ಕೇವಲ 100 ಘಂಟೆಗಳಲ್ಲಿ ಬಿಬಿಎಂಪಿ ಬೆಡ್ ಬುಕ್ಕಿಂಗ್ ವಿಧಾನದಲ್ಲಿ ಮಹತ್ವದ 4 ಸುಧಾರಣೆಗಳು: ತೇಜಸ್ವಿ ಸೂರ್ಯ

ಬಿಬಿಎಂಪಿ ಬೆಡ್ ಹಂಚಿಕೆ ಪದ್ಧತಿಯಲ್ಲಿ  ಹಲವು ಸುಧಾರಣೆಗಳಿಗೆ ಕೋರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಕೇವಲ 100 ಘಂಟೆಗಳಲ್ಲಿ ಮಹತ್ವದ ನಾಲ್ಕು ಸುಧಾರಣೆಗಳು ಕಾರ್ಯರೂಪಕ್ಕೆ ಬಂದಿರುವುದಾಗಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಬಿಬಿಎಂಪಿ ಬೆಡ್ ಹಂಚಿಕೆ ಪದ್ಧತಿಯಲ್ಲಿ ಹಲವು ಸುಧಾರಣೆಗಳಿಗೆ ಕೋರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 
ಅವರಿಗೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಕೇವಲ 100 ಘಂಟೆಗಳಲ್ಲಿ ಮಹತ್ವದ ನಾಲ್ಕು ಸುಧಾರಣೆಗಳು ಕಾರ್ಯರೂಪಕ್ಕೆ ಬಂದಿರುವುದಾಗಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೇವೆಗೆ ನಿಯೋಜನೆಗೊಂಡಿರುವ  ಅಧಿಕಾರಿಗಳು ಹಾಗೂ ತಂತ್ರಜ್ಞರನ್ನೊಳಗೊಂಡ ತಂಡಗಳ ಜೊತೆಗೆ ಹಲವು ಸುತ್ತಿನ ಮ್ಯಾರಥಾನ್ ಸಭೆಗಳ  ನಂತರ, ಬೆಡ್ ಹಂಚಿಕೆ ಕುರಿತಂತೆ ರೋಗಿಗಳಿಗೆ ನೇರ ಎಸ್.ಎಂ.ಎಸ್ ರವಾನೆ, ಬೆಡ್ ಬುಕಿಂಗ್ ಪದ್ಧತಿಯಲ್ಲಿ ಈ ಮುಂಚೆ ಜಾರಿಯಲ್ಲಿದ್ದ ಮ್ಯಾನುವಲ್ ಅನ್ ಬ್ಲಾಕ್ ವಿಧಾನ ನಿಷ್ಕಿಯ, ಬೆಡ್ ಬುಕಿಂಗ್ ನಂತರ  10 ಘಂಟೆಗಳ ವರೆಗೆ ನೀಡಲಾಗಿದ್ದ ಅವಧಿ 4 ಘಂಟೆಗೆ ಕಡಿತಗೊಳಿಸುವಿಕೆ. ಬೆಡ್ ಹಂಚಿಕೆ  ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ 2 ಹಂತದ ಲಾಗಿನ್ ದೃಢೀಕರಣದಂತಹ ನಾಲ್ಕು  ಸುಧಾರಣೆಗಳನ್ನು ತತ್‌ ಕ್ಷಣಕ್ಕೆ ಕಾರ್ಯರೂಪಕ್ಕೆ ಈಗಾಗಲೇ ಜಾರಿಗೆ ತರಲಾಗಿದೆ ಎಂದರು.

ಬೆಡ್ ಹಂಚಿಕೆಗೆ ಡಿಜಿಟಲ್ ಸರದಿ ಪದ್ಧತಿ, ರಿಸರ್ವೇಷನ್ ನಲ್ಲಿ ಆಗುತ್ತಿರುವ ಸಮಯಮಿತಿ ಕಡಿತಗೊಳಿಸುವಿಕೆ  ಹಾಗೂ ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಅಥವಾ ಓಟಿಪಿ ಮೂಲಕ ನೋಂದಣಿ /ಡಿಸ್ಚಾರ್ಜ್‌ ಸೇರಿದಂತೆ ಹಲವು ಸುಧಾರಣೆಗಳು  ಮುಂದಿನ ಕೆಲವು ಘಂಟೆಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ ಎಂದು ಸಂಸದರು ಇದೇ ಸಂದರ್ಭದಲ್ಲಿ ವಿವರಿಸಿದರು.

ಬೆಡ್ ಹಂಚಿಕೆ ಸಾಫ್ಟ್ ವೇರ್ ನಲ್ಲಿನ ಹಲವು ನ್ಯೂನತೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಕ್ಷಿಪ್ರ ಕ್ರಮ ತೆಗೆದುಕೊಳ್ಳಲು  ಆದೇಶ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಕಾರ್ಯವೈಖರಿಯನ್ನು ಶ್ಲಾಘಿಸಿದ ತೇಜಸ್ವಿ, ಕೇವಲ 100 ಘಂಟೆಗಳ  ಅವಧಿಯಲ್ಲಿ   ಬೆಡ್ ಹಂಚಿಕೆ ವಿಧಾನದಲ್ಲಿದ್ದ ಹಲವು ಲೋಪದೋಷಗಳನ್ನು ಸರಿಪಡಿಸಿ, ಕಾರ್ಯರೂಪಕ್ಕೆ ತರಲಾಗಿದೆ. ಈ ಹಿಂದೆ ರೋಗಿಗಳ ಗಮನಕ್ಕೆ ತರದೇ ಆಗುತ್ತಿದ್ದ  ಬೆಡ್ ಹಂಚಿಕೆಯನ್ನು ತಡೆಗಟ್ಟಲು ಬೆಡ್ ಹಂಚಿಕೆ ಕುರಿತಾದ ಎಸ್.ಎಂ.ಎಸ್ ಅನ್ನು ನೇರ ರೋಗಿಗಳ ದೂರವಾಣಿ ಸಂಖ್ಯೆಗೆ ಕಳುಹಿಸುವ ವ್ಯವಸ್ಥೆ ಜಾರಿಯಾಗಿರುವುದು ಗಮನಾರ್ಹ ಬೆಳವಣಿಗೆ ಎಂದರು.

ವಾರ್ ರೂಮ್ ಗಳಲ್ಲಿ ಬೆಡ್ ಹಂಚಿಕೆ ಸಮಯದಲ್ಲಿ ಆಗುತ್ತಿದ್ದ ಲೋಪದೋಷಗಳನ್ನು ತಡೆಗಟ್ಟಲು, ಈ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ  2 ಹಂತದ ಲಾಗಿನ್ ಧೃಢೀಕರಣ ಕಡ್ಡಾಯಗೊಳಿಸಲು ಸೂಚಿಸಲಾಗಿದೆ.ಇದರಿಂದ ಪ್ರತಿ ಬೆಡ್ ಬುಕಿಂಗ್ ಗೂ ಕೂಡ ಹೊಣೆಗಾರಿಕೆ ದೊರೆತಂತಾಗುವುದರಿಂದ ಬೆಡ್ ಹಂಚಿಕೆಯಲ್ಲಿ ಅನವಶ್ಯಕ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಲಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಬಿಬಿಎಂಪಿ  ಸೇರಿದಂತೆ  ವಲಯವಾರು ಸಹಾಯವಾಣಿಗಳಿಗೆ ಕರೆ ಮಾಡುವ ರೋಗಿಗಳ ವಿವರಗಳನ್ನು ಲೆಡ್ಜರ್ (ಲಿಖಿತ ಟಿಪ್ಪಣಿ) ಸೇರಿದಂತೆ ಇತರ ವಿಧಗಳಲ್ಲಿ  ನೋಟ್ ಮಾಡಿಕೊಳ್ಳುವ ವಿಧಾನವಿತ್ತು. ಈ ವಿಧವು ಪಾರದರ್ಶಕತೆಗೆ ಒಳಗೊಂಡಿರದೆ, ಹಲವು ಹಸ್ತಕ್ಷೇಪಗಳಿಗೆ ಕಾರಣವಾಗಿತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಡಿಜಿಟಲ್ ಸರದಿ ಪದ್ಧತಿಯನ್ನು ಜಾರಿಗೆ ತರಲಾಗಿದ್ದು, ರೋಗಿಗಳ ತುರ್ತು ಅಗತ್ಯತೆ ಮೇರೆಗೆ ಬೆಡ್ ಹಂಚಿಕೆ ಮಾಡಲು ಆದ್ಯತೆ ಒದಗಿಸಲಾಗಿದೆ. ಇದರಿಂದ ಪಾರದರ್ಶಕತೆಗೆ ದಾರಿ ಮಾಡಿಕೊಟ್ಟಂತಾಗಿದೆ ಎಂದರು.

ಡ್ಯಾಶ್ ಬೋರ್ಡ್ ಮೂಲಕ ಬೆಡ್ ಹಂಚಿಕೆಗೆ ಸಂಬಂಧಿಸಿದ ಹಲವು ವಿವರಗಳನ್ನು  ಸಾರ್ವಜನಿಕರ ಅವಗಾಹನೆಗೆ ತಿಳಿಸುವ ವ್ಯವಸ್ಥೆಗೆ ಸೂಚಿಸಲಾಗಿದ್ದು,  ಇದರ ವಿವರಗಳನ್ನು ನೇರವಾಗಿ ರೋಗಿಗಳ ಮೊಬೈಲ್ ಸಂಖ್ಯೆಗೆ ತಿಳಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಆಸ್ಪತ್ರೆಗಳಲ್ಲಿ ರಿಜಿಸ್ಟ್ರೇಷನ್ ಹಾಗೂ  ಡಿಸ್ಚಾರ್ಜ್ ಗೆ ಸಂಬಂಧಿಸಿದ ಮಾಹಿತಿಯನ್ನು ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಅಥವಾ ಓಟಿಪಿ ಆಧಾರಿತ  ನೋಂದಣಿಗೆ ಸೂಚಿಸಲಾಗಿದೆ ಎಂದು ಸಂಸದರು ತಿಳಿಸಿದರು.

ಪ್ರಸ್ತುತ ಕೋವಿಡ್ ನಿರ್ವಹಣೆಗೆ  3 ಸಾಫ್ಟ್ ವೇರ್  ( INDEX, C.H.B.M.S &SAST) ಗಳಿದ್ದು, ಇವುಗಳಲ್ಲಿನ ಯಾವುದಾದರೂ ಒಂದು ಸಾಫ್ಟ್ ವೇರ್ ಕಾರ್ಯನಿರ್ವಹಿಸದಿದ್ದರೆ ಉಳಿದವುಗಳ  ನಿರ್ವಹಣೆ ಸಮರ್ಪಕವಾಗಿರದು. ಇವೆಲ್ಲವುಗಳನ್ನು ಸಂಯೋಜನೆಗೊಳಿಸಿ ಏಕೀಕೃತ ಸಾಫ್ಟ್ ವೇರ್ ಅಭಿವೃದ್ಧಿಗೆ ಸೂಚಿಸಲಾಗಿದೆ.ಶೀಘ್ರದಲ್ಲಿಯೇ ಇವುಗಳನ್ನು ಸಹ ಕಾರ್ಯಾಚರಣೆಗೆ ತರಲಾಗುವುದು ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com