ಚಾಮರಾಜನಗರ ಕೊರೋನಾ ಸೋಂಕಿತರ ದುರಂತ ಸಾವು: ಮೃತರ ಕುಟುಂಬಸ್ಥರಿಂದ ಸಚಿವರು, ಅಧಿಕಾರಿಗಳಿಗೆ ಹಿಡಿಶಾಪ!

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆರಂಭವಾದ ಆಮ್ಲಜನಕ ಕೊರತೆಯಿಂದಾಗಿ 24 ಮಂದಿ ದುರಂತ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಮೃತರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
ಆಸ್ಪತ್ರೆ ಬಳಿಯಿರುವ ಮೃತರ ಕುಟುಂಬಸ್ಥರು
ಆಸ್ಪತ್ರೆ ಬಳಿಯಿರುವ ಮೃತರ ಕುಟುಂಬಸ್ಥರು

ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆರಂಭವಾದ ಆಮ್ಲಜನಕ ಕೊರತೆಯಿಂದಾಗಿ 24 ಮಂದಿ ದುರಂತ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಮೃತರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಈ ಘೋರ ದುರಂತಕ್ಕೆ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು, ಜಿಲ್ಲಾ ಆರೋಗ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಕುಟುಂಬಸ್ಥರು, ಹಿಡಿಶಾಪ ಹಾಕುತ್ತಿದ್ದಾರೆ. 

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಿಲ್ಲ, ಊಟೋಪಚಾರ, ಔಷಧಗಳನ್ನು ತೆಗೆದುಕೊಂಡು ಹೋಗುವವರಿಂದ ಹಿಡಿದು ಎಲ್ಲಕ್ಕೂ ಹಣ ನೀಡಬೇಕು. ದುಡ್ಡುಕೊಟ್ಟರೆ ಮಾತ್ರ ಇಲ್ಲಿ ನೋಡಿಕೊಳ್ಳುವುದು. ಇಲ್ಲದಿದ್ದರೆ ಕ್ಯಾರೆ ಎನ್ನುವುದಿಲ್ಲ. ದಯವಿಟ್ಟು ಕೋವಿಡ್ ಸೋಂಕಿತರಿದ್ದರೆ ಇಲ್ಲಿಗೆ ಮಾತ್ರ ಸೇರಿಸಬೇಡಿ ಎಂದು ಕೈ ಮುಗಿಯುತ್ತಿದ್ದಾರೆ. 

ಘಟನೆ ಬಳಿಕ ಆಸ್ಪತ್ರೆಗಳಿಗೆ ಧಾವಿಸುತ್ತಿರುವ ಇತರೆ ಸೋಂಕಿತರ ಕುಟುಂಬಸ್ಥರು ದಯವಿಟ್ಟೂ ಹೋಮ್ ಐಸೋಲೇಷನ್ ನಲ್ಲಿರಿಸಲು ಅವಕಾಶ ನೀಡಿ, ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತೆ ಆಗ್ರಹಿಸುತ್ತಿದ್ದಾರೆ. 

ನಾನು ನನ್ನ ಸಹೋದರನನ್ನು ಕಳೆದುಕೊಂಡಿದ್ದಾರೆ. ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿದ್ದಾನೆ. ಭಾನುವಾರ ರಾತ್ರಿ 8.30ರ ಸುಮಾರಿಗೆ ಆತ ಕೊನೆಯುಸಿರೆಳೆದಿದ್ದ ಎಂದು ಮೃತದೇಹವನ್ನು ತೆಗೆದುಕೊಂಡು ಹೋಗಲು ಬಂದಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ. 

ಇನ್ನು ಘಟನೆ ಬಳಿಕ ಆಸ್ಪತ್ರೆ ಮುಂದೆ ಪ್ರತಿಭಟನೆಗಳೂ ಆರಂಭವಾಗಿದ್ದು, ಪ್ರತಿಭಟನಾಕಾರರು ಜಿಲ್ಲೆಯ ಉಪ ಆಯುಕ್ತರೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ಇತರೆ ಸೋಂಕಿತರ ಪ್ರಾಣ ಕಾಪಾಡಲು ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ. 

ಚಾಮರಾಜನಗರ ನಗರದ ಪುರಸಭೆಯ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿಯವರು ಮಾತನಾಡಿ, ಜಿಲ್ಲಾ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪ್ರತೀನಿತ್ಯ ಇಲ್ಲಿ ಆಕ್ಸಿಜನ್ ಕೊರತೆ ಎದುರಾಗುತ್ತಲೇ ಇದೆ. ಭಾನುವಾರ ರಾತ್ರಿಯೇ 29 ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು ಉಪ ಆಯುಕ್ತರು ಚಾಮರಾಜನಗರಕ್ಕೆ ಸೂಕ್ತ ರೀತಿಯಲ್ಲಿ ಆಕ್ಸಿಜನ್ ಪೂರೈಕೆ ಮಾಡುತ್ತಿಲ್ಲ. ಹೀಗಾಗಿ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ. 

ಈ ನಡುವೆ ಮೃತರ ಕುಟುಂಬಸ್ಥರು ಸ್ಥಳೀಯ ಶಾಸಕ ಪುಟ್ಟರಂಗ ಶೆಟ್ಟಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಘಟನೆ ಬಳಿಕ ಜಿಲ್ಲಾಧಿಕಾರಿಗಳೊಂದಿಗೆ ಸ್ಥಳಕ್ಕೆ ಶಾಸಕ ಪುಟ್ಟರಂಗಶೆಟ್ಟಿಯವರು ಧಾವಿಸಿದ್ದರು, ಈ ವೇಳೆ ಅವರನ್ನು ಸುತ್ತುತವರೆದ ಜನರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. 

ನಿಮ್ಮ ಕುಟುಂಬಸ್ಥರಿಗೆ ಇದೇ ರೀತಿ ಆಗಿದ್ದರೆ ನೀವೇನು ಮಾಡುತ್ತಿದ್ದಿರಿ? ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿದ್ದರೂ ನೀವೇನು ಮಾಡುತ್ತಿದ್ದಿರಿ? ಸಹೋದರಿ ದೂರವಾಣಿ ಕರೆ ಮಾಡುತ್ತಿದ್ದಂತೆಯೇ ನಾನು ಆಸ್ಪತ್ರೆಗೆ ಓಡೋಡಿ ಬಂದಿದ್ದೆ. ಆದರೆ, ಇಲ್ಲಿ ಖಾಸಗಿ ಆಸ್ಪತ್ರೆಗಳು ಅಥವಾ ಅಕ್ಸಿಜನ್ ಬೆಡ್ ಗಳು ಇಲ್ಲದ ಕಾರಣ ಆಕೆಯನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಸಂತೇಮಾರನಹಳ್ಳಿ ನಿವಾಸಿ ಶ್ರೀನಿವಾಸ್ ಅವರು ತಮ್ಮ ಅಳಲನ್ನು ತೋಡಿಕೊಂಡರು. 

ಈ ನಡುವೆ ಆಸ್ಪತ್ರೆಯಲ್ಲಿದ್ದ 24 ಮೃತದೇಹಗಳನ್ನು ಕೊಂಡೊಯ್ಯಲು ಆ್ಯಂಬುಲೆನ್ಸ್ ಸಮಸ್ಯೆ ಎದುರಾಗಿದ್ದು, ಇದೂ ಕೂಡ ಜನರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಪೊಲೀಸರು ಮಿನಿ ಟ್ರಕ್ ವೊಂದನ್ನು ಕರೆತಂದು ಮೃತದೇಹಗಳನ್ನು ಸ್ಥಳಾಂತರ ಮಾಡಲು ನೆರವಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com