ಕೋವಿಡ್-19 ರೋಗಿಗಳಿಗೆ ನೆರವು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನಿಂದ ಸಹಾಯವಾಣಿ 

ಕೊರೋನಾ ಸಂಕಷ್ಟ ಕಾಲದಲ್ಲಿ ಜನರ ಅಗತ್ಯಗಳನ್ನೆಲ್ಲಾ ಸರ್ಕಾರವೇ ಮಾಡಬೇಕು, ಸರ್ಕಾರದಿಂದಲೇ ವೈದ್ಯಕೀಯ ನೆರವು ಹಾಗೂ ಇತರ ಸೌಲಭ್ಯ ಸಿಗಬೇಕು ಎಂದು ಕೂತರೆ ಆಗುವುದಿಲ್ಲ ಎಂದು ಜನರಿಗೆ ಅರ್ಥವಾಗುತ್ತಿದೆ. ಅದಕ್ಕಾಗಿ ಇತ್ತೀಚೆಗೆ ಗುಂಪುಗಳನ್ನು ಮಾಡಿಕೊಂಡು ಜನರು ಕೈಲಾದ ಸಹಾಯ ಮಾಡುತ್ತಿದ್ದಾರೆ.
ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತೆ
ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತೆ

ಮಂಗಳೂರು: ಕೊರೋನಾ ಸಂಕಷ್ಟ ಕಾಲದಲ್ಲಿ ಜನರ ಅಗತ್ಯಗಳನ್ನೆಲ್ಲಾ ಸರ್ಕಾರವೇ ಮಾಡಬೇಕು, ಸರ್ಕಾರದಿಂದಲೇ ವೈದ್ಯಕೀಯ ನೆರವು ಹಾಗೂ ಇತರ ಸೌಲಭ್ಯ ಸಿಗಬೇಕು ಎಂದು ಕೂತರೆ ಆಗುವುದಿಲ್ಲ ಎಂದು ಜನರಿಗೆ ಅರ್ಥವಾಗುತ್ತಿದೆ. ಅದಕ್ಕಾಗಿ ಇತ್ತೀಚೆಗೆ ಗುಂಪುಗಳನ್ನು ಮಾಡಿಕೊಂಡು ಜನರು ಕೈಲಾದ ಸಹಾಯ ಮಾಡುತ್ತಿದ್ದಾರೆ.

ಮಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಜನರಿಗೆ ಸಹಾಯ ಮಾಡಲೆಂದು ಯುವ ವೃತ್ತಿಪರ ಡಾ ಶ್ರೀಶ ಭಟ್ ಮತ್ತು ಅವರ 37 ಸದಸ್ಯರ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಸಹಾಯವಾಣಿಯನ್ನು ಆರಂಭಿಸಿದ್ದಾರೆ.

ಮೊನ್ನೆ ಶನಿವಾರ ಆರಂಭವಾದ ಈ ಟ್ರಸ್ಟ್ ನಲ್ಲಿರುವ ಹಲವು ವಿದ್ಯಾರ್ಥಿಗಳು ಮತ್ತು ಸದಸ್ಯರು ನಡೆಸಿಕೊಂಡು ಹೋಗುತ್ತಿದ್ದಾರೆ. ಕೋವಿಡ್ ಗೆ ಸಂಬಂಧಪಟ್ಟಂತೆ ಸಾಮಾನ್ಯ ಸಲಹೆ, ಪರೀಕ್ಷೆ, ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಾಲೋಚನೆಯನ್ನು ವೈದ್ಯರ ಮೂಲಕ ತಂಡ ಜನರಿಗೆ ಸೇವೆ ನೀಡುತ್ತಿದೆ ಎಂದು ಡಾ ಶ್ರೀಶ ಭಟ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಜನರಿಗೆ ಈ ಕೋವಿಡ್ ಸಂಕಷ್ಟ ಸಮಯದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಸಲಹೆ, ಆಪ್ತ ಸಮಾಲೋಚನೆ ನೀಡಲು ಇಬ್ಬರು ವೈದ್ಯರು ಮತ್ತು ಕೋವಿಡ್ ರೋಗಿಗಳನ್ನು ತಪಾಸಣೆ ಮಾಡಲು, ಸಾಮಾನ್ಯ ತಪಾಸಣೆ  ಮಾಡಲು ಸೇರಿ ನಾಲ್ವರು ವೈದ್ಯರಿದ್ದಾರೆ. ಶೈಕ್ಷಣಿಕ ಕೌನ್ಸೆಲಿಂಗ್ ಗೆ 15 ಸಿಬ್ಬಂದಿಯಿದ್ದಾರೆ. ಅವರು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭವಿಷ್ಯದ ವಿದ್ಯಾಭ್ಯಾಸ, ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ವಿದ್ಯಾರ್ಥಿ ಮತ್ತು ಅವರ ಪೋಷಕರಿಗೆ ಅಗತ್ಯ ಸಲಹೆಗಳನ್ನು ನೀಡುತ್ತಾರೆ, ಪೋಷಕರು-ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಭ್ಯವಿರುವ ಆಂಬ್ಯುಲೆನ್ಸ್ ಗಳ ವಿವರಗಳನ್ನು ಟ್ರಸ್ಟ್ ಸಂಗ್ರಹಿಸುತ್ತದೆ. ಜಿಲ್ಲೆಗಳಲ್ಲಿರುವ ಆಸ್ಪತ್ರೆಗಳ ವಿವರ ಕೂಡ ಇವರ ಬಳಿಯಿರುತ್ತದೆ. ಸಹಾಯವಾಣಿಗೆ ಕರೆ ಬಂದಾಗ, ಸಂಬಂಧಪಟ್ಟವರಿಗೆ ಸಂಪರ್ಕಿಸುತ್ತೇವೆ, ನಮ್ಮ ಆರೋಗ್ಯ ವೃತ್ತಿಪರರು ಕೋವಿಡ್ ರೋಗಿಗಳ ಆಹಾರ ಬಗ್ಗೆಯೂ ಸಲಹೆ ನೀಡುತ್ತಾರೆ. ಆನ್ ಲೈನ್ ಯೋಗ ತರಗತಿಗಳನ್ನು ನಡೆಸಲು ನಮ್ಮಲ್ಲಿ ತಂಡವಿದೆ ಎಂದು ಶ್ರೀಶ ವಿವರಿಸಿದರು.

ಜಿಲ್ಲೆಯ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ ಗಳ ಬಗ್ಗೆ ರೋಗಿಗಳಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರ ಬಳಿ ಅನುಮತಿ ಕೇಳುತ್ತಿದ್ದೇವೆ. ನಮಗೆ ಅನುಮತಿ ಸಿಕ್ಕರೆ, ಪ್ರತಿದಿನ ಲಭ್ಯವಿರುವ ಬೆಡ್ ಗಳ ಮಾಹಿತಿಯನ್ನು ಜನರಿಗೆ ನೀಡುತ್ತೇವೆ ಎಂದರು.

ಮಂಗಳೂರು ಸೇರಿದಂತೆ ಪ್ರತಿ ತಾಲ್ಲೂಕುಗಳಲ್ಲಿ ಟ್ರಸ್ಟ್ ನ ತಂಡವಿದ್ದರೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಇವರ ಗಮನ ಹೆಚ್ಚಾಗಿದೆ. ಸಹಾಯವಾಣಿಯ ಸದಸ್ಯ ಜೋಸ್ಟಮ್, ಇದು ಕೋವಿಡ್ ವಾರ್ ರೂಂನ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಜನರು ಯಾವುದೇ ಸಾಂಕ್ರಾಮಿಕ ಸಂಬಂಧಿ ವೈದ್ಯಕೀಯ ತುರ್ತಿಗೆ ಸಂಪರ್ಕಿಸಬಹುದು ಎಂದರು.

ಕಳೆದ ಶನಿವಾರ ಸಾಯಂಕಾಲ ತಾವು ಟ್ರಸ್ಟ್ ನ ಸಹಾಯವಾಣಿಗೆ ಕರೆ ಮಾಡಿದಾಗ ಅವರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿದರು ಎಂದು ವ್ಯಕ್ತಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com