ಸದ್ಯಕ್ಕೆ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಲಭ್ಯವಿಲ್ಲ: ರಾಜ್ಯ ಸರ್ಕಾರ ನಿರ್ಧಾರ 

ಮುಂದಿನ ಸೂಚನೆ ಬರುವವರೆಗೆ ನಾಳೆ ಅಂದರೆ ಮೇ 14 ರಿಂದ ತಾತ್ಕಾಲಿಕವಾಗಿ 18 ರಿಂದ 44 ವರ್ಷದೊಳಗಿನವರಿಗೆ ಕೊರೋನಾ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ಮುಂದಿನ ಸೂಚನೆ ಬರುವವರೆಗೆ ನಾಳೆ ಅಂದರೆ ಮೇ 14 ರಿಂದ ತಾತ್ಕಾಲಿಕವಾಗಿ 18 ರಿಂದ 44 ವರ್ಷದೊಳಗಿನವರಿಗೆ ಕೊರೋನಾ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈಗಾಗಲೇ ಬುಕ್ಕಿಂಗ್ ಮಾಡಿಕೊಂಡ 18 ರಿಂದ 44 ವರ್ಷದೊಳಗಿನವರಿಗೆ ಸಹ ಸದ್ಯಕ್ಕೆ ಲಸಿಕೆ ನೀಡುವುದಿಲ್ಲ ಎಂದು ಸರ್ಕಾರ ಹೇಳಿದೆ. ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಕೇಂದ್ರಗಳಲ್ಲಿ ನೀಡುವ ಲಸಿಕೆ ವಿತರಣೆ ವ್ಯವಸ್ಥೆಗೆ ಸರ್ಕಾರದ ಈ ಹೊಸ ಆದೇಶ ಅನ್ವಯವಾಗಲಿದೆ.

ರಾಜ್ಯ ಸರ್ಕಾರ ಕೊರೋನಾ ಲಸಿಕೆಯ ತೀವ್ರ ಕೊರತೆಯನ್ನು ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎರಡು ಕೋಟಿ ಲಸಿಕೆ ತರಿಸಿಕೊಳ್ಳಲು ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಿದೆ. ಈ ಮೂಲಕ 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲು ನಿಶ್ಚಯಿಸಿದೆ.

45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸಂಪೂರ್ಣವಾಗಿ ಲಸಿಕೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಎರಡನೇ ಡೋಸ್ ಪಡೆಯುವವರಿಗೆ ಕೊರತೆಯಾಗುತ್ತಿರುವುದರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸ್ಥಗಿತಗೊಳಿಸಲು ಸದ್ಯಕ್ಕೆ ನಿರ್ಧರಿಸಿದೆ. ಸದ್ಯ 18 ರಿಂದ 44 ವರ್ಷದವರೆಗಿನವರಿಗೆ ತೆಗೆದುಕೊಂಡಿರುವ ಲಸಿಕೆಗಳನ್ನು 45 ವರ್ಷಕ್ಕೆ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡಲು ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಬಂದಿರುವ ಮತ್ತು ರಾಜ್ಯ ಸರ್ಕಾರ ನೇರವಾಗಿ ಖರೀದಿಸಿರುವ ಕೊರೋನಾ ಲಸಿಕೆಗಳನ್ನು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ನೀಡಲು ನಿರ್ಧರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com