ಕಬ್ಬಿನ ಗದ್ದೆಯಿಂದ ವ್ಯಕ್ತಿ ಪರಾರಿಯಾಗುತ್ತಿರುವ ಚಿತ್ರ
ಕಬ್ಬಿನ ಗದ್ದೆಯಿಂದ ವ್ಯಕ್ತಿ ಪರಾರಿಯಾಗುತ್ತಿರುವ ಚಿತ್ರ

ಹಾವೇರಿ: ಕೋವಿಡ್ ಆಸ್ಪತ್ರೆ ಚಿಕಿತ್ಸೆ ಕುರಿತು ವದಂತಿ; ಆ್ಯಂಬುಲೆನ್ಸ್ ಬರುತ್ತಿದ್ದಂತೆ ಮನೆಯಿಂದ ಕಾಲ್ಕಿತ್ತ ಸೋಂಕಿತ ವ್ಯಕ್ತಿ!

ಹಾವೇರಿಯ ತಾಂಡಾ ಗ್ರಾಮದಲ್ಲಿ ಸೋಂಕಿಗೊಳಗಾಗಿದ್ದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಕರೆದೊಯ್ಯಲು ಮನೆ ಬಳಿ ಆ್ಯಂಬುಲೆನ್ಸ್ ಬಂದಿದ್ದು, ಆ್ಯಂಬುಲೆನ್ಸ್ ನೋಡುತ್ತಿದ್ದಂತೆಯೇ ಭೀತಿಗೊಳಗಾದ ವ್ಯಕ್ತಿ ಮನೆಯಿಂದ ಕಾಲ್ಕಿತ್ತಿರುವ ಘಟನೆ ನಡೆದಿದೆ. 

ಹಾವೇರಿ: ಕೋವಿಡ್ ಆಸ್ಪತ್ರೆ ಚಿಕಿತ್ಸೆ ಕುರಿತು ಹಳ್ಳಿಗಳಲ್ಲಿ ಇಲ್ಲಸಲ್ಲದ ವದಂತಿಗಳು ಹಬ್ಬಿದ್ದು, ಇದರಿಂದ ಸೋಂಕಿತಗೊಳಗಾದ ಜನರು ಆಸ್ಪತ್ರೆಗಳಿಗೆ ದಾಖಲಾಗಲು ಹಿಂದೇಟು ಹಾಕುತ್ತಿದ್ದಾರೆ. ಹಾವೇರಿಯ ತಾಂಡಾ ಗ್ರಾಮದಲ್ಲಿ ಸೋಂಕಿಗೊಳಗಾಗಿದ್ದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಕರೆದೊಯ್ಯಲು ಮನೆ ಬಳಿ ಆ್ಯಂಬುಲೆನ್ಸ್ ಬಂದಿದ್ದು, ಆ್ಯಂಬುಲೆನ್ಸ್ ನೋಡುತ್ತಿದ್ದಂತೆಯೇ ಭೀತಿಗೊಳಗಾದ ವ್ಯಕ್ತಿ ಮನೆಯಿಂದ ಕಾಲ್ಕಿತ್ತಿರುವ ಘಟನೆ ನಡೆದಿದೆ. 

ಹಾವೇರಿ ತಾಂಡಾ ಗ್ರಾಮದಲ್ಲಿ 50 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿಗೊಳಗಾಗಿದ್ದರು. ಮಾಹಿತಿ ತಿಳಿದಿದ್ದ ಆರೋಗ್ಯಾಧಿಕಾರಿಗಳು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಮನೆ ಬಳಿ ಆ್ಯಂಬುಲೆನ್ಸ್ ನಲ್ಲಿ ತೆರಳಿದ್ದಾರೆ. ಆ್ಯಂಬುಲೆನ್ಸ್ ಬಂದ ಕೂಡಲೇ ಆತಂಕಕ್ಕೊಳಗಾದ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಬೇಕೆಂದು ಹೇಳಿ ಮನೆಯ ಹಿಂದೆ ಇರುವ ಕಬ್ಬಿನ ಗದ್ದೆಯಿಂದ ಪರಾರಿಯಾಗಿದ್ದಾನೆ. 

ವ್ಯಕ್ತಿ ಬರುವಿಕೆಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆಯ ಬಳಿಯೇ ಕಾದು ಕುಳಿತಿದ್ದಾರೆ. ಎಷ್ಟು ಹೊತ್ತಾದರೂ ವ್ಯಕ್ತಿ ಬಾರದಿದ್ದಾಗ ವ್ಯಕ್ತಿ ಪರಾರಿಯಾಗಿರುವ ವಿಚಾರ ತಿಳಿದಿದೆ. 

ಈ ಸುದ್ದಿ ಇಡೀ ಗ್ರಾಮಕ್ಕೆ ಹರಡಿದ್ದು, ಆತಂಕಕ್ಕೊಳಗಾದ ಗ್ರಾಮಸ್ಥರು ತಮ್ಮ ಮನೆಗಳ ಬಾಗಿಲು ಹಾಕಿದ್ದಾರೆ. ಆಶ್ಚರ್ಯಕರ ವಿಚಾರವೆಂದರೆ ಸೋಂಕಿತನ ಮನೆಯವರೂ ಕೂಡ ಮನೆ ಬಾಗಿಲು ಹಾಕಿಕೊಂಡಿದ್ದಾರೆ. 

ಕೋವಿಡ್ ಆಸ್ಪತ್ರೆ ಚಿಕಿತ್ಸೆ ಬಗ್ಗೆ ಗ್ರಾಮದಲ್ಲಿ ವದಂತಿಗಳು ಹಬ್ಬಿವೆ. ಹೀಗಾಗಿ ಆತಂಕಕ್ಕೊಳಗಾಗಿ ಪರಾರಿಯಾಗಿದ್ದಾರೆಂದು ಸೋಂಕಿತನ ಕುಟುಂಬಸ್ಥರು ಹೇಳಿದ್ದಾರೆ. 

ಮನೆಯಿಂದ ಕಾಲ್ಕಿತ್ತ ಸೋಂಕಿತ ವ್ಯಕ್ತಿ ಮೊಬೈಲ್ ಫೋನ್ ಕೂಡ ಸ್ವಿಟ್ಚ್ ಆಫ್ ಮಾಡಿಕೊಂಡಿದ್ದಾರೆ. ಬಳಿಕ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೋಂಕಿತ ವ್ಯಕ್ತಿಯ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವಂತೆ ಮನವೊಲಿಸಿದ್ದಾರೆ. ಬಳಿಕ ಸೋಂಕಿತ ವ್ಯಕ್ತಿ ಮತ್ತೊಂದು ಗ್ರಾಮದ ಹೊರಾಂಗಣದಲ್ಲಿರುವ ವಿಚಾರ ಅಧಿಕಾರಿಗಳಿಗೆ ತಿಳಿದುಬಂದಿದೆ. 

ಆಶ್ಚರ್ಯಕರವೆಂಬಂತೆ ಸೋಂಕಿತ ವ್ಯಕ್ತಿ ಮರು ದಿನ ಬೆಳಿಗ್ಗೆ ಗ್ರಾಮಕ್ಕೆ ಬಂದಿದ್ದು, ಆಸ್ಪತ್ರೆಗೆ ದಾಖಲಾಗಲು ಒಪ್ಪಿಗೆ ನೀಡಿದ್ದಾನೆ. ನಂತರ ವ್ಯಕ್ತಿಯನ್ನು ಆ್ಯಂಬುಲೆನ್ಸ್ ಮೂಲಕ ದಾಖಲು ಮಾಡಲಾಗಿದೆ. 

ಪ್ರಸ್ತುತ ಸೋಂಕಿತ ವ್ಯಕ್ತಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದರು. ನಂತರ ಗ್ರಾಮಸ್ಥರು ಹಾಗೂ ಕುಟುಂಬ ಸದಸ್ಯರು ಮನವೊಲಿಸಿದ ಬಳಿಕ ಒಪ್ಪಿಗೆ ನೀಡಿದ್ದರು ಎಂದು ಆಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸೋಂಕಿತ ವ್ಯಕ್ತಿ ಗ್ರಾಮದ ಹೊರವಲಯದಲ್ಲಿ ಇಡೀ ರಾತ್ರಿ ಕಾಲ ಕಳೆದಿದ್ದಾನೆ. ವೈದ್ಯಕೀಯ ವ್ಯವಸ್ಥೆ ನಿರ್ವಹಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳಿಂದ ವ್ಯಕ್ತಿ ಆತಂಕಕ್ಕೊಳಗಾಗಿದ್ದಾರೆ. ಇದೀಗ ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com