ಹತ್ತನೇ ತರಗತಿ ವಿದ್ಯಾರ್ಥಿಗಳು ವಿಚಲಿತರಾಗದೆ ಪರೀಕ್ಷೆಗೆ ಉತ್ತಮ ತಯಾರಿ ಮಾಡಿಕೊಳ್ಳಿ: ಶಿಕ್ಷಣ ಸಚಿವ ಸುರೇಶ್ ಕುಮಾರ್ 

ರಾಜ್ಯದಲ್ಲಿ ಜೂನ್ 21ಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಿಗದಿಯಾಗಿದ್ದು, ಸದ್ಯಕ್ಕೆ ಅದೇ ದಿನವನ್ನು ನಿಶ್ಚಯಿಸಲಾಗಿದೆ. ಕೊರೋನಾ ಸೋಂಕಿನ ಆತಂಕದ ಮಧ್ಯೆ ವಿದ್ಯಾರ್ಥಿಗಳು ವಿಚಲಿತರಾಗಬೇಡಿ, ಆರೋಗ್ಯ ಕಾಪಾಡಿಕೊಂಡು ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ ಎಂದು ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ರಾಜ್ಯದಲ್ಲಿ ಜೂನ್ 21ಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಿಗದಿಯಾಗಿದ್ದು, ಸದ್ಯಕ್ಕೆ ಅದೇ ದಿನವನ್ನು ನಿಶ್ಚಯಿಸಲಾಗಿದೆ. ಕೊರೋನಾ ಸೋಂಕಿನ ಆತಂಕದ ಮಧ್ಯೆ ವಿದ್ಯಾರ್ಥಿಗಳು ವಿಚಲಿತರಾಗಬೇಡಿ, ಆರೋಗ್ಯ ಕಾಪಾಡಿಕೊಂಡು ಯಾವುದೇ ಗೊಂದಲ, ಆತಂಕ, ಉದ್ವೇಗಕ್ಕೀಡಾಗದೆ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಗ್ರಾಮದಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ದ್ವಿತೀಯ ಪಿಯುಸಿ ಪರೀಕ್ಷೆ ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ, ಮುಂದಿನ ದಿನಾಂಕವನ್ನು ಪರೀಕ್ಷೆ ಆರಂಭಕ್ಕೆ 15-20 ದಿನಗಳ ಮೊದಲು ತಿಳಿಸಲಾಗುವುದು. ಸದ್ಯ ನಿಗದಿಮಾಡಿರುವ ಪಟ್ಟಿಯಂತೆ ಹತ್ತನೇ ತರಗತಿ ಪರೀಕ್ಷೆ ಜೂನ್ 21ಕ್ಕೆ ಆರಂಭವಾಗುತ್ತದೆ. ಇದರಲ್ಲಿ ಯಾವುದೇ ಗೊಂದಲ ಬೇಡ, ವಿದ್ಯಾರ್ಥಿಗಳು ಎಂದಿನಂತೆ ಪರೀಕ್ಷೆಗೆ ತಯಾರಾಗಿ ಎಂದರು.

ರಾಜ್ಯದಲ್ಲಿ ಈ ವರ್ಷ ಜೂನ್ 21ರಿಂದ ಜುಲೈ 5ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ಕಳೆದ ವರ್ಷ ಕೊರೋನಾದಿಂದ ಮುಂದೂಡಲ್ಪಟ್ಟಿದ್ದ ಪರೀಕ್ಷೆಯನ್ನು ಕೊನೆಗೆ ಶಿಕ್ಷಣ ಸಚಿವರು ಸುರಕ್ಷತಾ ಕ್ರಮಗಳೊಂದಿಗೆ ನಡೆಸಿಯೇ ಬಿಟ್ಟಿದ್ದರು.

ಕೊರೋನಾ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ಮಕ್ಕಳಿಗೆ ಶಾಲೆಗಳಿಲ್ಲ, ಮನೆಯಲ್ಲಿಯೇ ಆನ್ ಲೈನ್ ಪಾಠ, ಅದೂ ಸರಿಯಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತಿಲ್ಲ, ಮನೆಯಲ್ಲಿ ಕುಳಿತಿರುವ ಮಕ್ಕಳ ಮಾನಸಿಕ ಆರೋಗ್ಯ ಈ ಸಮಯದಲ್ಲಿ ಅತ್ಯಂತ ಮುಖ್ಯವಾಗಿದೆ.

ಈ ಸಂದರ್ಭದಲ್ಲಿ ಆಪ್ತ ಸಮಾಲೋಚನೆ ಅಗತ್ಯವಿರುವ ಮಕ್ಕಳಿಗಾಗಿ ರಾಜ್ಯದಲ್ಲಿ ಉಚಿತ ಟೆಲಿ ಕೌನ್ಸೆಲಿಂಗ್ ಆರಂಭಿಸಲಾಗಿದೆ. ಮಕ್ಕಳು ಹಾಗೂ ಪೋಷಕರು 14499 ಸಂಖ್ಯೆಗೆ ಕರೆ ಮಾಡಿ ಉಚಿತವಾಗಿ ಆಪ್ತ ಸಮಾಲೋಚನೆ ಪಡೆಯಬಹುದಾಗಿದೆ. ಜೊತೆಗೆ ರಾಜ್ಯಾದ್ಯಂತ ಚಾಲ್ತಿಯಲ್ಲಿರುವ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೂ ಕರೆ ಮಾಡಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com