ಆರೋಗ್ಯ ಸಚಿವ ಸುಧಾಕರ್ ವಿರುದ್ಧದ ದೂರು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುತ್ತದೆ: ಸ್ಪೀಕರ್ ಕಾಗೇರಿ
ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಸಲ್ಲಿಸಲಾಗಿರುವ ದೂರನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಗುರುವಾರ ಹೇಳಿದ್ದಾರೆ.
Published: 26th March 2021 08:55 AM | Last Updated: 26th March 2021 08:55 AM | A+A A-

ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು: ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಸಲ್ಲಿಸಲಾಗಿರುವ ದೂರನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಗುರುವಾರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಶಾಸಕರ ಜವಾಬ್ದಾರಿ. ಸದಸ್ಯರು ತುರ್ತು ಸಂದರ್ಭದಲ್ಲಿ ಗೈರಾಗುವುದು ಬೇರೆ ವಿಚಾರ. ಆದರೆ, ಪ್ರತಿನಿತ್ಯದ ಕಾರ್ಯಕ್ರಮಗಳ ಹೆಸರಿನಲ್ಲಿ ಗೈರಾಗುವುದು ಒಳ್ಳೆಯದಲ್ಲ. ದಿನನಿತ್ಯದ ಕಾರ್ಯಕ್ರಮದ ಹೆಸರಲ್ಲಿ ಗೈರು ಹಾಜರಾಗುತ್ತಿರುವುದು ಹೆಚ್ಚಾಗುತ್ತಿದೆ. ಎಲ್ಲರಿಗೂ ಪ್ರತಿನಿತ್ಯ ಕಾರ್ಯಕ್ರಮಗಳು ಇರುತ್ತವೆ. ಅದನ್ನು ಮುಂದಿಟ್ಟುಕೊಂಡು ಸದನಕ್ಕೆ ಗೈರಾಗುವ ಪ್ರವೃತ್ತಿ ಒಳ್ಳೆಯದಲ್ಲ. ಇದು ಪ್ರಜಾತಂತ್ರ ವ್ಯವಸ್ಥೆಗೂ ಮಾರಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಭಾದ್ಯಕ್ಷನಾದ ಬಳಿಕ ಸಂಸದೀಯ ವ್ಯವಸ್ಥೆಗಳಿಗೆ ಮೌಲ್ಯ ತುಂಬುವ ಪ್ರಯತ್ನ ಮಾಡಿದ್ದೇನೆ. ಸಚಿವರು ಶಾಸಕರು ಪಾಲ್ಗೊಳ್ಳುವಿಕೆ ಗಮನಿಸಿದಾಗ ಅವರು ಇನ್ನೂ ಉತ್ತಮವಾಗಿ ಸ್ಪಂದಿಸಬಹುದಿತ್ತು. ಸಚಿವರು, ಶಾಸಕರು, ಅಧಿಕಾರಿಗಳಿಗೆ ಸ್ವಯಂ ಜಾಗೃತಿ ಮೂಡಬೇಕು. ಆಗ ಮಾತ್ರ ಕಲಾಪಕ್ಕೆ ಅರ್ಥ ಬರಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಪಕ್ಷಗಳ ನಡೆಯ ಬಗ್ಗೆ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಸದನವನ್ನು ರಾಜಕೀಯ ವೇದಿಕೆಯಾಗಿ ಮಾಡುವ ಮನಸ್ಥಿತಿಯಿಂದ ಹೊರ ಬರಬೇಕು. ಸದನದ ಹೊರಗಡೆ ರಾಜಕೀಯ ಚಟುವಟಿಕೆಯನ್ನು ತಮ್ಮ ಇಚ್ಛೆಗೆ ತಕ್ಕಂತೆ ನಡೆಸಿಕೊಳ್ಳಬಹುದು. ಆದರೆ, ಸದನದೊಳಗೆ ಚರ್ಚೆ, ಸಂವಾದ ತರ್ಕಕ್ಕೆ ಇರುವಂತಹ ಅವಕಾಶಗಳನ್ನು ಮೊಟಕುಗೊಳಿಸುವುದು ಯಾರಿಂದಲೂ ಆಗಬಾರದು. ಆ ರೀತಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪ್ರತಿಪಕ್ಷದ ಮೇಲಿರುತ್ತದೆ. ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷದ ಪಾತ್ರ ಅತ್ಯಂತ ನೋವು ತಂದಿದೆ. ಆಡಳಿತ ಪಕ್ಷದ ಸಭಾನಾಯಕರಿಗೆ ಇರುವಷ್ಟೇ ಜವಾಬ್ದಾರಿಯೂ ಪ್ರತಿಪಕ್ಷಕ್ಕೂ ಇರುತ್ತದೆ. ಸಂಸದೀಯ ವ್ಯವಸ್ಥೆಗೆ ಬಲ ಬರಬೇಕಾದರೆ ಪ್ರತಿಪಕ್ಷವೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದಿದ್ದಾರೆ.
ಇದೇ ವೇಳೆ ಸಚಿವ ಸುಧಾಕರ್ ವಿರುದ್ದ ಬಂದಿರುವ ದೂರು ಕುರಿತು ಮಾತನಾಡಿ, ಸುಧಾಕರ್ ಆಕ್ಷೇಪಾರ್ಹ ಹೇಳಿಕೆ ಸರಿಯಲ್ಲ. ಈ ಸಂಬಂಧ ಕಾಂಗ್ರೆಸ್ ನಿಯೋಗ ಪತ್ರ ಬರೆದಿದ್ದು, ಈ ನಿಟ್ಟಿನಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತೇನೆಂದು ತಿಳಿಸಿದ್ದಾರೆ.
ಸುಧಾಕರ್ ಕೂಡ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಅವರ ಸ್ಪಷ್ಟೀಕರಣವನ್ನೂ ಪರಿಗಣಿಸಲಾಗುವುದು. ನನಗೆ ಯಾವ ರೀತಿಯ ಕ್ರಮ ಕೈಗೊಳ್ಳುವ ಅವಕಾಶ ಇದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸಂಸದೀಯ ವ್ಯವಸ್ಥೆಯಡಿ, ಒಂದು ಚೌಕಟ್ಟಿನಲ್ಲಿ ನಾನು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇನೆಂದು ಹೇಳಿದ್ದಾರೆ.