ಜನಸ್ನೇಹಿ ಬಜೆಟ್: ಬಿಬಿಎಂಪಿ ಬಜೆಟ್ ಸ್ವಾಗತಿಸಿದ ಜನತೆ
ಕೋವಿಡ್ ಸಂಕಷ್ಟ ಕಾಲದಲ್ಲೂ ಜನರ ಮೇಲೆ ಯಾವುದೇ ರೀತಿಯ ತೆರಿಗೆ ವಿಧಿಸದ ಬೃಹತ್ ಬೆಂಗಳೂರು ಮಮಹಾನಗರ ಪಾಲಿಕೆ (ಬಿಬಿಎಂಪಿ) ಜನಪರ ಮತ್ತು ಜನಸ್ನೇಹಿ ಬಜೆಟ್ ಮಂಡನೆ ಮಾಡಿದ್ದಾರೆಂದು ನಗರದ ಜನತೆ ಬಿಬಿಎಂಪಿ ಬಜೆಟ್'ನ್ನು ಸ್ವಾಗತಿಸಿದ್ದಾರೆ.
Published: 28th March 2021 08:07 AM | Last Updated: 28th March 2021 02:23 PM | A+A A-

ಬಜೆಟ್ ಪುಸ್ತಕ ಬಿಡುಗಡೆ ಮಾಡುತ್ತಿರುವ ಬಿಬಿಎಂಪಿ ಆಯುಕ್ತ
ಬೆಂಗಳೂರು: ಕೋವಿಡ್ ಸಂಕಷ್ಟ ಕಾಲದಲ್ಲೂ ಜನರ ಮೇಲೆ ಯಾವುದೇ ರೀತಿಯ ತೆರಿಗೆ ವಿಧಿಸದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜನಪರ ಮತ್ತು ಜನಸ್ನೇಹಿ ಬಜೆಟ್ ಮಂಡನೆ ಮಾಡಿದ್ದಾರೆಂದು ನಗರದ ಜನತೆ ಬಿಬಿಎಂಪಿ ಬಜೆಟ್'ನ್ನು ಸ್ವಾಗತಿಸಿದ್ದಾರೆ.
ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ನೇತೃತ್ವದಲ್ಲಿ ನಿನ್ನೆಯಷ್ಟೇ ರೂ. 9291.33 ಕೋಟಿ ಮೊತ್ತದ ಬಜೆಟ್ ಮಂಡಿಸಲಾಯಿತು.
ಈ ಹಿಂದಿನ ವರ್ಷಗಳ ಬಜೆಟ್ಗಳಿಗೆ ಹೋಲಿಸಿದರೆ ವಾಸ್ತವಕ್ಕೆ ತುಸು ಹತ್ತಿರವಿರುವ ಈ ಬಜೆಟ್ನಲ್ಲಿ ಅನುದಾನ ಹಂಚಿಕೆ ವೇಳೆ ವಿಕೇಂದ್ರೀಕರಣ ನೀತಿಯ ಮೊರೆ ಹೋಗಿರುವುದು ವಿಶೇಷವೆಂದೇ ಹೇಳಬಹುದು.
ಈ ಬಾರಿಯ ಬಜೆಟ್'ನಲ್ಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡದೆ, ನಿರ್ವಹಣಾ ಕಾಮಗಾರಿಗಳಿಗೆ ಮಾತ್ರ ಅನುದಾನ ಹಂಚಿಕೆ ಮಾಡಲಾಗಿದೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ. ದೀರ್ಘಕಾಲದಿಂದ ಕುಂಟುತ್ತಾ ಸಾಗಿರುವ ಮೇಲುರಸ್ತೆಗಳ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
ವಾರ್ಡ್, ವಲಯ ಮಟ್ಟದಲ್ಲಿ ಆರ್ಥಿಕ ನಿರ್ವಹಣೆ ಮತ್ತು ಹೊಣೆಗಾರಿಕೆಯನ್ನು ವಿಕೇಂದ್ರೀಕರಣಗೊಳಿಸಲಾಗಿದೆ. ಪಾಲಿಕೆಯಲ್ಲಿ ಹಾಲಿ ಇರುವ ಕಾಮಗಾರಿ ಸಂಖ್ಯೆ ನೀಡುವ ಪದ್ಧತಿಯ ಪರಿಷ್ಕರಣೆ ಮತ್ತು ಎಲ್ಲ ರೀತಿಯ ಕಾಮಗಾರಿಗಳನ್ನು ಜಾಗೃತ ಕೋಶದ ಮೂಲಕ ಸ್ಥಳ ಪರಿಶೀಲನೆ ನಡೆಸುವ ವ್ಯವಸ್ಥೆಯನ್ನು ಏ.1ರಿಂದ ಜಾರಿಗೆ ತರಲಾಗುತ್ತಿದೆ. ಈ ಮೂಲಕ ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ತರುವ ಮಂತ್ರವನ್ನು ಪಠಿಸಲಾಗಿದೆ.
ಬಿಬಿಎಂಪಿ ಕಾಯಿದೆ-2020ರಂತೆ ವಲಯ ಮಟ್ಟದಲ್ಲಿ ಹೆಚ್ಚಿನ ಅಧಿಕಾರ ಹಂಚಿಕೆ ಮತ್ತು ವಿಕೇಂದ್ರೀಕರಣಗೊಳಿಸಿರುತ್ತದೆ. ಅಂದಾಜು 2 ಸಾವಿರ ಕೋಟಿ ರೂ. ಸಂಪನ್ಮೂಲಗಳ ಹಂಚಿಕೆಯ ಆಡಳಿತಾತ್ಮಕ ನಿರ್ಧಾರಗಳನ್ನು ವಲಯ ಮಟ್ಟದಲ್ಲಿಯೇ ಕೈಗೊಳ್ಳಲು ಆರ್ಥಿಕ ಅಧಿಕಾರ ನೀಡಲಾಗಿದೆ.
ಈ ನಡುವೆ ಬಿಬಿಎಂಪಿ ಬಜೆಟ್'ನ್ನು ನಗರದ ಜನತೆಗೆ ಸ್ವಾಗಸಿತಿಸಿದ್ದು, ಇದೊಂದು ಜನಸ್ನೇಹಿ ಬಜೆಟ್ ಎಂದು ಹೇಳಿದ್ದಾರೆ. ಆದರೆ, ತಜ್ಞರು ಮಾತ್ರ, ಹಿಂದಿನ ಪ್ರಸ್ತಾಪ, ಯೋಜನೆಗಳನ್ನೇ ಮುಂದುವರೆಸಲಾಗಿದ್ದು, ಯಾವುದೇ ಹೊಸ ಘೋಷಣೆಗಳನ್ನು ಮಾಡಲಾಗಿಲ್ಲ ಎಂದು ಹೇಳಿದ್ದಾರೆ.
ಎಲ್ಲಾ ಕ್ಷೇತ್ರಗಳನ್ನೂ ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ಬಜೆಟ್ ಮಂಡನೆ ಮಾಡಿದ್ದು, ಚುನಾಯಿತ ಪ್ರತಿನಿಧಿಗಳೂ ಕೂಡ ಇದರಲ್ಲಿ ಭಾಗಿಯಾಗಬೇಕಿತ್ತು. ಆದರೆ, ಬಜೆಟ್ ಮಂಡನೆ ವೇಳೆ ಚುನಾಯಿತ ಪ್ರತಿನಿಧಿಗಳು ಕಾಣದಿರುವುದು ಬೇಸರ ತರಿಸಿತು ಎಂದು ನಗರದ ನಿವಾಸಿಯೊಬ್ಬರು ಹೇಳಿದ್ದಾರೆ.
ಜನಾಗ್ರಹ ಎಂಬ ಎನ್ಜಿಒದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ್ ಅಲಾವಿಲ್ಲಿ ಎಂಬುವವರು ಮಾತನಾಡಿ, ಕಳೆದ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದರೆ, ಆ ಬಾರಿಯದ್ದು ವಾಸ್ತವಿಕ ಬಜೆಟ್ ಆಗಿದೆ. ಬಿಬಿಎಂಪಿ ಹೊಸ ಕಾಯ್ದೆಯು ವಲಯವಾರು ಮಂಡಳಿಯನ್ನು ಪರಿಚಯಿಸಿದ್ದು, ಬಜೆಟ್ ನಲ್ಲಿ ಮೀಸಲಿಟ್ಟಿರುವ ಅನುದಾನ ಈ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆಸ್ತಿ ತೆರಿಗೆಯಲ್ಲಿ ಪಾಲನ್ನು ವಾರ್ಡ್ ಸಮಿತಿಗಳಿಗೆ ನೀಡುವುದು ಸಣ್ಣದು ಎಂದೆನಿಸಬಹುದು. ಆದರೆ, ಪ್ರಗತಿ ದೊಡ್ಡದ್ದಾಗಿರುತ್ತದೆ. ಫುಟ್ಪಾತ್ ನಿರ್ವಹಣೆಗಾಗಿ ಪ್ರತಿ ವಾರ್ಡ್ಗೆ ಹಣ ಹಂಚಿಕೆ ಮಾಡುತ್ತಿರುವುದು ಉತ್ತಮವಾಗಿದೆ ಎಂದು ಹೇಳಿದ್ದಾರೆ.