ಕೊರೋನಾ 2ನೇ ಅಲೆಯಲ್ಲಿ ಉಸಿರಾಟ ಸಮಸ್ಯೆಯಿಂದ ಹೆಚ್ಚು ಸಾವು ಸಂಭವಿಸುತ್ತಿವೆ: ತಜ್ಞರು

ರಾಜ್ಯದಲ್ಲಿ ಕೊರೋನಾ ಹೆಮ್ಮಾರಿ ವೈರಸ್ ಸಾವಿನ ಸುನಾಮಿಯನ್ನೇ ಎಬ್ಬಿಸಿದ್ದು, ಶುಕ್ರವಾರ ಒಂದೇ ರಾಜ್ಯದಲ್ಲಿ ದಾಖಲೆಯ 592 ಮಂದಿ ಪ್ರಾಣವನ್ನು ಕಸಿದುಕೊಂಡಿದೆ. ಇಷ್ಟೊಂದು ಜನರು ಒಂದೇ ದಿನ ಮೃತಪಟ್ಟಿರುವುದು ದಾಖಲೆಯಾಗಿದೆ. 

Published: 08th May 2021 10:58 AM  |   Last Updated: 08th May 2021 12:48 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೆಮ್ಮಾರಿ ವೈರಸ್ ಸಾವಿನ ಸುನಾಮಿಯನ್ನೇ ಎಬ್ಬಿಸಿದ್ದು, ಶುಕ್ರವಾರ ಒಂದೇ ರಾಜ್ಯದಲ್ಲಿ ದಾಖಲೆಯ 592 ಮಂದಿ ಪ್ರಾಣವನ್ನು ಕಸಿದುಕೊಂಡಿದೆ. ಇಷ್ಟೊಂದು ಜನರು ಒಂದೇ ದಿನ ಮೃತಪಟ್ಟಿರುವುದು ದಾಖಲೆಯಾಗಿದೆ. 

ಏ.5ರಂದು ಒಂದೇ ದಿನ 346 ಮಂದಿ ಮೃತಪಟ್ಟಿದ್ದೇ ಈ ವರೆಗಿನ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿತ್ತು. ಶುಕ್ರವಾರ ಸುಮಾರು 2 ನಿಮಿಷಕ್ಕೆ ಒಬ್ಬರಂತೆ ಕೋವಿಡ್ ನಿಂದ ಮೃತರಾಗಿದ್ದು, ಮರಣ ಪ್ರಮಾಣ ಶೇ.1.21ರಷ್ಟಾಗಿದೆ. ಕಳೆದ ಮಾರ್ಚ್ 2 ರಂದು ಶೇ.1.60 ಮರಣ ದರ ದಾಖಲಾಗಿತ್ತು. 

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 346 ಮಂದಿ ಮೃತರಾಗಿದ್ದು, ಉಳಿದಂತೆ ಬಳ್ಳಾರಿ, ಹಾಸನ ಮತ್ತು ಮೈಸೂರಿನಲ್ಲಿ 20ಕ್ಕಿಂತ ಹೆಚ್ಚು ಮಂದಿ ಮರಣವನ್ನಪ್ಪಿದ್ದಾರೆ. 

ರಾಜ್ಯದಲ್ಲಿ ನಿನ್ನೆ ಮೃತಪಟ್ಟ 592 ಮಂದಿ ಪೈಕಿ 440 ಮಂದಿ ಉಸಿರಾಟ ಸಮಸ್ಯೆಯಿಂದಲೇ ಸಾವನ್ನಪ್ಪಿದ್ದು, ಇದೀಗ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಈ ನಡುವೆ ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ತಜ್ಞರು, ಕೊರೋನಾ ಎರಡನೆ ಅಲೆಯಲ್ಲಿ ಸಾಕಷ್ಟು ಜನರು ಉಸಿರಾಟ ಸಮಸ್ಯೆಯಿಂದಲೇ ಸಾವನ್ನಪ್ಪುತ್ತಿದ್ದಾರೆ. 2ನೇ ಅಲೆಯಲ್ಲಿ ಉಸಿರಾಟ ಸಮಸ್ಯೆಯೇ ದೊಡ್ಡ ಲಕ್ಷಣವಾಗಿದೆ. ಮೊದಲ ಅಲೆಗೆ ಹೋಲಿಕೆ ಮಾಡಿದರೆ ಎರಡನೇ ಅಲೆಯಲ್ಲಿ ಸಾಕಷ್ಟು ಜನರಲ್ಲಿ ಉಸಿರಾಟ ಸಮಸ್ಯೆ ಎದುರಾಗುತ್ತಿದೆ. ಇದರ ಜೊತೆಗೆ ಜ್ವರ, ಮೈ ಕೈ ನೋವು, ಅತೀವ್ರ ತಲೆನೋವು ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ ಎಂಡು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿರುವ ಜಯದೇವ ಆಸ್ಪತ್ರೆಯ ವೈದ್ಯ ಡಾ.ಸಿಎನ್.ಮಂಜುನಾಥ್ ಅವರು ಹೇಳಿದ್ದಾರೆ. 

ಕೊರೋನಾ ನಿಗ್ರಹಿಸುವಲ್ಲಿ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಿ ಶ್ರಮಿಸುತ್ತಿರುವ ವೈದ್ಯಕೀಯ ತಜ್ಞರು ಮಾತನಾಡಿ, ಸೋಂಕಿಗೊಳಗಾದ ಸಾಕಷ್ಟು ಜನರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತವರು ಐಸಿಯು ಹಾಗೂ ಮನೆಗಳಲ್ಲಿಯೇ ಕೊನೆಯುಸಿರೆಳೆಯುತ್ತಿದ್ದಾರೆ. ಕೆಲವರಲ್ಲಿ ಆಕ್ಸಿಜನ್ ಪ್ರಮಾಣ ಅತ್ಯಂತ ಕಡಿಮೆಯಿದ್ದರೂ, ಉಸಿರಾಟ ಸಮಸ್ಯೆಗಳೇ ಕಾಣಿಸಿಕೊಳ್ಳುತ್ತಿಲ್ಲ. ಇಂತಹ ಪ್ರಕರಣಗಳೂ ವರದಿಯಾಗುತ್ತಿವೆ ಎಂದು ಡಾ.ಎಸ್.ಸಚ್ಚದಾನಂದ ಅವರು ಹೇಳಿದ್ದಾರೆ. 

ಶೀಘ್ರಗತಿಯಲ್ಲಿ ಪರೀಕ್ಷೆಗೊಳಗಾಗುವುದು, ಐಸೋಲೇಷನ್ ಗೊಳಗಾಗುವುದು, ಮನೆಗಳಲ್ಲಿ ಆಮ್ಲಜನಕ ಪ್ರಮಾಣ ಪರಿಶೀಲಿಸುವುತು ಉತ್ತಮ. ಸಾಕಷ್ಟು ಯುವಕರದಲ್ಲಿ ಗಂಟಲಲ್ಲಿ ನೋವು, ಜ್ವರ ಹಾಗೂ ಇತರೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಆದರೆ, 7 ದಿನಗಳ ಬಳಿಕ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ. ಆಮ್ಲಜನಕ ಪ್ರಮಾಣ ಶೇ.94ಕ್ಕೆ ಇಳಿದ ಕೂಡಲೇ ಪರಿಸ್ಥಿತಿ ಗಂಭೀರವಾಗಿ, ಸಾವು ಸಂಭವಿಸುತ್ತಿವೆ ಎಂದು ಡಾ.ಮೆಹ್ತಾ ಅವರು ಹೇಳಿದ್ದಾರೆ. 

ಲಕ್ಷಣ ಕಂಡು ಬಂದು 7-10 ದಿನಗಳಾದರೂ ಸೋಂಕು ಕಡಿಮೆಯಾಗದಿದ್ದರೆ ಜನರು ನಿರ್ಲಕ್ಷ್ಯ ತೋರಬಾರದು. ಅಂತಹವರು ಆಮ್ಲಜನಕ ಪ್ರಮಾಣವನ್ನು ಆಗಾಗ ಪರಿಶೀಲಿಸಿಕೊಳ್ಳುತ್ತಿರಬೇಕು. ಒಂದು ವೇಳೆ ಕಡಿಮೆಯಾಗುತ್ತಿದ್ದರೆ, ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಡಾ.ಮಂಜುನಾಥ್ ಅವರು ತಿಳಿಸಿದ್ದಾರೆ. 

ರೂಪಾಂತರಿ ಕೊರೋನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿರುವ ಪರಿಣಾಮ 20-40 ವರ್ಷದ ಸೋಂಕಿತರೂ ಕೂಡ ಇದೀಗ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಈ ವೈರಸ್ ನೇರವಾಗಿ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. 

ಡಾ.ವಿಶಾಲ್ ರಾವ್ ಅವರು ಮಾತನಾಡಿ, ಕೆಲವರಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗುತ್ತಿದ್ದರೂ ಉಸಿರಾಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿಲ್ಲ. ಏಕಾಏಕಿ 90ಕ್ಕೆ ಇಳಿದಾಗ ಮಾತ್ರ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. 

ಸೋಂಕಿನಿಂದ ಗುಣಮುಖರಾಗಿದ್ದರೂ, ಕೆಲವು ರೋಗಿಗಳಲ್ಲಿ ರಕ್ತ ತಿಳಿಯಾಗುತ್ತಿರುವ ಸಮಸ್ಯೆಗಳು ಕಂಡು ಬರುತ್ತಿವೆ. ಇಂತಹವರು ಆಕ್ಲಿಜನ್ ಪ್ರಮಾಣವನ್ನು ಪರಿಶೀಲಿಸಿಕೊಳ್ಳುತ್ತಿರಲೇ ಬೇಕಾಗುತ್ತದೆ. ಸೋಂಕು ಕಾಣಿಸಿಕೊಂಡ ಮೊದಲ ದಿನದಿಂದ 7 ದಿನಗಳಲ್ಲಿ ಸೋಂಕು ಉಲ್ಭಣಗೊಳ್ಳುತ್ತಲೇ ಇದೆ ಎಂದು ತಿಳಿದು ಬಂದರೆ, ಕೂಡಲೇ ವೈದ್ಯಕೀಯ ನೆರವು ಪಡೆದುಕೊಳ್ಳಬೇಕೆಂದು ಡಾ.ಮಂಜುನಾಥ್ ಅವರು ಹೇಳಿದ್ದಾರೆ. 


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp