ಬೆಳಗಾವಿ: 12 ಮಂದಿ ಪತ್ರಕರ್ತರಿಗೆ ಕೊರೋನಾ ಪಾಸಿಟಿವ್!

ಲೋಕಸಭಾ ಉಪಚುನಾವಣೆಯ ಮತಎಣಿಕೆ ಹಿನ್ನೆಲೆಯಲ್ಲಿ ಬೆಳಗಾವಿಯ ಸುಮಾರು 29 ಮಂದಿ ಮಾಧ್ಯಮ ಪ್ರತಿನಿಧಿಗಳು ಕೊರೋನಾ ಪರೀಕ್ಷೆಗೊಳಗಾಗಿದ್ದು, ಇದರಲ್ಲಿ 12 ಮಂದಿ ಪತ್ರಕರ್ತರಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಲೋಕಸಭಾ ಉಪಚುನಾವಣೆಯ ಮತಎಣಿಕೆ ಹಿನ್ನೆಲೆಯಲ್ಲಿ ಬೆಳಗಾವಿಯ ಸುಮಾರು 29 ಮಂದಿ ಮಾಧ್ಯಮ ಪ್ರತಿನಿಧಿಗಳು ಕೊರೋನಾ ಪರೀಕ್ಷೆಗೊಳಗಾಗಿದ್ದು, ಇದರಲ್ಲಿ 12 ಮಂದಿ ಪತ್ರಕರ್ತರಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. 

12 ಮಂದಿ ಪೈಕಿ 11 ಮಂದಿಯಲ್ಲಿ ಯಾವುದೇ ಲಕ್ಷಣಗಳೂ ಕಂಡು ಬಂದಿಲ್ಲ. ಆದಾಗ್ಯೂ ಸರ್ಕಾರದ ಮಾರ್ಗಸೂಚಿ ಪ್ರಕಾರ ಅವರನ್ನು ಹೋಂ ಐಸೋಲೇಷನ್ ನಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. 

ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರಿಗೆ ಖುದ್ದು ಮಾತುಕತೆ ನಡೆಸಿ, ಸೋಂಕಿತ ಪತ್ರಕರ್ತರಿಗೆ ಅಗತ್ಯ ಚಿಕಿತ್ಸಾ ಸೌಲಭ್ಯಗಳು ಹಾಗೂ ಔಷಧೋಪಚಾರಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. 

ಪತ್ರಕರ್ತರು ಸಾಮಾನ್ಯವಾಗಿ ತೀವ್ರ ಕೆಲಸದ ಒತ್ತಡದಲ್ಲಿರುತ್ತಾರೆ. ಅವರೂ ಕೂಡ ಸಾರ್ವಜನಿಕರಿಗೆ ಸುದ್ದಿ ನೀಡುವ ಕೆಲಸಕ್ಕಾಗಿ ಕೊರೋನಾ ವಾರಿಯರ್ಸ್ ಗಳಂತೆ ಸದಾ ದುಡಿಯುತ್ತಿರುತ್ತಾರೆ. ಆದ್ದರಿಂದ ಅವರ ಆರೋಗ್ಯ ಕಾಳಜಿಯೂ ಅಷ್ಟೇ ಮುಖ್ಯ. ಆದ್ದರಿಂದ ಸ್ಥಳೀಯ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಈ ಪತ್ರಕರ್ತರ ಆರೋಗ್ಯ ಕಾಳಜಿಗೆ ಆದ್ಯತೆ ನೀಡಬೇಕು. ಕ್ವಾರಂಟೈನ್ ಆಗಲಿರುವ ಪತ್ರಕರ್ತರ ಕುಟುಂಬಕ್ಕೆ ಅಗತ್ಯ ವೈದ್ಯಕೀಯ ಮಾರ್ಗದರ್ಶನಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ. 

ಪಾಸಿಟಿವ್ ದೃಢಪಟ್ಟಿರುವ ಪ್ರಕರಣಗಳಲ್ಲಿ ಪತ್ರಕರ್ತರು ಭಯಪಡೆ ಸೂಕ್ತ ಮುಂಜಾಗ್ರತೆಯೊಂದಿಗೆ ಹೆಚ್ಚಿನ ಆರೋಗ್ಯ ಕಾಳಜಿ ವಹಿಸಬೇಕು. ಆದಷ್ಟು ಶೀಘ್ರವಾಗಿ ಅವರು ಚೇತರಿಸಿಕೊಂಡು ಮತ್ತೆ ಮೊದಲಿನಂತೆ ಕರ್ತವ್ಯ ನಿರ್ವಹಿಸುವಂತಾಗಲಿ ಎಂದು ಇದೇ ವೇಳೆ ಲಕ್ಷ್ಮಣ್ ಸವದಿಯವರು ಹಾರೈಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com