ಕೋವಿಡ್-19: ಸಕ್ರಿಯ ಪ್ರಕರಣಗಳಲ್ಲಿ ಆಂಧ್ರ, ತಮಿಳುನಾಡು, ತೆಲಂಗಾಣ ರಾಜ್ಯಗಳನ್ನೇ ಹಿಂದಿಕ್ಕಿದ ಬೆಂಗಳೂರು ನಗರ!

ಕೊರೋನಾ ನಿಯಂತ್ರಣದಲ್ಲಿದೆ ಎಂದು ಭಾವಿಸಿ ನಿರಾಳವಾಗಿದ್ದ ರಾಜ್ಯ ಸರ್ಕಾರ ಹಾಗೂ ಜನರಿಗೆ ಮಹಾಮಾರಿ ಕೊರೋನಾ ಏಪ್ರಿಲ್ ಒಂದೇ ತಿಂಗಳಿನಲ್ಲಿ ಭಾರೀ ಆಘಾತವನ್ನು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ನಿಯಂತ್ರಣದಲ್ಲಿದೆ ಎಂದು ಭಾವಿಸಿ ನಿರಾಳವಾಗಿದ್ದ ರಾಜ್ಯ ಸರ್ಕಾರ ಹಾಗೂ ಜನರಿಗೆ ಮಹಾಮಾರಿ ಕೊರೋನಾ ಏಪ್ರಿಲ್ ಒಂದೇ ತಿಂಗಳಿನಲ್ಲಿ ಭಾರೀ ಆಘಾತವನ್ನು ನೀಡಿದೆ. ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ ಬರೋಬ್ಬರಿ 26,756 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣದಲ್ಲಿ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳನ್ನೇ ಸಿಲಿಕಾನ್ ಸಿಟಿ ಹಿಂದಿಕ್ಕಿದೆ. 

ಸಮಾಧಾನಕರ ವಿಚಾರವೆಂದರೆ ಕೇರಳ ರಾಜ್ಯವನ್ನು ಬೆಂಗಳೂರು ಹಿಂದಿಕ್ಕಿಲ್ಲ. ಕೇರಳದಲ್ಲಿ ಬೆಂಗಳೂರಿನಲ್ಲಿರುವ ಸಕ್ರಿಯಗಳಿಂತಲೂ ಹೆಚ್ಚಾಗಿದೆ. 

ಬೆಂಗಳೂರಿನಲ್ಲಿ ಒಟ್ಟಾರೆಯಾಗಿ 2,59,058 ಸಕ್ರಿಯ ಪ್ರಕರಣಗಳಿದ್ದು, ಆಂಧ್ರಪ್ರದೇಶದಲ್ಲಿ 1,22,980, ತಮಿಳುನಾಡು 1,15,128, ತೆಲಂಗಾಣದಲ್ಲಿ 77,727 ರಷ್ಟಿದೆ. ಇನ್ನು ಕರ್ನಾಟಕ ರಾಜ್ಯದಲ್ಲಿ 3,82,690ದಷ್ಟು ಸಕ್ರಿಯ ಪ್ರಕರಣಗಳಿದ್ದು, ಕೇರಳದಲ್ಲಿ ಅತೀ ಹೆಚ್ಚು 3,03,732 ಸಕ್ರಿಯ ಪ್ರಕರಣಗಳಿವೆ. 

ಈ ಬೆಳವಣಿಗೆಯನ್ನು ಗಮನಿಸಿದರೆ, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಭೀಕರತೆ ಎಷ್ಟಿದೆ ಎಂಬುದನ್ನು ಅರ್ಥೈಸಬಹುದಾಗಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 48,296 ಹೊಸ ಪ್ರಕರಣಗಳು ಪತ್ತೆಯಾಗಿವೆ. 

ಆರೋಗ್ಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಪರೀಕ್ಷೆ ಹೆಚ್ಚಾದ ಕಾರಣ ರಾಜ್ಯದಲ್ಲಿ ಹೆಚ್ಚೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಕಳೆದ ವರ್ಷ ಅಕ್ಟೋಬರ್ 7 ರಂದು ನಡೆಸಿದ ಪರೀಕ್ಷೆಗಳ ಸಂಖ್ಯೆಯನ್ನು ಹತ್ತಿರದಿಂದ ನೋಡಿದರೆ, ಮೊದಲ ಅಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಎಂಬುದನ್ನು ತಿಳಿಯಬಹುದು ಎಂದು ಹೇಳಿದ್ದಾರೆ. 

ಕಳೆದ ವರ್ಷ ಅಕ್ಟೋಬರ್ 7 ರಂದು 1,04,348 ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ವೇಳೆ 10,974 ಪ್ರಕರಣಗಳು ಪತ್ತೆಯಾಗಿದ್ದವು. ಶುಕ್ರವಾರ 1,89,793 ಪರೀಕ್ಷೆಗಳನ್ನು ನಡೆಸಲಾಗಿದ್ದು 48,296 ಪ್ರಕರಣಗಳು ಪತ್ತೆಯಾಗಿವೆ. ಶೇ.81ರಷ್ಟು ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 

ಈ ನಡುವೆ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.75.26ರಿಂದ 73.85ಕ್ಕೆ ಇಳಿಕೆಯಾಗಿದೆ. ಈ ಹಿಂದೆ ಜನವರಿ 30 ರಂದು ರಾಜ್ಯದ ಚೇತರಿಕೆ ಪ್ರಮಾಣ ಶೇ.98.06ರಷ್ಟಿತ್ತು. ಏಪ್ರಿಲ್ 4 ರ ಬಳಿಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಾ ಬಂದಿದೆ. ಶುಕ್ರವಾರದ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.5.95ರಷ್ಟಿದೆ ಎಂದು ತಿಳಿದುಬಂದಿದೆ. 

ರಾಜ್ಯದಲ್ಲಿ ಸಾವಿನ ಪ್ರಮಾಣ ಇಳಿಕೆಯಾಗುತ್ತಿರುವುದು ಗಮನಾರ್ಹ ವಿಚಾರವಾಗಿದೆ. ರಾಜ್ಯದಲ್ಲಿ ಮರಣ ಪ್ರಮಾಣ ಶೇ.1.01ಕ್ಕೆ ಇಳಿಕೆಯಾಗಿದೆ. ಗುರುವಾರ ಈ ಪ್ರಮಾಣ ಶೇ.1.03ರಷ್ಟಿತ್ತು. ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 26,756 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 7,56,740ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com