ಲಸಿಕೆ ವಿಷಯದಲ್ಲಿ ರಾಜಕೀಯ ಬೇಡ, ರಾಜ್ಯದ ಪ್ರತಿಯೊಬ್ಬರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡಬೇಕು- ಸಿದ್ದರಾಮಯ್ಯ

 ಕೋವಿಡ್ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲ ಅರ್ಹರಿಗೂ ಲಸಿಕೆ ಹಾಕುವ ಮೂಲಕ ರಾಜ್ಯದ ಜನರನ್ನು ಕಾಪಾಡಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕೋವಿಡ್ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲ ಅರ್ಹರಿಗೂ ಲಸಿಕೆ ಹಾಕುವ ಮೂಲಕ ರಾಜ್ಯದ ಜನರನ್ನು ಕಾಪಾಡಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಮುಂದಿನ ಕೆಲವು ತಿಂಗಳಲ್ಲಿ ಮೂರನೇ ಅಲೆ  ಪ್ರಾರಂಭವಾಗುತ್ತದೆಂದು  ತಜ್ಞರು ಹೇಳುತ್ತಿದ್ದಾರೆ. ಆದ್ದರಿಂದ ಒಂದೆರಡು ತಿಂಗಳಲ್ಲಿ ಸಂಪೂರ್ಣ ಲಸಿಕೆ ಹಾಕಿಸಿ ಮುಗಿಸಬೇಕು. ಲಸಿಕೆಗಳನ್ನು ಕೇಂದ್ರದಿಂದಾದರೂ ಪಡೆಯಬೇಕು ಇಲ್ಲ ರಾಜ್ಯದಲ್ಲೇ ಉತ್ಪಾದಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

18 ರಿಂದ 45 ರ ವಯೋಮಾನದವರಲ್ಲಿ ಇದುವರೆಗೆ ಕೇವಲ 5759 ಜನರಿಗೆ  ಮಾತ್ರ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ.  ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚು ಬಾಧಿತರಾಗಿ ಸಾವು ನೋವುಗಳಿಗೆ ಗುರಿಯಾಗುತ್ತಿರುವವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಯುವ ಸಮುದಾಯಕ್ಕೆ  ಯುದ್ಧೋಪಾದಿಯಲ್ಲಿ ಲಸಿಕೆಯನ್ನು ನೀಡಬೇಕಾಗಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಯುವ ಜನತೆಗೆ ಲಸಿಕೆ ನೀಡುವ ವಿಚಾರದಲ್ಲೂ ರಾಜಕಾರಣ ಮಾಡುತ್ತಿದೆ. ಗುಜರಾತ್, ಉತ್ತರ ಪ್ರದೇಶ ಮುಂತಾದ ರಾಜ್ಯಗಳ  ಯುವಕರಿಗೆ ವ್ಯಾಪಕ ಪ್ರಮಾಣದಲ್ಲಿ ಲಸಿಕೆ ಹಾಕಲಾಗುತ್ತಿದೆ. ಆದರೆ ರಾಜ್ಯದಲ್ಲಿ ಬೆರಣಿಕೆಯಷ್ಟು ಜನರಿಗೆ ಮಾತ್ರ ನೀಡಲಾಗಿದೆ. ಕೇಂದ್ರ ಮಾಡುತ್ತಿರುವ  ಅವೈಜ್ಞಾನಿಕ  ಕ್ರಮಗಳಿಂದಾಗಿ ದೇಶದ ಜನ ಭಾರಿ ಗಂಡಾಂತರ ಎದುರಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದ ಪ್ರಸ್ತುತ ಆಡಳಿತ ನಡೆಸುತ್ತಿರುವವರು ಕಾರ್ಪೊರೇಟ್ ಕಂಪೆನಿಗಳಿಗೆ ಅಡಿಯಾಳುಗಳಂತೆ ವರ್ತಿಸುತ್ತಿದ್ದಾರೆ. ಆದ್ದರಿಂದಲೇ ಲಸಿಕೆ ದರವನ್ನು  150, 300, 400, 600 ರೂಗಳೆಂದು ವ್ಯಾಪಾರಕ್ಕಿಡಲಾಗಿದೆ. ತಾರತಾಮ್ಯಕರವಾದ ಈ ಬೆಲೆಗಳನ್ನು ಕೇಂದ್ರ ಸರ್ಕಾರವೇ ನಿಗಧಿ ಮಾಡುತ್ತಿದೆ. ಇದನ್ನು ನೋಡಿದರೆ ಕೇಂದ್ರದಲ್ಲಿರುವ ಬಿ ಜೆ ಪಿ ಸರ್ಕಾರ ಅಂಗಡಿ ನಡೆಸುತ್ತಿದೆಯೇ ಎಂಬ ಅನುಮಾನ ಬರುತ್ತಿದೆ. ಕುರಿತು ಸರ್ವೋಚ್ಛ ನ್ಯಾಯಾಲಯ ಕೂಡ  ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
 
ಮಹಾರಾಷ್ಟ್ರ ಈಗಾಗಲೆ ಕೋವ್ಯಾಕ್ಸಿನ್ ಲಸಿಕೆಯನ್ನು ರಾಜ್ಯ ಸರ್ಕಾರದ ಅಧೀನದಲ್ಲಿರುವ ಕಂಪೆನಿಗಳ ಮೂಲಕ ಉತ್ಪಾದನೆಯಲ್ಲಿ ತೊಡಗಿದೆ ಎಂಬ ವರದಿಗಳಿವೆ. ಕರ್ನಾಟಕವೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು  ಒತ್ತಾಯಿಸಿರುವ ಸಿದ್ದರಾಮಯ್ಯ, ಕೋವಿಡ್ ನಿಯಂತ್ರಣದಲ್ಲೂ ಮುಂಬೈಮಾದರಿಯನ್ನು  ಸರ್ವೋಚ್ಛ ನ್ಯಾಯಾಲಯವು ಶ್ಲಾಘಿಸಿದೆ. ಅದರ ಕುರಿತು ರಾಜ್ಯ ಸರ್ಕಾರ ಸೂಕ್ತ ತಿಳುವಳಿಕೆ ಪಡೆದುಕೊಳ್ಳುವುದು ಸೂಕ್ತ. 18 ವರ್ಷ ತುಂಬಿದವರಿಗೆ ಲಸಿಕೆ ಹಾಕಲು ಆನ್ ಲೈನ್ ಮುಖಾಂತರ ನೋಂದಾಯಿಸಿಕೊಳ್ಳಬೇಕೆಂಬ ನಿಯಮವನ್ನು ರದ್ದು ಪಡಿಸಬೇಕು. ಸ್ಥಳದಲ್ಲಿಯೇ ನೋಂದಾಯಿಸಿಕೊಂಡು ಲಸಿಕೆ ಹಾಕುವುದೇ  ಉತ್ತಮ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com