ಕೋವಿಡ್-19: ಖಾಸಗಿ ಆಸ್ಪತ್ರೆಗಳಲ್ಲಿ ಡಿಸ್ಚಾರ್ಜ್ ಆಗುವ ಸೋಂಕಿತರ ಮೇಲೆ ಸರ್ಕಾರ ನಿಗಾ!

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದುವ ಕೋವಿಡ್ ಸೋಂಕಿತರು ಮತ್ತು ಖಾಲಿ ಆಗುವ ಹಾಸಿಗೆಗಳ ಸ್ಟೇಟಸ್ ಅನ್ನು ಇನ್ನು ಮುಂದೆ ಪ್ರತಿ ದಿನ ಕೋವಿಡ್ ವಾರ್ ರೂಂ ಮತ್ತು ಆಪ್ತಮಿತ್ರ ಪೋರ್ಟಲ್‌ಗೆ ನೀಡುವಂತೆ ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದುವ ಕೋವಿಡ್ ಸೋಂಕಿತರು ಮತ್ತು ಖಾಲಿ ಆಗುವ ಹಾಸಿಗೆಗಳ ಸ್ಟೇಟಸ್ ಅನ್ನು ಇನ್ನು ಮುಂದೆ ಪ್ರತಿ ದಿನ ಕೋವಿಡ್ ವಾರ್ ರೂಂ ಮತ್ತು ಆಪ್ತಮಿತ್ರ ಪೋರ್ಟಲ್‌ಗೆ ನೀಡುವಂತೆ ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. 

ಬೆಂಗಳೂರಿನಲ್ಲಿ ಗುರುವಾರ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖಂಡರುಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿಗ ಕೋವಿಡ್ ಚಿಕಿತ್ಸಾ ಹಾಸಿಗೆ ಉಸ್ತುವಾರಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರು, ಪ್ರತಿ ದಿನ ವೈದ್ಯಕೀಯ ಕಾಲೇಜುಗಳಿಂದ ಎಷ್ಟು ರೋಗಿಗಳು ದಾಖಲಾಗುತ್ತಾರೆ..? ಎಷ್ಟು ರೋಗಿಗಳು ಬಿಡುಗಡೆ ಹೊಂದುತ್ತಾರೆ ಎಂಬುದರ ಮಾಹಿತಿ ಸಿಗುತ್ತಿರಲಿಲ್ಲ. ಆದರೆ ಇಂದಿನ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. 

ಕೆಲವು ಪ್ರಕರಣಗಳಲ್ಲಿ ಸೋಂಕಿತ ವ್ಯಕ್ತಿಗಳು ಅದಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು, ಸೋಂಕಿತ ವ್ಯಕ್ತಿಗಳ ಹೆಸರಿನಲ್ಲಿ ಬೇರೆ ಸೋಂಕಿತರನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಅಕ್ರಮಗಳನ್ನು ತಡೆಯುವ ಸಲುವಾಗಿ ಸೋಂಕಿತರ ವ್ಯಕ್ತಿಗಳ ದಾಖಲು ಹಾಗೂ ಬಿಡುಗಡೆ ಕುರಿತ ಮಾಹಿತಿ ನೀಡಲು ಸಾಫ್ಟ್ ವೇರ್ ಒಂದನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಸಾಫ್ಟ್ ವೇರ್ ಮೂಲಕ ಸೋಂಕಿತ ವ್ಯಕ್ತಿಗಳು ಬಿಡುಗಡೆಗೊಂಡ ಮಾಹಿತಿ ಬಿಬಿಎಂಪಿಗೆ ತಿಳಿಯಲಿದೆ. ವ್ಯಕ್ತಿ ಆಸ್ಪತ್ರೆಗೆ ದಾಖಲಾದ 10 ದಿನಗಳ ಬಳಿಕ ಸೋಂಕಿತರ ವ್ಯಕ್ತಿಯ ಸ್ಥಿತಿಗತಿ ಕುರಿತು ಈ ಸಾಫ್ಟ್ ವೇರ್ ಬಿಬಿಎಂಪಿಗೆ ಮಾಹಿತಿ ನೀಡಲಿದೆ. ಸೋಂಕಿತ ವ್ಯಕ್ತಿಯ ಅಗತ್ಯತೆಗೆ ತಕ್ಕಂತೆ ಹಾಸಿಗೆ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಬಿಬಿಎಂಪಿಗೆ ಮಾಹಿತಿ ತಿಳಿದುಬರುತ್ತಿದ್ದಂತೆಯೇ ನೋಡಲ್ ಅಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ನೀಡಲಿದ್ದಾರೆ. 

ಸರ್ಕಾರಕ್ಕೆ ನೀಡಬೇಕಾಗಿರುವ ಹಾಸಿಕೆಗಳ ಕುರಿತು ಮನವರಿಕೆ ಮಾಡಿಕೊಳ್ಳುವ ಸಂಬಂಧ ಪ್ರತಿಯೊಂದು ಖಾಸಗಿ ಆಸ್ಪತ್ರೆಗೆ ಒಬ್ಬ ಕೆಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು. ಪ್ರತಿ ಐದು ಆಸ್ಪತ್ರೆಗಳಿಗೆ ಒಬ್ಬ ಹಿರಿಯ ಅಧಿಕಾರಿಯನ್ನು ನೇಮಿಸಿ ಒಟ್ಟಾರೆ ಸರ್ಕಾರದ ಪಾಲಿನ ಹಾಸಿಗೆಗಳು ಸಮಪರ್ಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com