ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂಸತ್ ನಿರ್ಮಾಣ ಕಾರ್ಯ ಬೇಕಿತ್ತಾ?: ಎಂ.ಬಿ. ಪಾಟೀಲ್ ಪ್ರಶ್ನೆ

ದೇಶದಲ್ಲಿ ಜನರು ಸಾಯುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ರಾಜಪಥ ಅಭಿವೃದ್ಧಿ, ಪ್ರಧಾನ ಮಂತ್ರಿಗಳ ನಿವಾಸ, ಉಪರಾಷ್ಟ್ರಪತಿಗಳ ನಿವಾಸದ ಪ್ರಗತಿಗೆ ಸಾವಿರಾರು ಕೋಟಿ ವ್ಯಯಿಸುತ್ತಿದೆ. ಕೊರೋನಾ ಸಾಂಕ್ರಾಮಿಕ ರೋಗ ಸಮಯದಲ್ಲಿ ಸಂಸತ್ ನಿರ್ಮಾಣ ಕಾರ್ಯ ಬೇಕಿತ್ತಾ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಅವರು ಪ್ರಶ್ನಿಸಿದ್ದಾರೆ. 
ಎಂ.ಬಿ.ಪಾಟೀಲ್
ಎಂ.ಬಿ.ಪಾಟೀಲ್

ವಿಜಯಪುರ: ದೇಶದಲ್ಲಿ ಜನರು ಸಾಯುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ರಾಜಪಥ ಅಭಿವೃದ್ಧಿ, ಪ್ರಧಾನಮಂತ್ರಿಗಳ ನಿವಾಸ, ಉಪರಾಷ್ಟ್ರಪತಿಗಳ ನಿವಾಸದ ಪ್ರಗತಿಗೆ ಸಾವಿರಾರು ಕೋಟಿ ವ್ಯಯಿಸುತ್ತಿದೆ. ಕೊರೋನಾ ಸಾಂಕ್ರಾಮಿಕ ರೋಗ ಸಮಯದಲ್ಲಿ ಸಂಸತ್ ನಿರ್ಮಾಣ ಕಾರ್ಯ ಬೇಕಿತ್ತಾ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಅವರು ಪ್ರಶ್ನಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ದ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿಯವರು ಈ ಹಿಂದೆ ಯಾವ ಮಹಾರಾಜರು ಮಾಡದ ರೀತಿಯಲ್ಲಿ ವರ್ತಿಸುತ್ತಿದ್ದಾರೆ‌. ನಮ್ಮ ವಿಶ್ವಗುರು ದೊಡ್ಡ ಮಹಾರಾಜರು ಎಂದು ವ್ಯಂಗವಾಡಿದರು.

ಪ್ರಧಾನಿ ಮೋದಿಯವರು ನೂತನ ಸಂಸತ್ತು ನಿರ್ಮಾಣ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕು. ಯೋಜನೆಯನ್ನು ಮಾರ್ಪಾಡು ಮಾಡಿ ಈ ಹಣವನ್ನು ಕೋವಿಡ್ ಉದ್ದೇಶಕ್ಕೆ ಬಳಕೆ ಮಾಡಿಕೊಂಡರೆ ದೇಶದಲ್ಲಿ 62 ಕೋಟಿ ಜನರಿಗೆ ಲಸಿಕೆ ಒದಗಿಸಲು ಸಾಧ್ಯವಾಗುತ್ತದೆ. 20 ಸಾವಿರ ವೆಂಟಿಲೇಟರ್ ಬೆಡ್ ನಿರ್ಮಾಣ ಮಾಡಬಹುದು. ಆದರೆ ಮೋದಿಯವರಿಗೆ ಜನತೆಯ ನೋವು ಆಲಿಸಲು ಸಮಯವಿಲ್ಲ. ಮೋದಿಯವರಿಗೆ ಜನ ಬೇಕೋ ಅಥವಾ ನ್ಯೂ ವಿಸ್ತಾ ಬೇಕೊ ಎಂದು ಅವರು ಪ್ರಶ್ನಿಸಿದರು. 

ಮೊನ್ನೆಯಷ್ಟೇ ಅಧಿಕಾರಕ್ಕೆ ಬಂದಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕೂಲಿ ಕಾರ್ಮಿಕರಿಗೆ, ಬಡವರಿಗೆ ಮಹತ್ವದ ಯೋಜನೆ ರೂಪಿಸಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ನೆರೆಯ ಸೀಮಾಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೂಡ ಉಚಿತ ಚಿಕಿತ್ಸೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಇವರನ್ನಾದರೂ ನೋಡಿ ನಮ್ಮ ಮುಖ್ಯಮಂತ್ರಿಗಳು ಕಲಿಯಬೇಕಿತ್ತು. ಇದನ್ನು ಬಿಟ್ಟು ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೂ ಸ್ಪಂದಿಸುತ್ತಿಲ್ಲ. ಇಂತಹ ಬೇಜವಾಬ್ದಾರಿ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಟೀಕಿಸಿದರು. 

ರಾಜ್ಯದಲ್ಲಿ ಕೂಲಿ ಕಾರ್ಮಿಕರು ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದವರಂತೆ ತುಂಬಾ ತೊಂದರೆಯಲ್ಲಿದ್ದಾರೆ. ಹೀಗಾಗಿ ಅವರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ ರೂ.10 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಈ ಬಗ್ಗೆ ಒತ್ತಾಯಿಸಿದರೆ ನಾವೇನೂ ನೋಟ್ ಪ್ರಿಂಟ್ ಮಾಡುವ ಮಷಿನ್ ಇಟ್ಟಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪನವರು ಉಡಾಫೆ ಉತ್ತರ ನೀಡುವುದು ಸರಿಯಲ್ಲ ಎಂದರು. 

ಕೇಂದ್ರ ಸರ್ಕಾರ ಟಾಸ್ಕ್ ಫೋರ್ಸ್ ಸಭೆ ನಡೆಸಿಲ್ಲ. ಕೊರೋನಾ ಎದುರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಲಕ್ಷಾಂತರ ಜನರ ಸಾವಿಗೆ ಯಾರು ಹೊಣೆ ಪ್ರತಿಯೊಂದು ತಾಲೂಕಿನಲ್ಲಿ ವ್ಯಾಕ್ಸೀನ್ ಸರಬರಾಜು ಮಾಡಬೇಕು. ಭವಿಷ್ಯದಲ್ಲೂ ಹಳ್ಳಿ ಹಳ್ಳಿ ಆಕ್ಸಿಜನ್ ಪೂರೈಕೆಯಾಗಬೇಕು. ರಾಜ್ಯದಲ್ಲಿ ಲಿಕ್ವಿಡ್ ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ ಎಂದು ಅವರು‌ ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com