ಕೋವಿಡ್-19 2ನೇ ಅಲೆ: ಆರೋಗ್ಯ ಕಾರ್ಯಕರ್ತರ ಕೆಲಸದಲ್ಲಿ ಅತೀವ ಒತ್ತಡ, ಗುಣಮಟ್ಟದ ಚಿಕಿತ್ಸೆ ಮೇಲೆ ಪರಿಣಾಮ!

ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ನ ಅಲೆ ಅಬ್ಬರಿಸುತ್ತಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ಹೊತ್ತಿನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರು ಹೆಚ್ಚುವರಿ ಸಮಯದಲ್ಲಿ ಕೆಲಸ ಮಾಡುತ್ತಿದ್ದು, ಇದು ಅವರಲ್ಲಿ ಅತೀವ ಒತ್ತಡ  ಹೆಚ್ಚಾಗುವಂತೆ ಮಾಡುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ನ ಅಲೆ ಅಬ್ಬರಿಸುತ್ತಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ಹೊತ್ತಿನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರು ಹೆಚ್ಚುವರಿ ಸಮಯದಲ್ಲಿ ಕೆಲಸ ಮಾಡುತ್ತಿದ್ದು, ಇದು ಅವರಲ್ಲಿ ಅತೀವ ಒತ್ತಡ  ಹೆಚ್ಚಾಗುವಂತೆ ಮಾಡುತ್ತಿದೆ.

ಹೌದು.. ಸಾಂಕ್ರಾಮಿಕ ಸಂದರ್ಭದಲ್ಲಿ ಅತಿಯಾದ ಕೆಲಸ ಮಾಡುವ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿ ತೀವ್ರ ಮಾನಸಿಕ ಒತ್ತಡದಲ್ಲಿ ಸಿಲುಕುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಕೋವಿಡ್ ರೋಗಿಗಳ ಚಿಕಿತ್ಸೆಯ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ಆತಂಕ  ಸೃಷ್ಟಿಯಾಗುತ್ತಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಕರಣಗಳು ಕಡಿಮೆಯಾಗಲು ಪ್ರಾರಂಭಿಸಿದಾಗ ಮಾತ್ರ ಇವರಿಗೆ ಸ್ವಲ್ಪ ವಿರಾಮ ಸಿಕ್ಕಿತ್ತು. ಆದರೆ ದೇಶಾದ್ಯಂತ  ಸೃಷ್ಟಿಯಾಗಿರುವ ಎರಡನೇ ಅಲೆ ತೀವ್ರವಾಗಿದ್ದು, ಮತ್ತೆ ಆರೋಗ್ಯ ಸಿಬ್ಬಂದಿ ವಿಶ್ರಾಂತಿ ಇಲ್ಲದೇ ಕರ್ತವ್ಯ ನಿರ್ವಹಣೆ ಮಾಡುವಂತೆ ಮಾಡುತ್ತಿದೆ. ಇದರಿಂದ ಆರೋಗ್ಯ ವೃತ್ತಿಪರರ ಮೇಲೆ ಅತೀವ ಒತ್ತಡ ಹೆಚ್ಚಾಗಿ ಕರ್ತವ್ಯದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಈ ಬಗ್ಗೆ ಮಾತನಾಡಿರುವ ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಸ್ ನ ಕೋವಿಡ್-19 ಇಂಟರ್ನಲ್ ಮೆಡಿಸಿನ್ ಸ್ಪೆಷಲಿಸ್ಟ್ ಡಾ.ನವೀನ್ ಕುಮಾರ್ ಆರ್ ಎ ಅವರು, 'ವೈದ್ಯರು ಮತ್ತು ಸಂಪನ್ಮೂಲಗಳ ಕೊರತೆ ಇರುವುದರಿಂದ ನಾವು ಖಂಡಿತವಾಗಿಯೂ ಹೆಚ್ಚು ಕೆಲಸ ಮಾಡುತ್ತಿದ್ದೇವೆ. ನಾವು ನಮ್ಮ  ಹೆತ್ತವರನ್ನು ಮತ್ತು ಕುಟುಂಬಸ್ಥರನ್ನೂ ಕೂಡ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿರುವ ನನ್ನ ಮನೆಯಲ್ಲಿರುವ, ನನ್ನ ಕುಟುಂಬದ ಎಲ್ಲಾ ಐವರು ಸೋಂಕಿಗೆ ಒಳಗಾಗಿದ್ದಾರೆ. ನಾನು ಇಲ್ಲಿ ನನ್ನ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿರುವುದರಿಂದ ಅವರನ್ನು ನೋಡಲು ಸಹ ಸಾಧ್ಯವಾಗುತ್ತಿಲ್ಲ. ಕೋವಿಡ್  ವಾರ್ಡ್‌ಗಳಲ್ಲಿ, ಪ್ರತಿದಿನ ಕನಿಷ್ಠ 10-12 ರೋಗಿಗಳು ಸಾಯುವುದನ್ನು ನಾವು ನೋಡುತ್ತಿದ್ದೇವೆ. ಮೊದಲ ತರಂಗದಲ್ಲಿ, ಹೆಚ್ಚಿನ ಸಾವು-ನೋವುಗಳು ಹಿರಿಯ ನಾಗರಿಕರಾಗಿದ್ದರು, ಆದರೆ ಈಗ, 20-30 ವಯಸ್ಸಿನ ಬಹಳಷ್ಟು ರೋಗಿಗಳು ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಈ ಅತೀವ ಒತ್ತಡದಿಂದಾಗಿ ನಾವು ತೊಂದರೆಗೀಡಾಗಿದ್ದೇವೆ. ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇವೆ. ನಾವು ವಿರಾಮವಿಲ್ಲದೆ ಕೆಲಸ ಮಾಡುತ್ತಿದ್ದೇವೆ. ಮೊದಲ ತರಂಗದಲ್ಲಿ, ನಾವು ಏಳು ದಿನಗಳವರೆಗೆ ಆರು ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೆವು ಮತ್ತು ನಂತರ ಏಳು ದಿನಗಳ ಕಾಲ  ವಿರಾಮವನ್ನು ತೆಗೆದುಕೊಳ್ಳುತ್ತಿದ್ದೆವು. ಆದರೆ ಈಗ, ವೈದ್ಯರ ಕೊರತೆ ಇರುವುದರಿಂದ ನಾವು ತಡೆರಹಿತವಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಕೆಲವು ಇಂಟರ್ನಿಗಳನ್ನು ಹೊಂದಿದ್ದೇವೆಯಾದರೂ, ಅವರು ತರಬೇತಿಯ ನಂತರ ಈ ಸ್ಥಾನಗಳನ್ನು ಭರ್ತಿ ಮಾಡಲಿದ್ದಾರೆ. ಅಲ್ಲಿಯವರೆಗೂ ಈ ಸಿಬ್ಬಂದಿ ಕೊರತೆ  ಮುಂದುವರೆಯುತ್ತದೆ. ನಾವು ಮೊದಲು 10-20 ರೋಗಿಗಳನ್ನು ನೋಡುತ್ತಿದ್ದೆವು, ಆದರೆ ಈಗ ಅವುಗಳ ಸಂಖ್ಯೆ 60 ಕ್ಕಿಂತ ಹೆಚ್ಚಾಗಿದೆ ಎಂದು ಮುಖ್ಯ ಮೂತ್ರಶಾಸ್ತ್ರಜ್ಞ ಮತ್ತು ರೀಗಲ್ ಆಸ್ಪತ್ರೆಯ ಎಂಡಿ ಡಾ.ಸೂರಿ ರಾಜು ವಿ ಹೇಳಿದ್ದಾರೆ.

ಆರೋಗ್ಯ ಕಾರ್ಯಕರ್ತರ ಸಂಖ್ಯೆ ಕೂಡ ಸಹ ಕುಸಿತವನ್ನು ಎದುರಿಸುತ್ತಿದೆ. ನಾವು ಕೋವಿಡ್ ರೋಗಿಗಳನ್ನು ನಿರ್ವಹಿಸಬೇಕು ಮತ್ತು ಅವರ ಪರಿಚಾರಕರಿಗೆ ಸಲಹೆ ನೀಡಬೇಕು. ಇಷ್ಟಾದರೂ ಕೆಲವೊಮ್ಮೆ, ರೋಗಿಗಳ ಸಂಬಂಧಿಕರು ನಮಗೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ, ಇಂತಹ ಬೆಳವಣಿಗೆಗಳು ನಮ್ಮ  ಆತ್ಮಸ್ಥೈರ್ಯವನ್ನು ತಗ್ಗಿಸುತ್ತದೆ. ನಾವು ಈಗ 8-12 ಗಂಟೆಗಳ ಶಿಫ್ಟ್ ಹೊಂದಿದ್ದೇವೆ, ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತಿದ್ದೇವೆ ಎಂದು ಅವರು ಹೇಳಿದರು, 

“ಎಲ್ಲಾ ಇಲಾಖೆಗಳ ನಡುವೆ ಕೇಸ್ ಗಳನ್ನು ವಿತರಿಸಬೇಕು ಮತ್ತು ಎಲ್ಲಾ ಅಧ್ಯಾಪಕರು ಕೋವಿಡ್ ಕರ್ತವ್ಯದಲ್ಲಿ ಭಾಗಿಯಾಗಬೇಕು. ಎಂಬಿಬಿಎಸ್ ಮತ್ತು ಎಂಎಸ್ ವಿದ್ಯಾರ್ಥಿಗಳನ್ನೂ ಸಹ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ. ವೈದ್ಯರು ಇಂತಹ ತೀವ್ರ ಒತ್ತಡದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಿದರೆ  ಅದು ಚಿಕಿತ್ಸೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ವೈದ್ಯರು ಕೂಡ ಭಯದ ವಾತಾವರಣದಲ್ಲಿದ್ದು, ಅವರಿಗೆ ಸಾಕಷ್ಟು ವಿಶ್ರಾಂತಿ ಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಿವಿಜಿ ಇನ್ವಿವೊ ಆಸ್ಪತ್ರೆಯ ಸಿಎಂಡಿ ಡಾ.ಗುಣಶೇಖರ್ ವುಪ್ಪಾಲಪತಿ ಅವರು ಮಾತನಾಡಿ, ವೈದ್ಯರು ಮಾತ್ರವಲ್ಲ, ಶುಶ್ರೂಷಾ ಸಿಬ್ಬಂದಿ, ಆಡಳಿತ ವಿಭಾಗ ಮತ್ತು ಮನೆಗೆಲಸದ ಸಿಬ್ಬಂದಿಗಳು ಸಹ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ವೈದ್ಯರು ಮತ್ತು ದಾದಿಯರ ಸಂಖ್ಯೆ ಕಡಿಮೆ ಇದೆ. ಆದರೆ ನಾವು ಲಭ್ಯವಿರುವ  ಸಂಪನ್ಮೂಲಗಳೊಂದಿಗೆ ನಿರ್ವಹಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇದು ಈಗಿರುವ ಸಿಬ್ಬಂದಿಯ ಮೇಲೆ ಸಾಕಷ್ಟು ಒತ್ತಡವನ್ನು ಬೀರುತ್ತದೆ. ಈ ಮೊದಲು, ಕೋವಿಡ್ ಕರ್ತವ್ಯಕ್ಕಾಗಿ ನಮಗೆ ಆರು ದಾದಿಯರು ಬೇಕಾಗಿದ್ದರು, ಆದರೆ ಈಗ, ನಮಗೆ ಆ ಸಂಖ್ಯೆಯ ದ್ವಿಗುಣ ಅಗತ್ಯವಿದೆ. ಹಾಸಿಗೆಗಳ ವ್ಯವಸ್ಥೆ ಮಾಡಲು  ನಿರಂತರವಾಗಿ ಕರೆಗಳು ಬರುತ್ತಿರುವುದರಿಂದ ಆಡಳಿತ ವಿಭಾಗವೂ ಹೆಚ್ಚಿನ ಒತ್ತು ನೀಡುತ್ತಿದೆ. ನಮಗೆ ಹೆಚ್ಚಿನ ಮಾನವ ಸಂಪನ್ಮೂಲ ಬೇಕು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com