'ಚಾಮರಾಜನಗರ ಆಸ್ಪತ್ರೆ ದುರಂತ ನನ್ನ ತಪ್ಪಿನಿಂದ ಆಗಿದ್ದಲ್ಲ, ಊಹಾಪೋಹ ಹಬ್ಬಿಸಬೇಡಿ': ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳು ಮೃತಪಟ್ಟ ಘಟನೆ ತನಿಖೆಗೆ ಅಧಿಕಾರಿಗಳನ್ನು ನೇಮಿಸಿದೆ, ತನಿಖೆಯಲ್ಲಿ ಗೊತ್ತಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬುಧವಾರ ಪ್ರತಿಕ್ರಿಯಿಸಿದ್ದಾರೆ.
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ

ಮೈಸೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳು ಮೃತಪಟ್ಟ ಘಟನೆ ಬಗ್ಗೆ ಎಲ್ಲರಿಗೂ ನೋವಿದೆ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡಿದ್ದಾರೆ, ಆದರೂ ಮಾಧ್ಯಮಗಳಲ್ಲಿ ಹಲವಾರು ಊಹಾಪೋಹಗಳು ಬರುತ್ತಿವೆ, ವದಂತಿಗಳನ್ನು ಹಬ್ಬಿಸಿ ಜನತೆಯನ್ನು ತಪ್ಪು ದಾರಿಗೆಳೆಯುವುದು ಬೇಡ, ಸರ್ಕಾರ ತನಿಖೆಗೆ ಅಧಿಕಾರಿಗಳನ್ನು ನೇಮಿಸಿದೆ, ತನಿಖೆಯಲ್ಲಿ ಗೊತ್ತಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬುಧವಾರ ಪ್ರತಿಕ್ರಿಯಿಸಿದ್ದಾರೆ.

ರೋಗಿಗಳು ಎಲ್ಲಿ ಸಾವಾದರೂ ಅದು ನಮಗೆ ನೋವಿನ ಸಂಗತಿಯೇ, ಅದು ನಮ್ಮ ಜಿಲ್ಲೆಯಾಗಿರಲಿ, ಬೇರೆ ಜಿಲ್ಲೆಯಾಗಿರಲಿ ನಮಗೆ ಖಂಡಿತಾ ದುಃಖವಾಗುತ್ತದೆ. ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ನಾವು ಕಳುಹಿಸಲಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಆಕ್ಸಿಜನ್ ಕಳುಹಿಸುವುದು ಸಿಲಿಂಡರ್ ಪೂರೈಸುವವರು ಮತ್ತು ಆಸ್ಪತ್ರೆಗಳ ಮಧ್ಯೆ ನಡೆಯುವ ಪ್ರಕ್ರಿಯೆ, ಆದರೆ ಈ ಕಷ್ಟ ಕಾಲದಲ್ಲಿ ಜಿಲ್ಲಾಡಳಿತ ಕೆಲಸ ಮಾಡಿ ಚಾಮರಾಜನಗರ ಜಿಲ್ಲೆಗೆ 40 ಸಿಲಿಂಡರ್ ಕಳುಹಿಸಿಕೊಟ್ಟಿದ್ದೆವು,ದಾಖಲಾತಿಯಲ್ಲಿ ರಾತ್ರಿ 11 ಗಂಟೆಗೆ ಕೇಳಿದ್ದಾರೆ, ಮೊದಲೇ ಕೇಳಿದ್ದರೆ ನಾವು ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಪೂರೈಸಿ ರೋಗಿಗಳ ಜೀವ ಕಾಪಾಡಬಹುದಾಗಿತ್ತು, ಮೊದಲೇ ಸಿಲಿಂಡರ್ ಸಂಗ್ರಹಿಸಿಟ್ಟುಕೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿಯಲ್ಲವೇ ಎಂದು ಕೇಳಿದರು.

ಮಾಧ್ಯಮಗಳಲ್ಲಿ ಊಹಾಪೋಹ ಹಬ್ಬಿಸುವ ಮುನ್ನ, ಆರೋಪ ಮಾಡುವ ಮುನ್ನ ಆಯೋಗ ತನಿಖೆ ನಡೆಸುತ್ತದೆ, ತನಿಖೆಯಿಂದ ಎಲ್ಲಾ ಗೊತ್ತಾಗುತ್ತದೆ, ನಾವು ಕೂಡ ಸರ್ಕಾರಕ್ಕೆ ವರದಿ ಕಳುಹಿಸುತ್ತಿದ್ದೇವೆ, ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದರೆ ಮಾಧ್ಯಮಗಳಲ್ಲಿ ಇದನ್ನು ನೋಡುವ ಮೃತ ರೋಗಿಗಳ ಕುಟುಂಬಸ್ಥರಿಗೆ, ಸಂಬಂಧಿಕರಿಗೆ, ಸಾಮಾನ್ಯ ಜನತೆಗೆ ಯಾವ ರೀತಿ ಭಾವನೆ ಬರುತ್ತದೆ, ಆದುದರಿಂದ ದಯವಿಟ್ಟು ನಿಮ್ಮಷ್ಟಕ್ಕೆ ವರದಿ ಮಾಡಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ರೋಹಿಣಿ ಸಿಂಧೂರಿ ಮನವಿ ಮಾಡಿದರು.

ನನ್ನ ಮೇಲೆ ಆರೋಪ ಎಷ್ಟು ಸರಿ?: ಮೈಸೂರಿನಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವುದಿಲ್ಲ, ಇಲ್ಲಿ ಘಟಕವಿಲ್ಲ, ನಾವು ಬಳ್ಳಾರಿಯಿಂದ ತರಿಸುವುದು, ಒಂದು ವೇಳೆ ಮೈಸೂರಿನಲ್ಲಿ ಇಂತಹ ಘಟನೆ ಆಗಿದ್ದರೆ ಅಥವಾ ಆದರೆ ನಾವು ಬಳ್ಳಾರಿ ಜಿಲ್ಲಾಧಿಕಾರಿ ಮೇಲೆ ಆರೋಪ ಮಾಡಲು ಆಗುತ್ತದೆಯೇ ಎಂದು ಕೇಳಿದ ರೋಹಿಣಿ ಸಿಂಧೂರಿಯವರು, ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಎಲ್ಲರೂ ಸಹಕಾರದಿಂದ ಕೆಲಸ ಮಾಡಬೇಕು, ನಮ್ಮ ಜಿಲ್ಲೆಯ ರೋಗಿಗಳಿಗೆ ಸಾಕಷ್ಟು ಆಕ್ಸಿಜನ್ ಪೂರೈಸುವುದು ನಮ್ಮ ಜವಾಬ್ದಾರಿ, ನಾವು ಮಾಡುತ್ತಿದ್ದೇವೆ ಎಂದರು.

ಎಲ್ಲರೂ ಆತಂಕದಲ್ಲಿದ್ದಾರೆ, ಜನ ಭೀತಿಯಿಂದ ಜೀವನ ಮಾಡುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ದೋಷಾಪೋಪಣೆ ಮಾಡುತ್ತಾ ಕೂರುವುದು ಸರಿಯಲ್ಲ, ಯಾವ ಜಿಲ್ಲೆಯಲ್ಲಿಯೂ ಆಸ್ಪತ್ರೆಯಿಂದ ಆಸ್ಪತ್ರೆಗೆ ಆಕ್ಸಿಜನ್ ಹೋಗುವುದಿಲ್ಲ, ಉತ್ಪಾದಕರಿಂದ ಆಸ್ಪತ್ರೆಗೆ ಪೂರೈಕೆಯಾಗುತ್ತದೆ. ಆದರೂ ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಾನು ಚಾಮರಾಜನಗರ ಜಿಲ್ಲೆಗೆ 40 ಸಿಲಿಂಡರ್ ಆಕ್ಸಿಜನ್ ಕಳುಹಿಸಿದ್ದೇನೆ, ಇನ್ನು ಯಾವ ರೀತಿ ನಾನು ಸಹಕಾರ ನೀಡಬೇಕಿತ್ತು, ಆ ರೀತಿ ನಾನು ಕಳುಹಿಸಬಾರದು ಎಂದು ಆದೇಶ ಹೊರಡಿಸಿದ್ದರೆ ಒಂದು ಸಿಲಿಂಡರ್ ಕೂಡ ಹೋಗುತ್ತಿರಲಿಲ್ಲವಲ್ಲವೇ ಎಂದು ಸಿಂಧೂರಿ ಪ್ರಶ್ನಿಸಿದರು.

ಸರ್ಕಾರ ತನಿಖೆ ಮಾಡಲು ಆಯೋಗ ನೇಮಿಸಿದ್ದು, ತನಿಖೆ ಮಾಡುತ್ತಿದ್ದಾರೆ, ಸತ್ಯಾಂಶ ಗೊತ್ತಾಗುತ್ತದೆ, ನನ್ನ 10 ವರ್ಷ ಸೇವಾವಧಿಯಲ್ಲಿ ಇಲ್ಲಿಯವರೆಗೆ ಜನತೆಗೆ ವಿರುದ್ಧವಾದ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ, ಎಲ್ಲರ ಜೀವ ಕೂಡ ನಮಗೆ ಮುಖ್ಯ ಎಂದು ಭಾವುಕರಾಗಿ ನುಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com