
ಸಾಂದರ್ಭಿಕ ಚಿತ್ರ
ಬೆಂಗಳೂರು: ಇದೊಂದು ಕರುಣಾಜನಕ ಪ್ರಯಾಣ, ಯುವಕನೊಬ್ಬ ತನ್ನ ತಾಯಿಯ ಮೃತ ದೇಹವನ್ನು ಆಟೋದಲ್ಲಿರಿಸಿಕೊಂಡು ಬೆಂಗಳೂರಿನಿಂದ ಮಂಡ್ಯಕ್ಕೆ ಪ್ರಯಾಣಿಸಿದ್ದಾನೆ.
ಶಿವಕುಮಾರ್ ಎಂಬ ಯುವಕ ತನ್ನ ಸ್ನೇಹಿತ ಉದಯ್ ಆಟೋದಲ್ಲಿ ತನ್ನ ತಾಯಿಯ ಶವನ್ನು ಹಿಡಿದು ಕುಳಿತು ಮಂಡ್ಯದ ಮಳವಳ್ಳಿಗೆ ತಲುಪಿದ್ದಾನೆ, ಮಳೆಯಿಂದಾಗಿ ಶವ ಅರ್ಧ ಒದ್ದೆಯಾಗಿತ್ತು, ಅದನ್ನು ಹಿಡಿದು ಕುಳಿತು ತನ್ನ ಕಣ್ಣೀರ ಪ್ರಯಾಣ ಮುಂದುವರಿಸಿದ್ದಾನೆ, ತನ್ನ ತಾಯಿಯನ್ನು ಉಳಿಸಿಕೊಳ್ಳಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿದ್ದಾನೆ, ಕೊನೆಗೆ ಬದುಕಿಸಿಕೊಳ್ಳಲಾಗದೆ ಶವದೊಂದಿಗೆ ವಾಪಸ್ ತೆರಳಿದ್ದಾನೆ.
ತನ್ನ ತಾಯಿ ಸಾವನ್ನಪ್ಪಿದ ಮೇಲೆ ಮಂಡ್ಯಕ್ಕೆ ಶವ ಸಾಗಿಸಲು ಶಿವಕುಮಾರ್ ಆ್ಯಂಬುಲೆನ್ಸ್ ಗಾಗಿ ಹುಡುಕಾಡಿದ್ದಾರೆ. ಆದರೆ ಯಾವುದೇ ಆ್ಯಂಬುಲೆನ್ಸ್ ಸಿಗಲಿಲ್ಲ. ನಾಯಂಡಹಳ್ಳಿ ಜಂಕ್ಷನ್ ಬಳಿ ಆಟೋ ತಡೆದ ಪೊಲೀಸರು ಕೂಡ ಆ್ಯಂಬುಲೆನ್ಸ್ ಗಾಗಿ 45 ನಿಮಿಷ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಟೋ ಚಾಲಕ ಉದಯ್ ಹೇಳಿದ್ದಾರೆ.
72 ವರ್ಷದ ಶಾರದಮ್ಮ ಮಧುಮೇಹ ರೋಗಿ, ದೊಮ್ಮಲೂರಿನಲ್ಲಿದ್ದ ತಮ್ಮ ಮಗನನ್ನು ನೋಡಲು ಕೆಲ ದಿನಗಳ ಹಿಂದೆ ಮಗನ ಮನೆಗೆ ಬಂದಿದ್ದರು, ಆದರೆ ಸೋಮವಾರ ಅವರಿಗೆ ಬೆಳಗಿನ ಉಪಹಾರ ಸೇವಿಸಲು ಸಾಧ್ಯವಾಗಲಿಲ್ಲ.
ದಿನನಿತ್ಯ ಸೇವಿಸುತ್ತಿದ್ದ ಔಷಧಿ ತೆಗೆದುಕೊಂಡ ನಂತರ ಕುಸಿದು ಬಿದ್ದಿದ್ದಾರೆ. ಶಿವಕುಮಾರ್ ಮತ್ತು ಉದಯ್ ಕೂಡಲೇ ಅವರನ್ನು ಸಮೀಪದ ಕ್ಲಿನಿಕ್ ಗೆ ಕರೆದೊಯ್ದಿದ್ದಾರೆ, ಅಲ್ಲಿನ ವೈದ್ಯರು ಚಿನ್ಮಯ ಮಿಷನ್ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ, ಅಲ್ಲಿಗೆ ಕರೆದೊಯ್ಯುವ ವೇಳೆಗೆ 1 ಗಂಟೆ ಸಮಯ ಕಳೆದು ಹೋಗಿತ್ತು. ಅಷ್ಟರಲ್ಲಾಗಲೇ ಶಾರದಮ್ಮ ಮೃತ ಪಟ್ಟಿದ್ದರು.