನ್ನು ಬೇರ್ಪಡಿಸುವ ಗಡಿ ಗ್ರಾಮಗಳಾದ ನಾಗವಾರ ಮತ್ತು ಪುರಬೈರವನಹಳ್ಳಿಗಳ ನಡುವೆ ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಇದು ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ ಅರಣ್ಯ ಮತ್ತು ಹಿನ್ನೀರಿನ ಪಕ್ಕದ ಹಳ್ಳಿಗಳಿಗೆ ಆನೆಗಳು ಪ್ರವೇಶಿಸುವುದನ್ನು ತಡೆಯುತ್ತದೆ. ಪ್ರಸ್ತುತ ಈ ಬ್ಯಾರಿಕೇಡ್ ಗಳನ್ನು 4 ರಿಂದ 5 ಕಿಮೀ ವರೆಗೂ ಹಾಕಲಾಗಿದ್ದು, ಇದಕ್ಕಾಗಿ ಸುಮಾರು  5.28 ಕೋಟಿ ರೂ.ಗಳನ್ನು ವೆಚ್ಚ ತಗಲುತ್ತದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಸರ್ಕಾರ 4.65 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.  ಮುಂದಿನ ದಿನಗಳಲ್ಲಿ ಹಂತ ಹಂತವಾಗಿ 34 ಕಿ.ಮೀ.ಗೆ ವಿಸ್ತರಿಸಲು ಅರಣ್ಯ ಇಲಾಖೆ ಪ್ರಸ್ತಾಪಿಸಿದೆ. ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಬಸವರಾಜ್ ಹೇಳಿದ್ದಾರೆ. 

ಆಲೂರು ತಾಲ್ಲೂಕಿನ ಮಡಿಹಳ್ಳಿ ಮತ್ತು ಆನೆ ಕಾರಿಡಾರ್ ಬಳಿ ಆನೆ ಶಿಬಿರಕ್ಕಾಗಿ ದಶಕಗಳಷ್ಟು ಹಳೆಯ ಯೋಜನೆಗಳು ಇನ್ನೂ ಬಾಕಿ ಇರುವುದರಿಂದ ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ. ಇನ್ನು ಹಾಸನ ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಲ್ಲಿ 72 ಜನರು ಆನೆದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಅಂತೆಯೇ 52 ಆನೆಗಳು ವಿವಿಧ ಸಂದರ್ಭಗಳಲ್ಲಿ ಸಾವನ್ನಪ್ಪಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಗೆ ಲಭ್ಯವಾದ ಅಂಕಿಅಂಶಗಳಿಂದ ತಿಳಿದುಬಂದಿದೆ.

ಇನ್ನು ಅರಣ್ಯ ಇಲಾಖೆಯ ಕ್ರಮವನ್ನು ಸ್ಥಳೀಯ ರೈತರು ಮತ್ತು ನಿವಾಸಿಗಳು ಸ್ವಾಗತಿಸಿದ್ದು, ಅರಣ್ಯ ಇಲಾಖೆ ಯೋಜನೆಯನ್ನು ಸಮಯಕ್ಕೆ ಅನುಗುಣವಾಗಿ ಪೂರ್ಣಗೊಳಿಸಬೇಕು ಮತ್ತು ಸರ್ಕಾರವು ಸಕಾಲದಲ್ಲಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಆನೆ ಶಿಬಿರ ಮತ್ತು ಆನೆ ಕಾರಿಡಾರ್‌ಗಾಗಿ ಬಹುಕಾಲದಿಂದ ಬಾಕಿ ಇರುವ ಯೋಜನೆಗಳನ್ನು ಸರ್ಕಾರ ಬೇಗನೆ ಪೂರ್ಣಗೊಳಿಸಬೇಕು ಎಂದು ಕಾಫಿ ತೋಟಗಾರ ಜಗನ್ನಾಥ್ ಹೇಳಿದ್ದಾರೆ. ಅಂತೆಯೇ ಬಾಕಿ ಇರುವ ಯೋಜನೆಗಳು ಪೂರ್ಣಗೊಂಡರೆ ಇಲಾಖೆ ಮನುಷ್ಯ-ಆನೆ ಸಂಘರ್ಷಕ್ಕೆ ಅಂತ್ಯ ಹಾಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  

ಈ ಹಿಂದೆ ಹಾಸನ ಜಿಲ್ಲೆಯ ಆಲೂರು ಮತ್ತು ಸಕಲೇಶಪುರ ತಾಲ್ಲೂಕುಗಳಲ್ಲಿ ಆನೆ ದಾಳಿ ಕುರಿತಂತೆ ಸ್ಥಳೀಯರು ಮತ್ತು ಸಂತ್ರಸ್ಥರು ಸರಣಿ ಪ್ರತಿಭಟನೆಗಳು, ಧರಣಿ ಮತ್ತು ರಸ್ತೆ ತಡೆಗಳನ್ನು ನಡೆಸಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.   

ಬ್ಯಾರಿಕೇಡ್ ಅನ್ನೇ ಮುರಿದಿದ್ದ ಚಾಲಾಕಿ ಆನೆಗಳು
ಇನ್ನು ಆನೆಗಳು ಗ್ರಾಮಗಳನ್ನು ಪ್ರವೇಶಿಸಬಾರದು ಎಂದು ಅರಣ್ಯ ಇಲಾಖೆ ಈ ಹಿಂದೆ ಅಳವಡಿಸಿದ್ದ ರೈಲ್ವೇ ಹಳಿ ಬ್ಯಾರಿಕೇಡ್ ಗಳನ್ನೇ ಚಾಲಾಕಿ ಆನೆಗಳು ಕಿತ್ತೆಸೆದಿದ್ದವು. ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಮೀಪದ ವೀರನಹೊಸಹಳ್ಳಿ, ಕೊಲ್ಲಾವಿಗೆ ಮತ್ತು ಮುದುಗುನೂರ್ ಗ್ರಾಮಗಳಲ್ಲಿ ಆನೆಗಳು ಬ್ಯಾರಿಕೇಡ್ ಗಳನ್ನು ಕಿತ್ತೆಸೆದಿದ್ದ ಪ್ರಕರಣಗಳು ಈ ಹಿಂದೆ ವರದಿಯಾಗಿತ್ತು.  


Stay up to date on all the latest ರಾಜ್ಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp