ನಮ್ಮ ಮೆಟ್ರೋ, ಹೊರವರ್ತುಲ ರಸ್ತೆ ಕಾಮಗಾರಿ ಪೂರ್ಣಕ್ಕೆ 5 ವರ್ಷ ಗಡುವು ನೀಡಿದ ಸಿಎಂ ಯಡಿಯೂರಪ್ಪ

ಮೆಟ್ರೊ ಯೋಜನೆಯ ಹಂತ 2ಎ ಮತ್ತು ಹಂತ 2ಬಿ ಅಡಿ ಕಾಮಗಾರಿಯನ್ನು 5 ವರ್ಷದೊಳಗೆ ಪೂರ್ಣಗೊಳಿಸಿ, ಮೆಟ್ರೊ ರೈಲು ಸಂಚಾರ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೆಟ್ರೊ ಯೋಜನೆಯ ಹಂತ 2ಎ ಮತ್ತು ಹಂತ 2ಬಿ ಅಡಿ ಕಾಮಗಾರಿಯನ್ನು 5 ವರ್ಷದೊಳಗೆ ಪೂರ್ಣಗೊಳಿಸಿ, ಮೆಟ್ರೊ ರೈಲು ಸಂಚಾರ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. 

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ತ್ವರಿತಗತಿಯಲ್ಲಿ ಸಿದ್ಧತೆ ನಡೆಸಿಕೊಳ್ಳುವಂತ ಸಲಹೆ ನೀಡಿದರು. 2025 ರ ಜೂನ್ ವೇಳೆಗೆ ಮೆಟ್ರೋ ಕಾಮಗಾರಿ ಮತ್ತು ಹೊರವರ್ತುಲ ರಸ್ತೆ 2025ರ ಸೆಪ್ಟಂಬರ್ ವೇಳೆಗೆ ವಿಮಾನ ನಿಲ್ದಾಣ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಸಮಯ ನಿಗದಿ ಪಡಿಸಿದ್ದಾರೆ.

ಪ್ರಮುಖ ಭೂಸ್ವಾಧೀನ ಪ್ರಕ್ರಿಯೆಯನ್ನು ಮತ್ತು ಯುಟಿಲಿಟಿ ಸ್ಥಳಾಂತರ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಕಾಮಗಾರಿಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ನಿಗಮದ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಸರ್ಕಾರವು 2019 ರ ಜನವರಿಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರ ಏಪ್ರಿಲ್‌ನಲ್ಲಿ ಅನುಮೋದನೆ ನೀಡಿದೆ. ಇದು ಹೊರ ವರ್ತುಲ ರಸ್ತೆ, ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದ ಉದ್ದಕ್ಕೂ ಇರುವ ಐಟಿ ಕೈಗಾರಿಕೆ ಮತ್ತು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸಾರ್ವಜನಿಕ ಸಾರಿಗೆಯನ್ನು ಒದಗಿಸುತ್ತದೆ. ಹಂತ–2 ಎ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌.ಪುರದವರೆಗೆ 20 ಕಿ.ಮೀ ಮತ್ತು ಹಂತ–2 ಬಿ ಯೋಜನೆಯಲ್ಲಿ ಕೆ.ಆರ್‌.ಪುರದಿಂದ ಹೆಬ್ಬಾಳದ ಮೂಲಕ ವಿಮಾನನಿಲ್ದಾಣ ಟರ್ಮಿನಲ್‌ವರೆಗೆ 38 ಕಿ.ಮೀ, ಹೀಗೆ ಒಟ್ಟು 58 ಕಿ.ಮೀ ಉದ್ದದ ಮಾರ್ಗ ಇದಾಗಿದೆ.

ಈ ಯೋಜನೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗಿನ ಐಟಿ ಇಂಡಸ್ಟ್ರಿ ಉದ್ಯೋಗಿಗಳಿಗೆ, ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಸಹಾಯವಾಗಲಿದೆ. ಸರ್ಕಾರವು 2021 ಏಪ್ರಿಲ್ 28ರಂದು 14,788 ಕೋಟಿ ರೂಪಾಯಿಗಳಿಗೆ ಅನುಮೋದನೆ‌ ನೀಡಿದೆ ಎಂದು ಬಿಎಂಆರ್ ಸಿಎಲ್ ಎಂಡಿ ರಾಕೇಶ್ ಸಿಂಗ್ ಹೇಳಿದ್ದಾರೆ.

ಹೊರವರ್ತುಲ ರಸ್ತೆಗೆ ಶೇ.ನೂರರಷ್ಟು ಭೂಮಿ ಸ್ವಾದೀನ ಪಡಿಸಿಕೊಳ್ಳಲಾಗಿದೆ, ವಿಮಾನ ನಿಲ್ದಾಣ ರಸ್ತೆಗಾಗಿ ಶೇ. 87 ರಷ್ಟು ಭೂ ಸ್ವಾದೀನವಾಗಿದೆ,ಟೆಂಡರ್  ಕರೆಯುವ ದಿನಾಂಕವನ್ನು ಜೂನ್ 14ಕ್ಕೆ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. 

ಡಿಪಿಆರ್ ವರದಿಯ ಪ್ರಕಾರ, ಹೊರವರ್ತುಲ ರಸ್ತೆಯಲ್ಲಿ 2025 ರ ವೇಳೆಗೆ ಪ್ರತಿದಿನ 3.38 ಲಕ್ಷ ಪ್ರಯಾಣಿಕರು, 2031 ರಲ್ಲಿ 4.49 ಲಕ್ಷ ಮತ್ತು 5.83 ಲಕ್ಷ ಮಂದಿಪ್ರಯಾಣಿಸಲಿದ್ದಾರೆ. ವಿಮಾನ ನಿಲ್ದಾಣವು 17 ನಿಲ್ದಾಣಗಳನ್ನು ಹೊಂದಿದ್ದು, 2019 ರ ಜನವರಿ 19 ರಂದು `10,584.15 ಕೋಟಿಗಳಿಗೆ ರಾಜ್ಯವು ಅನುಮೋದನೆ ನೀಡಿತು. ಈ ಸಾಲಿನಲ್ಲಿ ಅಂದಾಜು ದೈನಂದಿನ ಪ್ರಯಾಣಿಕರ ಸಂಖ್ಯೆ 2025 ರಲ್ಲಿ 4.33 ಲಕ್ಷ, 2031 ರಲ್ಲಿ 8.35 ಲಕ್ಷ ಮತ್ತು 2041 ರಲ್ಲಿ 11.14 ಲಕ್ಷ ಇರಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com