ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸ್ಥಾಪನೆ: ಬೆಳಗಾವಿ ಆಸ್ಪತ್ರೆಯಲ್ಲಿ ಸ್ಥಳೀಯರಿಂದ ವೈದ್ಯರ ಮೇಲೆ ಹಲ್ಲೆ
ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ.
Published: 11th May 2021 08:03 AM | Last Updated: 11th May 2021 02:04 PM | A+A A-

ರಕ್ಷಣೆ ನೀಡುವಂತೆ ಜಿಲ್ಲಾಡಳಿತಕ್ಕೆ ವೈದ್ಯರ ಮನವಿ
ಬೆಳಗಾವಿ: ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ.
ಶಹಾಪುರದಲ್ಲಿರುವ ಮಾಯಿ ಆಸ್ಪತ್ರೆಯಲ್ಲಿ ಕೋವಿಡ್ ಕೇಂದ್ರ ಆರಂಭಿಸಲಾಗಿದ್ದು ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾತ್ರಿ ಸುಮಾರು 10.30ರ ಸುಮಾರಿಗೆ 200ಕ್ಕೂ ಅಧಿಕ ಜನರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇವರೆಲ್ಲಾ ಮದ್ಯ ಸೇವಿಸಿದ್ದು ನರ್ಸ್ ಮತ್ತು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎದು ಮಾಯಿ ಆಸ್ಪತ್ರೆ ವೈದ್ಯ ಡಾ.ಮಿಲಿಂದ್ ಹಾಲ್ಗೇಕರ್ ಹೇಳಿದ್ದಾರೆ.
ಘಟನೆ ನಡೆದ ನಂತರ ಪೊಲೀಸರಿಂದ ನಮಗೆ ಯಾವುದೇ ರಕ್ಷಣೆ ದೊರೆತಿಲ್ಲ, ಹೀಗಾಗಿ ಸಂಬಂಧ ಪಟ್ಟವರು ನಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ತಮ್ಮ ಜೀವವನ್ನ ಅಪಾಯದ ಅಂಚಿನಲ್ಲಿರಿಸಿಕೊಂಡು ನಗರದಲ್ಲಿ ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಐಎಂಎ ಬೆಳಗಾವಿ ಅಧ್ಯಕ್ಷ ಡಾ.ಅನಿಲ್ ಪಾಟೀಲ್ ಹೇಳಿದ್ದಾರೆ.
ಡಾ. ಪಾಟೀಲ್ ನೇತೃತ್ವದ ವೈದ್ಯರ ತಂಡ ಜಿಲ್ಲಾಧಿಕಾರಿ ಮಹಂತೇಶ್ ಹಿರೆಮಠ್ ಮತ್ತು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಅವರನ್ನು ಭೇಟಿ ಮಾಡಿ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು. ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಮತ್ತು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಯನ್ನು ರಕ್ಷಿಸಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.