ರಾಜ್ಯದಲ್ಲೂ ರೂಪಾಂತರಿ ಕೊರೋನಾ ಸೋಂಕು ಉಲ್ಬಣ; ಹೆಚ್ಚಿದ ಆತಂಕ

ಭಾರತದಲ್ಲಿ ಕೊರೋನಾ 2ನೇ ಅಲೆಯ ಭಾರೀ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಡಬಲ್ ಮ್ಯೂಟೆಂಟ್ (ಬಿ.1.167) ಕೊರೋನಾ ತಳಿಯು ರಾಜ್ಯದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಭಾರತದಲ್ಲಿ ಕೊರೋನಾ 2ನೇ ಅಲೆಯ ಭಾರೀ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಡಬಲ್ ಮ್ಯೂಟೆಂಟ್ (ಬಿ.1.167) ಕೊರೋನಾ ತಳಿಯು ರಾಜ್ಯದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ. 

ಈ ಡಬಲ್ ಮ್ಯೂಟೆಂಟ್ ಕೊರೋನಾ ತಳಿಯು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಮುಂಬೈನಲ್ಲಿ ಮೊದಲು ಪತ್ತೆಯಾಗಿತ್ತು. ನಂತರ ಇತರೆ ನಗರ ಹಾಗೂ ರಾಜ್ಯಗಳಿಗೂ ಹರಡಲು ಆರಂಭಿಸಿದೆ. 

ಕರ್ನಾಟಕದಲ್ಲೂ B.1.617 ಮ್ಯುಟೇಟ್ ವೈರಸ್ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಈವರೆಗೂ 143 ಮಂದಿ ಸ್ಯಾಂಪಲ್ಸ್ ನಲ್ಲಿ ಈ ರೂಪಾಂತರಿ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 

ಈ ನಡುವೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಡಬಲ್‌ ಮ್ಯುಟೆಂಟ್‌ ಮತ್ತು ಬ್ರಿಟನ್‌ ರೂಪಾಂತರಿ ಕೊರೋನಾ ತಳಿಯ ಹಾವಳಿ ಹೆಚ್ಚಾಗಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ. 

ಹೈದ್ರಾಬಾದ್‌ನಲ್ಲಿರುವ ಸೆಂಟರ್‌ ಫಾರ್‌ ಸೆಲ್ಯುಲರ್‌ ಆ್ಯಂಡ್‌ ಮಾಲಿಕ್ಯುಲರ್‌ ಬಯೋಲಜಿ (ಸಿಸಿಎಂಬಿ) ವಿಜ್ಞಾನಿಗಳ ಪ್ರಕಾರ, ಈ ವರ್ಷಾರಂಭದಲ್ಲಿ ದಕ್ಷಿಣ ರಾಜ್ಯಗಳಲ್ಲಿ ಇತರೆ ಮಾದರಿ ವೈರಸ್‌ಗೆ ಹೋಲಿಸಿದರೆ ಎನ್‌440ಕೆ ವೈರಸ್‌ ತಳಿ ಹೆಚ್ಚಾಗಿ ಹಬ್ಬುತ್ತಿರುವುದು ಕಂಡುಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎನ್‌440ಕೆ ವೈರಸ್‌ನ ಜಾಗವನ್ನು ಬಿ.1.617 ಮಾದರಿಯ ರೂಪಾಂತರಿ ತಳಿ ಮತ್ತು ಬ್ರಿಟನ್‌ ರೂಪಾಂತರಿ ತಳಿ ಹೆಚ್ಚಾಗಿ ಆಕ್ರಮಿಸಿಕೊಂಡಿದೆ ಎಂದು ಹೇಳಿದೆ.

ಮೊದಲ ಅಲೆ ಮತ್ತು ಮೊದಲ ಅಲೆಯ ನಂತರದಲ್ಲಿ ಎನ್‌440ಕೆ ಹೆಚ್ಚಿನ ಪ್ರಭಾವ ಹೊಂದಿತ್ತು. ಆದರೆ 2ನೇ ಅಲೆಯಲ್ಲಿ ಬಿ.1.617 ಮಾದರಿಯ ರೂಪಾಂತರಿ ವೈರಸ್‌ ಹೆಚ್ಚು ಪ್ರಭಾವಶಾಲಿಯಾಗಿ ಕಂಡುಬಂದಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.

ಇನ್ನು ಈ ಡಬಲ್ ಮ್ಯೂಟೆಂಟ್ ಕೊರೋನಾ ವೈರಸ್ ಕುರಿತು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯು, ಬಿ.1.617 ಮ್ಯುಟೇಟ್ ವೈರಸ್ ಕೊರೋನಾ ತಳಿಯು ವಿಶ್ವಕ್ಕೇ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಹೇಳಿದೆ. 

ಭಾರತದಲ್ಲಿ ಪತ್ತೆಯಾದ ಈ ಡಬಲ್ ಮ್ಯೂಟೆಂಟ್ ತಳಿಯನ್ನು ಇದೂವರೆಗೆ ವೇರಿಯೆಂಟ್ ಆಫ್ ಇಂಟ್ರೆಸ್ ಎಂದು ವರ್ಗೀಕರಿಸಲಾಗಿತ್ತು. ಆದರೆ, ಇದೀಗ ಅದರ ತೀವ್ರತೆಯನ್ನು ಪರಿಗಣಿಸಿ ವೇರಿಯಂಟ್ ಆಫ್ ಕನ್ಸ್'ರ್ನ್ ಎಂದು ವರ್ಗೀಕರಿಸಲಾಗಿದೆ ಎಂದು ತಿಳಿಸಿದೆ. 

ಕಳೆದ ವರ್ಷದ ಅಕ್ಟೋಬರ್ ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಈ ಡಬಲ್ ಮ್ಯೂಟೆಂಟ್ ವೈರಸ್, ಮೂಲಕ ವೈರಸ್'ಗಿಂತ ಹೆಚ್ಚು ಸುಲಭವಾಗಿ ಹಬ್ಬುತ್ತಿದೆ. ಜೊತೆಗೆ ಲಸಿಕೆಯ ರಕ್ಷಣೆಯನ್ನು ಮೆಟ್ಟಿನಿಲ್ಲುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಂತಿದೆ. ಇಚ್ಚೀತಿನ ವರದಿಗಳು ಇದನ್ನು ಸಾಬೀತುಪಡಿಸಿವೆ. ಹೀಗಾಗಿ ಈ ಡಬಲ್ ಮ್ಯೂಟೆಂಟ್ ವೈರಸ್'ನ್ನು ನಾವು ಜಾಗತಿಕ ಮಟ್ಟದಲ್ಲಿ ಅಪಾಯಕಾರಿ ವೈರಸ್ ಎಂದು ವರ್ಗೀಕರಿಸುತ್ತಿದ್ದೇವೆಂದು ಹೇಳಿದೆ. 

ಇಷ್ಟಕ್ಕೂ ಏನಿದು ಡಬಲ್ ಮ್ಯೂಟೆಂಟ್ ವೈರಸ್...?
ರೂಪಾಂತರವಾಗಿರುವ ಎರಡು ವೈರಸ್'ಗಳು ಒಂದುಗೂಡಿರುವುದನ್ನು ಡಬಲ್ ಮ್ಯೂಟೆಂಟ್ ಎಂದು ಕರೆಯಲಾಗುತ್ತದೆ. ಇವು ಸಾಮಾನ್ಯ ವೈರಸ್'ಗಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. 

ಈ ಡಬಲ್ ಮ್ಯೂಟೆಂಟ್ ವೈರಸ್ ಲಸಿಕೆಯಿಂದಲೂ ರಕ್ಷಣೆ ಸಿಗದಂತೆ ಮಾಡಬಲ್ಲವು. ಜೊತೆಗೆ ಮೂಲ ವೈರಸ್'ಗಿಂತ ಹೆಚ್ಚಾಗಿ ಹರಡಬಲ್ಲವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com