'26 ಲಕ್ಷ ಜನರಿಗೆ ಹೇಗೆ 2ನೇ ಡೋಸ್ ಲಸಿಕೆ ಕೊಡುತ್ತೀರಿ, ಏನಿದು ನಿಮ್ಮ ಲಸಿಕೆ ಅಭಿಯಾನ?': ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಕೇಂದ್ರ ಸರ್ಕಾರದ ನಿರ್ದೇಶನ ಮತ್ತು ಸಹಕಾರದಡಿ ರಾಜ್ಯ ಸರ್ಕಾರ ಉಚಿತ ಕೊರೋನಾ ಲಸಿಕೆ ಅಭಿಯಾನ ನಡೆಸುವುದಾಗಿ ಘೋಷಿಸಿ ಆರಂಭಿಸಿರುವುದು ಗೊತ್ತೇ ಇದೆ. ಆದರೆ ಲಸಿಕೆ ಅಭಿಯಾನದಲ್ಲಿ ಈಗ ಸಾಕಷ್ಟು ಎಡವಟ್ಟುಗಳಾಗುತ್ತಿರುವುದು ಎದ್ದು ಕಾಣುತ್ತಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಕೇಂದ್ರ ಸರ್ಕಾರದ ನಿರ್ದೇಶನ ಮತ್ತು ಸಹಕಾರದಡಿ ರಾಜ್ಯ ಸರ್ಕಾರ ಉಚಿತ ಕೊರೋನಾ ಲಸಿಕೆ ಅಭಿಯಾನ ನಡೆಸುವುದಾಗಿ ಘೋಷಿಸಿ ಆರಂಭಿಸಿರುವುದು ಗೊತ್ತೇ ಇದೆ. ಆದರೆ ಲಸಿಕೆ ಅಭಿಯಾನದಲ್ಲಿ ಈಗ ಸಾಕಷ್ಟು ಎಡವಟ್ಟುಗಳಾಗುತ್ತಿರುವುದು ಎದ್ದು ಕಾಣುತ್ತಿದೆ.

18ರಿಂದ 44 ವರ್ಷದವರಿಗೆ ಲಸಿಕೆಯ ಮೊದಲ ಡೋಸ್ ನೀಡುವುದಾಗಿ ಘೋಷಿಸಿ ಅದೀಗ ಲಸಿಕೆ ಕೊರತೆಯಿಂದ ಸ್ಥಗಿತವಾಗಿದೆ, ಇನ್ನೊಂದೆಡೆ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡುವಲ್ಲಿ ಕೂಡ ಸರ್ಕಾರ ಎಡವಿರುವುದು ಸ್ಫಷ್ಟವಾಗಿ ಗೋಚರವಾಗುತ್ತಿದೆ. ಎರಡನೇ ಡೋಸ್ ನೀಡಲು ಕೂಡ ಸರ್ಕಾರ ಬಳಿ ಲಸಿಕೆ ಕೊರತೆ ಕಾಣುತ್ತಿದೆ. ಮೊದಲ ಡೋಸ್ ಹಾಕಿಕೊಂಡವರಿಗೆ ಎರಡನೇ ಡೋಸ್ ಸರಿಯಾಗಿ ಸಿಗುತ್ತಿಲ್ಲ, ಈ ಎಲ್ಲಾ ವಿಚಾರವಾಗಿ ಹೈಕೋರ್ಟ್ ಇಂದು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡು ಪ್ರಶ್ನೆಗಳ ಸುರಿಮಳೆಯನ್ನೇ ರಾಜ್ಯ ಸರ್ಕಾರದ ಮುಂದಿಟ್ಟಿದೆ. ಕೇಂದ್ರ ಸರ್ಕಾರವನ್ನು ಕೂಡ ಲಸಿಕೆ ಪೂರೈಕೆಯಲ್ಲಿನ ಗೊಂದಲ ಬಗ್ಗೆ ತರಾಟೆಗೆ ತೆಗೆದುಕೊಂಡಿದೆ.

ಇಂದು ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಕುತ್ತಿರುವ ಲಸಿಕೆ ಪ್ರಮಾಣ ಎಷ್ಟು, ಕೊರೋನಾ ಲಸಿಕೆ ವಿತರಣೆ ಬಗ್ಗೆ ಯಾವ ರೀತಿಯ ನಿರ್ಧಾರ, ಯಾವ ರೀತಿ ಸ್ವರೂಪ ತೆಗೆದುಕೊಂಡಿದ್ದೀರಿ, ಸರಿಯಾದ ಅಂಕಿ ಅಂಶ ದಾಖಲೆಗಳನ್ನು ನೀಡಿ, ಜನರನ್ನು ದಾರಿತಪ್ಪಿಸಬೇಡಿ ಎಂದು ಛೀಮಾರಿ ಹಾಕಿದೆ. 

ಜನರ ಜೀವಿಸುವ ಹಕ್ಕನ್ನು ಉಲ್ಲಂಘಿಸಬೇಡಿ ಎಂದ ಹೈಕೋರ್ಟ್, ಆರೋಗ್ಯದ ಹಕ್ಕು ಜೀವಿಸುವ ಭಾಗವಾಗಿದ್ದು 2ನೇ ಡೋಸ್ ನ್ನು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡದಿದ್ದರೆ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. 14 ಲಕ್ಷ ಡೋಸ್ ಸಿಕ್ಕರೂ ರಾಜ್ಯಕ್ಕೆ ಸಾಕಾಗುವುದಿಲ್ಲ, 26 ಲಕ್ಷ ಜನರಿಗೆ 2ನೇ ಡೋಸ್ ನೀಡಬೇಕಿದೆ, ಅದನ್ನು ಹೇಗೆ ನೀಡುತ್ತೀರಿ ಎಂದು ಕೇಳಿದೆ.

ಲಸಿಕೆ ಎಷ್ಟಿದೆ ಹೇಳಿ: ಸರ್ಕಾರಿ ಪರ ವಕೀಲ ಅಟೊರ್ನಿ ಜನರಲ್ ಹೈಕೋರ್ಟ್ ಮುಂದೆ, ಲಸಿಕೆ ಕೊರತೆ ನಿಜವಾಗಿದ್ದು ಇದು ಕರ್ನಾಟಕದಲ್ಲಿ ಮಾತ್ರವಲ್ಲ, ಜಾಗತಿಕ ಸಮಸ್ಯೆಯಾಗಿದೆ. ರಾಜ್ಯ ಸರ್ಕಾರ 3 ಕೋಟಿ ಲಸಿಕೆ ಡೋಸ್ ಗಳನ್ನು ತರಿಸಲು ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಿದೆ ಎಂದರು.

ಅದಕ್ಕೆ ಹೈಕೋರ್ಟ್ ನ್ಯಾಯಾಧೀಶರು, ಲಸಿಕೆ ಲಭ್ಯತೆ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು ನಿಜವಾದ ಪರಿಸ್ಥಿತಿ ಏನಿದೆ ಎಂದು ಹೇಳಿ, ಜನರ ಮುಂದೆ ವಾಸ್ತವ ಸತ್ಯವನ್ನು ಹೇಳಬೇಕು. ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆಯುವುದೆಲ್ಲ ಸದ್ಯಕ್ಕೆ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.

ಕೇಂದ್ರಕ್ಕೂ ಆದೇಶ: ಲಸಿಕೆ ಪೂರೈಕೆ, ಜನರಿಗೆ ನೀಡುವ ಬಗ್ಗೆ ಕೇಂದ್ರ ಸರ್ಕಾರವೂ ಶಿಸ್ತುಬದ್ಧವಾಗಿ ನಡೆದುಕೊಳ್ಳಬೇಕು, ಮೊದಲ ಡೋಸ್ ನೀಡಿ ಎರಡನೇ ಡೋಸ್ ನೀಡುವ ಮಧ್ಯೆ ಇರುವ ಭಾರೀ ಅಂತರವನ್ನು ಕಡಿಮೆಮಾಡಬೇಕು. ಮಾರ್ಗಸೂಚಿಯನ್ನು ಮೊದಲು ಸರಿಯಾಗಿ ಸಿದ್ಧಪಡಿಸಿ ಎಂದು ಕೇಂದ್ರ ಸರ್ಕಾರಕ್ಕೂ ಹೈಕೋರ್ಟ್ ಛೀಮಾರಿ ಹಾಕಿತು.

24 ಗಂಟೆಯಲ್ಲೇ ವರದಿ ನೀಡಿ: ಇದೇ ಸಂದರ್ಭದಲ್ಲಿ ಹೈಕೋರ್ಟ್ ನಾಗರಿಕರ ಕೊರೋನಾ ಪರೀಕ್ಷೆ ಮಾಡಿ 24 ಗಂಟೆಯೊಳಗೇ ವರದಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಹರಡುವುದನ್ನು, ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದಕ್ಕೆ ಎಲ್ಲಾ ಪ್ರಯೋಗಾಲಯಗಳಿಗೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಹೇಳಿದೆ.

ನಿನ್ನೆ ಕೋರ್ಟ್ ನ ಸಿಬ್ಬಂದಿಯೊಬ್ಬರು ಕೋವಿಡ್ ನಿಂದ ಮೃತಪಟ್ಟರು, ಅವರ ಸ್ವಾಬ್ ಟೆಸ್ಟ್ ಮೊನ್ನೆ 10ರಂದು ತೆಗೆದುಕೊಂಡಿದ್ದು ಇನ್ನೂ ಸಿಕ್ಕಿಲ್ಲ ಎಂದು ಅವ್ಯವಸ್ಥೆಯನ್ನು ಹೈಕೋರ್ಟ್ ತೆರೆದಿಟ್ಟಿತು.

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವಂತೆ ಹೈಕೋರ್ಟ್ ಕೇಳಿದಾಗ ಸರ್ಕಾರಿ ಪರ ವಕೀಲರು ಸಮಯಾವಕಾಶ ಕೇಳಿದರು. ವಿಚಾರಣೆಯನ್ನು ನ್ಯಾಯಾಲಯ ಮುಂದಿನ ವಾರಕ್ಕೆ ಮುಂದೂಡಿತು.

ನ್ಯಾಯಾಧೀಶರೇನು ಸರ್ವಜ್ಞರಾ: ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿಯವರನ್ನು ಕೇಳಿದಾಗ, ಸರ್ಕಾರಕ್ಕೆ ಅದರದ್ದೇ ಆದ ಸಮಸ್ಯೆಗಳು, ಸವಾಲುಗಳು ಇರುತ್ತವೆ, ಹೈಕೋರ್ಟ್ ನ ನ್ಯಾಯಾಧೀಶರುಗಳೇನು ಸರ್ವಜ್ಞರಾ ಎಂದು ಕೇಳಿದ್ದಾರೆ.

ಇನ್ನು ಕೇಂದ್ರ ಸಚಿವ ಸದಾನಂದ ಗೌಡ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ಲಸಿಕೆ ತಯಾರಕಾ ಕಂಪೆನಿಗಳು ಸಾಕಷ್ಟು ಲಸಿಕೆ ಪೂರೈಸದಿದ್ದರೆ ಸರ್ಕಾರ ಏನು ಮಾಡಲು ಆಗುತ್ತದೆ, ಸರ್ಕಾರ ಏನು ನೇಣು ಹಾಕಿಕೊಳ್ಳಬೇಕೆ ಎಂದು ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com