ಕೊಡಗಿನಲ್ಲಿ ಕೋವಿಡ್-19 ನಿರ್ಬಂಧನೆ; ವಾರದಲ್ಲಿ ಎರಡು ದಿನ ಮಾತ್ರ ವ್ಯಾಪಾರಕ್ಕೆ ಅವಕಾಶ

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ವಾರದಲ್ಲಿ ಎರಡು ದಿನ 6 ಗಂಟೆಗಳ ಕಾಲ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.
ಕೊಡಗು ಆಸ್ಪತ್ರೆ
ಕೊಡಗು ಆಸ್ಪತ್ರೆ

ಕೊಡಗು: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ವಾರದಲ್ಲಿ ಎರಡು ದಿನ 6 ಗಂಟೆಗಳ ಕಾಲ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.

ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು, 'ವಾರದಲ್ಲಿ ಮಂಗಳವಾರ ಮತ್ತು ಶುಕ್ರವಾರ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತಿದೆ, ಉಳಿದ ದಿನ ಎಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ  12 ಗಂಟೆಯವರೆಗೆ ದಿನಸಿ, ಹಣ್ಣು, ತರಕಾರಿ, ಮಾಂಸ, ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಔಷಧಿ ಅಂಗಡಿ, ಪೆಟ್ರೋಲ್ ಬಂಕ್‌ಗಳಿಗೆ ಬಂದ್ ಅನ್ವಯಿಸುವುದಿಲ್ಲವೆಂದು ಹೇಳಿದ್ದಾರೆ.

ಅಂತೆಯೇ ಹಾಲು, ಹಾಲಿನ ಉತ್ಪನ್ನಗಳು ಮತ್ತು ಪತ್ರಿಕೆ ವಿತರಣೆಗೆ ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆವರೆಗೆ ವಿನಾಯಿತಿ ನೀಡಲಾಗಿದೆ. ಬೆಂಗಳೂರು, ಮೈಸೂರು, ಕೇರಳ ಭಾಗದಿಂದ ಬಂದವರಿಂದ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಗ್ರಾ.ಪಂ ವ್ಯಾಪ್ತಿಯಲ್ಲಿ ರಚಿಸಿರುವ  ಕಾರ್ಯಪಡೆಗಳು ಹೊರಗಿನಿಂದ ಬಂದವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಆದ್ದರಿಂದ ಹೊರ ರಾಜ್ಯ, ಜಿಲ್ಲೆಯಿಂದ ಬಂದವರು ಮನೆಯಲ್ಲೇ ಇರುವ ಮೂಲಕ ಸೋಂಕು ವ್ಯಾಪಿಸುವುದನ್ನು ತಡೆಯಲು ಸಹಕರಿಸಬೇಕೆಂದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಆಕ್ಸಿಜನ್ ಕೊರತೆ ಇಲ್ಲ
ಇದೇ ವೇಳೆ ಜಿಲ್ಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ, ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದರಿಂದ ಮತ್ತಷ್ಟು ಆಕ್ಸಿಜನ್ ಅನ್ನು ಮೈಸೂರಿನಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಸೋಮವಾರಪೇಟೆಯಲ್ಲೂ 50 ಆಕ್ಸಿಜನ್ ಬೆಡ್ ಗಳ ಕೋವಿಡ್ ಆಸ್ಪತ್ರೆ ಆರಂಭಿಸಲು  ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾ ಪ್ರವಾಸೋದ್ಯಮ ಸ್ಥಗಿತ
ಕೊಡಗು ಜಿಲ್ಲೆಯ ಪ್ರವಾಸೋದ್ಯಮ ವಲಯವನ್ನು ಮೇ.15ರವರೆಗೆ ಸ್ಥಗಿತಗೊಳಿಸುವ ಮೂಲಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗೆ ಸಹಕಾರ ನೀಡಲು ಹೋಟೆಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಹಾಗೂ ಕೊಡಗು ಹೋಂ ಸ್ಟೇ ಅಸೋಸಿಯೇಷನ್ ನಿರ್ಧರಿಸಿದೆ. ಈ ಬಗ್ಗೆ  ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿರುವ ಜಿಲ್ಲಾ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್ ನಾಗೇಂದ್ರ ಪ್ರಸಾದ್ ಮತ್ತು ಹೋಂ ಸ್ಟೇ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಬಿ.ಜಿ ಅನಂತಶಯನ, ಕೊರೊನಾ ಎರಡನೇ ಅಲೆ ಸಂದರ್ಭ ಜಿಲ್ಲೆಯಲ್ಲಿಯೂ ಪ್ರಕರಣಗಳು ಹೆಚ್ಚಾಗುತ್ತಿವೆ.  ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಜನಸಂದಣಿಯನ್ನು ಇಂದಿನ ದಿನಗಳಲ್ಲಿ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಹೊಣೆಗಾರಿಕೆಯಾಗಿ, ಕೊಡಗು ಜಿಲ್ಲೆಯ ಎಲ್ಲಾ ಹೋಟೆಲ್ ರೆಸಾರ್ಟ್, ಲಾಡ್ಜ್, ಹೋಂಸ್ಟೇಗಳನ್ನು ಮೇ 15 ರವರೆಗೆ ಮುಚ್ಚಲಾಗುತ್ತಿದೆ, ಪ್ರವಾಸಿಗರು ಹಾಗೂ ಸಾರ್ವಜನಿಕರು ಸಹಕರಿಸುವಂತೆ  ಮನವಿ ಮಾಡಿದ್ದಾರೆ.

ಕಳೆದ ವರ್ಷವೂ ಪ್ರವಾಸೋದ್ಯಮ ವಲಯವು ಕೊರೊನಾ ವ್ಯಾಪಿಸುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಇಂತಹದ್ದೇ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಸಹಕಾರ ನೀಡಿತ್ತು. ಇದೀಗ ಮತ್ತೆ ಹೆಚ್ಚಳ ತಡೆಗಟ್ಟುವ ನಿಟ್ಟಿನಲ್ಲಿ ಸ್ವಯಂ ನಿಯಂತ್ರಣ ಕ್ರಮವಾಗಿ ಪ್ರವಾಸೋದ್ಯಮ ವಲಯವನ್ನು ಮುಂದಿನ 13 ದಿನಗಳ ಕಾಲ  ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಮತ್ತು ಕೊರೊನಾ ಕಾರಣದಿಂದಾಗಿ ಪ್ರವಾಸೋದ್ಯಮ ಮಾಲೀಕರು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ, ಸಿಬ್ಬಂದಿಗೆ ವೇತನ ನೀಡಲು ಸಮಸ್ಯೆಯಾಗುತ್ತಿದೆ, ಸಂಸ್ಥೆಗಳ ನಿರ್ವಹಣೆ ಕೂಡ ಕಷ್ಟ ಆಗುತ್ತಿದೆ,  ಹೀಗಿದ್ದರೂ ಕೊಡಗಿನಲ್ಲಿ ಕೊರೊನಾ ಸೋಂಕು ತಡೆಗಟ್ಟಿ ಕೊಡಗಿನ ಹಿಂದಿನ ವೈಭವವನ್ನು ಮರುಕಳಿಸುವ ಉದ್ದೇಶದಿಂದ ಆರ್ಥಿಕ ಸಮಸ್ಯೆಯನ್ನು ಸಹಿಸಿಕೊಂಡು 15ರವರೆಗೆ ಕ್ಷೇತ್ರ ಆತಿಥ್ಯವನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com