ಕೊರೋನಾ ಸಂಕಷ್ಟ: ಮನೆಯಲ್ಲಿ ಹಸಿವು, ನಿತ್ರಾಣದಿಂದ ಬಳಲುತ್ತಿದ್ದ ನಿವೃತ್ತ ಶಿಕ್ಷಕಿ ರಕ್ಷಣೆ

ಕೊರೋನಾ ಕರ್ಫ್ಯೂಯಿಂದಾಗಿ ಮನೆಯಲ್ಲಿ ಸಿಲುಕಿ ಹಸಿವು ಹಾಗೂ ನಿತ್ರಾಣದಿಂದ ಬಳಲುತ್ತಿದ್ದ ನಿವೃತ್ತ ಶಿಕ್ಷಕಿಯೊಬ್ಬರನ್ನು ಸ್ಥಳೀಯರ ಸಹಾಯದೊಂದಿಗೆ ರಕ್ಷಣೆ ಮಾಡಲಾಗಿದೆ. 
ಶಿಕ್ಷಕಿಯನ್ನು ರಕ್ಷಣೆ ಮಾಡುತ್ತಿರುವ ಅಧಿಕಾರಿಗಳು
ಶಿಕ್ಷಕಿಯನ್ನು ರಕ್ಷಣೆ ಮಾಡುತ್ತಿರುವ ಅಧಿಕಾರಿಗಳು

ಮೈಸೂರು: ಕೊರೋನಾ ಕರ್ಫ್ಯೂಯಿಂದಾಗಿ ಮನೆಯಲ್ಲಿ ಸಿಲುಕಿ ಹಸಿವು ಹಾಗೂ ನಿತ್ರಾಣದಿಂದ ಬಳಲುತ್ತಿದ್ದ ನಿವೃತ್ತ ಶಿಕ್ಷಕಿಯೊಬ್ಬರನ್ನು ಸ್ಥಳೀಯರ ಸಹಾಯದೊಂದಿಗೆ ರಕ್ಷಣೆ ಮಾಡಲಾಗಿದೆ. 

70 ವರ್ಷದ ಶಿಕ್ಷಕಿ ಅವಿವಾಹಿತರಾಗಿದ್ದು,ಬೆಂಗಳೂರಿನಲ್ಲಿ ತಮ್ಮ ಸಹೋದರಿಯೊಂದಿಗೆ ನೆಲೆಸಿದ್ದರು. ಮೂರು ತಿಂಗಳ ಹಿಂದಷ್ಟೇ ಮೈಸೂರಿಗೆ ಆಗಮಿಸಿದ್ದರು. ಬಳಿಕ ಆರೋಗ್ಯ ಹದಗೆಟ್ಟಿದ್ದು, ರಾಜ್ಯ ಸರ್ಕಾರ ಕೂಡ ಕೊರೋನಾ ಕರ್ಫ್ಯೂ ಹೇರಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿ ಇರುವಂತಾಗಿದೆ. ದಿನ ಕಳೆಯುತ್ತಿದ್ದಂತೆಯೇ ಆಹಾರ, ನೀರು ಇಲ್ಲದೆ ಶಿಕ್ಷಕಿ ನಿತ್ರಾಣಗೊಂಡಿದ್ದಾರೆ. ಇದನ್ನು ಗಮನಿಸಿದ ಕೆಲ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ನೆರೆಮನೆಯವರು ನೀಡಿದ ಮಾಹಿತಿ ಮೇರೆಗೆ ನಾವು ಸ್ಥಳಕ್ಕೆ ಭೇಟಿ ನೀಡಿದ್ದೆವು. ಈ ವೇಳೆ ಶಿಕ್ಷಕಿ ಹಾಸಿಗೆ ಮೇಲೆ ನಿತ್ರಾಣರಾಗಿ ಬಿದ್ದಿದ್ದರು. ಮಹಿಳೆ ಅಪೌಷ್ಟಿಕತೆ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿದ್ದರು. ಪರಿಸ್ಥಿತಿ ನೋಡಿದ ಬಳಿಕ ಮಹಿಳೆಗೆ ಕೊರೋನಾ ಸೋಂಕಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸುವುದು ನಮಗೆ ಮುಖ್ಯವಾಗಲಿಲ್ಲ. ಅವರನ್ನು ರಕ್ಷಣೆ ಮಾಡುವುದು ನಮಗೆ ಮುಖ್ಯವೆನಿಸಿತು ಎಂದು ರೋಟರಿ ಪಂಚಶೀಲ್ ಕಾರ್ಯದರ್ಶಿ ಕಿರಣ್ ರಾಬರ್ಟ್ ಅವರು ಹೇಳಿದ್ದಾರೆ. 

ಕೊರೋನಾ ಸಾಂಕ್ರಾಮಿಕ ರೋಗ ವ್ಯಾಪಕಗೊಂಡಿರುವ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೇರಿಂಗ್ ಸೆಂಟರ್ ಗೆ ಸೇರ್ಪಡೆಗೊಳಿಸುವುದು ಕಷ್ಟಕರವಾಗಿತ್ತು. ಮಹಿಳೆಯ ಸಹೋದರಿಯನ್ನು ಸಂಪರ್ಕಿಸಿದರೆ ಅವರೂ ಕೂಡ ವಯಸ್ಸಾದವರಾಗಿದ್ದರಿಂದ ಕೊರೋನಾ ಸೋಂಕು ತಗುಲುವ ಭೀತಿಯಿಂದ ಹೊರಬರಲು ಹೆದರುತ್ತಿದ್ದರು. ಮನೆಗೆ ಕರೆದುಕೊಂಡು ಬರುವಂತೆ ತಿಳಿಸಿದ್ದರು. ಅದೃಷ್ಟವಶಾತ್ ವಿಮಲಾ ಟರ್ಮಿನಲ್ ಕೇರ್ ಹೋಮ್ ಮಹಿಳೆಯನ್ನು ನೋಡಿಕೊಳ್ಳಲು ಒಪ್ಪಿಕೊಂಡಿತ್ತು ಎಂದು ತಿಳಿಸಿದ್ದಾರೆ. 

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮೊದಲು ಲೋಕಾಯುಕ್ತ ಎಸ್'ಪಿ ಪಿವಿ ಸ್ನೇಹ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೆ. ಬಳಿಕ ಅವರು ಮೈಸೂರು ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮಾತನಾಡಿದ್ದರು. ನಂತರ ಮೈಸೂರು ನಗರ ಪಾಲಿಕೆ ಅಧಿಕಾರಿ ಡಿ.ಜಿ ನಾಗರಾಜ್ ಅವರು ವೈದ್ಯಕೀಯ ತಂಡವೊಂದನ್ನು ಸ್ಥಳಕ್ಕೆ ರವಾನಿಸಿದ್ದರು. ಆ ತಂಡ ಶಿಕ್ಷಕಿಯ ಸ್ವ್ಯಾಬ್ ಸಂಗ್ರಹಿಸಿ ಕೊರೋನಾ ಪರೀಕ್ಷೆ ನಡೆಸಿದ್ದರು. ರಕ್ತ ಪರೀಕ್ಷೆಯನ್ನು ಖಾಸಗಿ ಪ್ರಯೋಗಾಲಯದಲ್ಲಿ ಉಚಿತವಾಗಿ ಮಾಡಲಾಗಿತ್ತು. ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆ್ಯಂಬುಲೆನ್ಸ್ ಗಳ ಕೊರತೆ ಹೆಚ್ಚಾಗಿದ್ದು, ಈ ಪರಿಸ್ಥಿತಿಯಲ್ಲು ನಗರ ಡಿಆರ್ಎಂ ಆಸ್ಪತ್ರೆ ಆ್ಯಂಬುಲೆನ್ಸ್ ರವಾನಿಸಿ ಮಹಿಳೆಯನ್ನು ಟರ್ಮಿನಲ್ ಕೇರ್ ಸೆಂಟರ್'ಗೆ ಸ್ಥಳಾಂತರಿಸಲು ಸಹಾಯ ಮಾಡಿತ್ತು. ಇದೀಗ ಶಿಕ್ಷಕಿ ಚೇತರಿಸಿಕೊಳ್ಳುತ್ತಿದ್ದಾರೆಂದು ರಾಬರ್ಟ್ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com