14 ದಿನ ಕರ್ನಾಟಕ ಲಾಕ್ಡೌನ್: ನಿಯಮ ಉಲ್ಲಂಘಿಸಿ ರಸ್ತೆಗಿಳಿದರೆ ಕಠಿಣ ಕ್ರಮ, ವಾಹನ ಜಪ್ತಿ!

ಮಹಾಮಾರಿ ಕೊರೋನಾ ವೈರಸ್ ಸೋಂಕು ರಾಜ್ಯದಲ್ಲಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವಿಧಿಸಿರುವ 2 ವಾರಗಳ ಸೆಮಿ ಲಾಕ್ಡೌನ್ ಸೋಮವಾರ ಬೆಳಿಗ್ಗೆಯಿಂದಲೇ ಜಾರಿಗೆ ಬಂದಿದ್ದು, ಶತಾಯಗತಾಯ ಜನ ಸಂಚಾರವನ್ನು ನಿರ್ಬಂಧಿಸಲು ರಾಜ್ಯದಾದ್ಯಂತ ಪೊಲೀಸರು ಸಜ್ಜಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಸೋಂಕು ರಾಜ್ಯದಲ್ಲಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವಿಧಿಸಿರುವ 2 ವಾರಗಳ ಸೆಮಿ ಲಾಕ್ಡೌನ್ ಸೋಮವಾರ ಬೆಳಿಗ್ಗೆಯಿಂದಲೇ ಜಾರಿಗೆ ಬಂದಿದ್ದು, ಶತಾಯಗತಾಯ ಜನ ಸಂಚಾರವನ್ನು ನಿರ್ಬಂಧಿಸಲು ರಾಜ್ಯದಾದ್ಯಂತ ಪೊಲೀಸರು ಸಜ್ಜಾಗಿದ್ದಾರೆ. 

ಲಾಕ್ಡೌನ್ ಹಿನ್ನೆಲೆಯಲ್ಲಿ ಅನಗತ್ಯ ಓಡಾಟಕ್ಕೆ ಬ್ರೇಕ್ ಇರಲಿದ್ದು, ಅಗತ್ಯ ವಸ್ತುಗಳ ಖರೀದಿಗೂ ಜನರು ವಾಹನಗಳಲ್ಲಿ ಓಡಾಟ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಗತ್ಯ ವಸ್ತು ಖರೀದಿಗೆ ನಡೆದುಕೊಂಡೇ ಹೋಗಿ ಬರಬೇಕಾಗಿದೆ. 

ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಕೇವಲ 4 ತಾಸು ದಿನಸಿ, ತರಕಾರಿ, ಮಾಂಸ, ಮೀನು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ತದನಂತರದಲ್ಲಿ ಯಾವುದೇ ಅಗತ್ಯ ವಸ್ತುಗಳ ಮಾರಾಟಕ್ಕೂ ಅವಕಾಶವಿಲ್ಲ. 

ವ್ಯಾಪಾರ ವಹಿವಾಹಿಗೆ ನೀಡಿರುವ ಸಮಯದಲ್ಲಿ ಜನರು ಖರೀದಿಗಾಗಿ ಅಂಗಡಿಗಳಿಗೆ ನಡೆದುಕೊಂಡೇ ಹೋಗಬೇಕು. ವಾಹನ ಬಳಕೆ ಮಾಡಿದರೆ ಪೊಲೀಸರು ವಾಹನವನ್ನು ಜಪ್ತಿ ಮಾಡಲಿದ್ದಾರೆ. ಭಾನುವಾರದಿಂದಲೇ ಪೊಲೀಸರು ಕಾರ್ಯಾಚರಣೆಯನ್ನು ಆರಂಭಿಸಿದ್ದು, ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವ ಕೆಲಸ ಕೈಗೊಂಡಿದ್ದಾರೆ. 

ಲಾಕ್ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಯಾರೂ ರಸ್ತೆಗಿಳಿಯದಂತೆ ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಡಿಜಿಪಿ, ದಯವಿಟ್ಟು ಲಾಕ್ಡೌನ್'ನ್ನು ಗಂಭೀರವಾಗಿ ತೆಗೆದುಕೊಳ್ಳಿ. ಇದು ಎಲ್ಲರ ಸುರಕ್ಷತೆಗಾಗಿ ಆಗಿದೆ...ನಿಯಮಗಳನ್ನು ಪಾಲಿಸದೇ ಹೋದಲ್ಲಿ ನಿಮ್ಮ ವಾಹನವನ್ನು ಎರಡು ವಾರಗಳ ಕಾಲ ಜಪ್ತಿ ಮಾಡಲಾಗುತ್ತದೆ. ಅದಕ್ಕೆ ಸಿದ್ಧರಾಗಿ ಎಂದು ಹೇಳಿದ್ದಾರೆ. 

ರಾಜ್ಯದ ಲಾಕ್‌ಡೌನ್‌ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿ
ಕರ್ನಾಟಕದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಈ ಬಗ್ಗೆ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಿಎಂ ಬಿಎಸ್‌ವೈಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. 

ಈ ವೇಳೆ ಇಂದಿನಿಂದ ಜಾರಿಯಾಗಿರುವ ಲಾಕ್‌ಡೌನ್‌ ಬಗ್ಗೆಯೂ ಸಿಎಂ ಮಾಹಿತಿ ಕೊಟ್ಟಿದ್ದಾರೆ. ಹೀಗಾಗಿ ಇಂದಿನಿಂದ ಜಾರಿಯಾಗಿರೋ ಲಾಕ್‌ಡೌನ್ ಸ್ಟ್ರಿಕ್ಟ್ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಪೊಲೀಸರ ಕೈಯಲ್ಲಿ ಲಾಕ್‌ಡೌನ್ ಕೀ ಕೊಟ್ಟಿರೋ ಸಿಎಂ ಮುಲಾಜಿಲ್ಲದೆ ಸುಖಾಸುಮ್ಮನೆ ಓಡಾಡೋರಿಗೆ ಬಿಸಿ ಮುಟ್ಟಿಸಿ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com