ಕೋವಿಡ್ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ಹೆಚ್ಚಳ; ಸ್ಟಿರಾಯ್ಡ್ ಬಳಕೆಯೆ ಕಾರಣ ಎಂದ ವೈದ್ಯರು!

ನಗರದಲ್ಲಿ ಮಾರಕ ಕೋವಿಡ್ ಸೋಂಕಿನ ಆರ್ಭಟದ ನಡುವೆಯೇ ಸೋಂಕಿತರಲ್ಲಿ ಅಪರೂಪದ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂದ್ರ) ಸೋಂಕು ಕೂಡ ಹೆಚ್ಚಳವಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಮಾರಕ ಕೋವಿಡ್ ಸೋಂಕಿನ ಆರ್ಭಟದ ನಡುವೆಯೇ ಸೋಂಕಿತರಲ್ಲಿ ಅಪರೂಪದ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಸೋಂಕು ಕೂಡ ಹೆಚ್ಚಳವಾಗುತ್ತಿದೆ.

ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಸೋಂಕು ಎಂದು ಕರೆಯಲಾಗುವ ಈ ಸೋಂಕು ಅಪಾಯಕಾರಿಯಾಗಿದ್ದು, ಸೋಂಕಿತರು ಇದಕ್ಕೆ ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ, ಇದು ಕಣ್ಣಿನ ದೃಷ್ಟಿ ಮೇಲೆ ಗಂಭೀರ ಅಡ್ಡ ಪರಿಣಾಮ ಬೀರುವ ಮತ್ತು ಜೀವಕ್ಕೇ ಕುತ್ತು ತರುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಶಿಲೀಂದ್ರ ಸೋಂಕು ಹೆಚ್ಚಳಕ್ಕೆ ಸ್ಟಿರಾಯ್ಡ್‌ಗಳ ಬಳಕೆ ಕಾರಣ ಎಂದು ವೈದ್ಯರು ಎಚ್ಚರಿಕೆ ನೀಡಿದ್ದು, ಪ್ರಮುಖವಾಗಿ ಮಧುಮೇಹಿಗಳಲ್ಲಿ ಇದು ಹೆಚ್ಚಿನ ಪರಿಣಾಮ ಬೀರುತ್ತದೆ. ಹೀಗಾಗಿ ಹೆಚ್ಚಿನ ನಿಗಾ ಅತ್ಯಗತ್ಯ ಎಂದು ಹೇಳಿದ್ದಾರೆ. ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಇಂತಹ ಸುಮಾರು 10 ಕಪ್ಪು ಶಿಲೀಂದ್ರ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಂತೆಯೇ ಮಣಿಪಾಲ್, ಆಸ್ಟರ್ ಮತ್ತು ಇತರೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲೂ ಕೂಡ ಪ್ರಕರಣಗಳು ಕಂಡುಬಂದಿವೆ. ಮೊದಲ ಅಲೆ ವೇಳೆ ಈ ಸೋಂಕು ಕೋವಿಡ್ ನಿಂದ ಚೇತರಿಸಿಕೊಂಡ ಬಳಿಕ ಪ್ರಮುಖವಾಗಿ ವಯಸ್ಸಾದವರಲ್ಲಿ  ಕಂಡುಬಂದಿತ್ತು. ಆದರೆ ಈಗ 2ನೇ ಅಲೆಯಲ್ಲಿ ಸೋಂಕಿತರು ಚಿಕಿತ್ಸೆಯಲ್ಲಿರುವಾಗಲೇ ಕಂಡುಬರುತ್ತಿದೆ. ಇಂತಹ ಬೆಳವಣಿಗೆಗೆ ಸ್ಟಿರಾಯ್ಡ್ ಗಳ ಹೆಚ್ಚಿನ ಬಳಕೆ ಕಾರಣ ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಪೊಲೊ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರದ ಮುಖ್ಯಸ್ಥ ಡಾ.ರವೀಂದ್ರ ಮೆಹ್ತಾ ಅವರು ಈ ಬಗ್ಗೆ ಮಾತನಾಡಿ, ನಮ್ಮಲ್ಲೂ ಇಂತಹ ಪ್ರಕರಣಗಳು ಬರುತ್ತಿವೆ. ಮುಖ್ಯವಾಗಿ ಕೋವಿಡ್ ಸಮಯದಲ್ಲಿ ಸ್ಟೀರಾಯ್ಡ್ ತೆಗೆದುಕೊಂಡ ರೋಗಿಗಳಲ್ಲಿ ಕೋವಿಡ್ ಸೋಂಕಿಗೆ ಒಳಗಾದ ಎರಡನೇ ವಾರದ ನಂತರ ಈ ಕಪ್ಪು ಶಿಲೀಂದ್ರ ಸೋಂಕು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದನ್ನು ಕಫ ಪರೀಕ್ಷೆಯ ಮೂಲಕ ರೋಗನಿರ್ಣಯ ಮಾಡಬಹುದು ಮತ್ತು ಆರಂಭಿಕ ಹಂತದಲ್ಲಿ ಬಂದರೆ ರೋಗಿಗಳು ಬೇಗ ಚೇತರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಅಂತೆಯೇ ಈ ಸೋಂಕಿನ ಚಿಕಿತ್ಸೆಗಾಗಿ ಬರುವ ಹೆಚ್ಚಿನ ರೋಗಿಗಳಲ್ಲಿ ಬಹುತೇಕರು ಮಧುಮೇಹಿಗಳಾಗಿರುತ್ತಾರೆ. ಇಂತಹ ರೋಗಿಗಳಲ್ಲಿ ಸಕ್ಕರೆ ಪ್ರಮಾಣ ಮತ್ತು ರಕ್ತದೊತ್ತಡ ಅತ್ಯಂತ ಹೆಚ್ಚಾಗಿರುತ್ತದೆ. ಅಂತೆಯೇ ಮೂಗಿನಲ್ಲಿ ಕಪ್ಪು ದ್ರವ ವಿಸರ್ಜನೆಯಾಗುತ್ತಿರುತ್ತದೆ. ಸಿಟಿ ಮತ್ತು ಎಂಆರ್ಐ ಸ್ಕ್ಯಾನ್ ಮೂಲಕವೂ ಈ ಶಿಲೀಂಧ್ರಗಳ ಸೋಂಕನ್ನು ಪತ್ತೆ ಮಾಡಬಹುದು. ಮೂಗಿನ ಬಯಾಪ್ಸಿ ಮೂಲಕ ಈ ಸೋಂಕು ಇರುವಿಕೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಈ ಕಪ್ಪು ಶಿಲೀಂದ್ರ ಸೋಂಕು ಪ್ರಮುಖವಾಗಿ ಚಿಕಿತ್ಸೆಯಲ್ಲಿರುವ ಅಥವಾ ಇತರೆ ಆರೋಗ್ಯ ಸಮಸ್ಯೆಗಳಿಗೆ ಔಷಧಿ ಪಡೆಯುತ್ತಿರುವ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡಬರುತ್ತಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಈ ಶಿಲೀಂದ್ರ ಸೋಂಕು ಹೆಚ್ಚಾಗಿ ಕೋವಿಡ್ ಸೋಂಕಿತರಲ್ಲಿ, ಮಧುಮೇಹಿಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಮುಖದ ನೋವು, ಮರಗಟ್ಟುವಿಕೆ ಅಥವಾ ಊತ, ಮೂಗಿನ ಮೇಲೆ ಕಪ್ಪು ಬಣ್ಣ, ಹಲ್ಲು, ದವಡೆಗಳನ್ನು ಸಡಿಲಗೊಳಿಸುವುದು, ನೋವು, ಜ್ವರ, ಚರ್ಮದ ಗಾಯ, ಥ್ರಂಬೋಸಿಸ್ ಮತ್ತು ನೆಕ್ರೋಸಿಸ್ (ಎಸ್ಚಾರ್), ಎದೆ ನೋವು, ಪ್ಲೆರಲ್ ಎಫ್ಯೂಷನ್, ಹಿಮೋಪ್ಟಿಸಿಸ್ ಮತ್ತು  ಉಸಿರಾಟದ ಸಮಸ್ಯೆಗಳು ಈ ಸೋಂಕಿನ ಲಕ್ಷಣಗಳಾಗಿವೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com