ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ ಮಕ್ಕಳ ಯೋಗಕ್ಷೇಮಕ್ಕಾಗಿ ಕಾರ್ಯಪಡೆ ರಚಿಸಿ: ಸರ್ಕಾರಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಕೊರೋನಾ ಮೂರನೇ ಆಲೆ ಭೀತಿ ಶುರುವಾಗಿದ್ದು, ಮಕ್ಕಳ ರಕ್ಷಣೆಗೆ ಈಗಲೇ ಸಿದ್ಧತೆ ಆರಂಭಿಸಿ ಪ್ರತೀ ಜಿಲ್ಲೆಯಲ್ಲೂ ಮಕ್ಕಳಿಗಾಗಿ ಕಾರ್ಯಪಡೆ ರಚನೆ ಮಾಡುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಮೂರನೇ ಆಲೆ ಭೀತಿ ಶುರುವಾಗಿದ್ದು, ಮಕ್ಕಳ ರಕ್ಷಣೆಗೆ ಈಗಲೇ ಸಿದ್ಧತೆ ಆರಂಭಿಸಿ ಪ್ರತೀ ಜಿಲ್ಲೆಯಲ್ಲೂ ಮಕ್ಕಳಿಗಾಗಿ ಕಾರ್ಯಪಡೆ ರಚನೆ ಮಾಡುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. 

ಮಕ್ಕಳಿಗೆ ಯಾವುದೇ ರೀತಿಯ ಲಸಿಕೆಗಳನ್ನು ನೀಡದ ಕಾರಣ ಈ ಬಾರಿ ಆರಂಭವಾಗುವ ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ. ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಮಹಾರಾಷ್ಟ್ರದ ಮಾರ್ಗದಂತೆ ವೈದ್ಯಕೀಯ ಮೂಲಸೌಕರ್ಯಗಳನ್ನು ರೂಪಿಸುವ ಅಗತ್ಯವಿದೆ. ಪ್ರಮುಖವಾಗಿ ಪ್ರತಿ ಜಿಲ್ಲೆಯಲ್ಲೂ ಕಾರ್ಯಪಡೆ ಸ್ಥಾಪಿಸುವುದು ಅತ್ಯಗತ್ಯ ಎಂದು ಕೆಎಸ್‌ಸಿಪಿಸಿಆರ್ ಅಧ್ಯಕ್ಷ ಫಾದರ್ ಆಂಥೋನಿ ಸೆಬಾಸ್ಟಿಯನ್ ಹೇಳಿದ್ದಾರೆ. 

ಇದೇ ವೇಳೆ ಕೋವಿಡ್-19 2ನೇ ಅಲೆಯಲ್ಲಿ ಹೆತ್ತವರನ್ನು ಕಳೆದುಕೊಂಡಿರುವ ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಯ ಬಗ್ಗೆ ಇದು ರಾಜ್ಯದ ಗಮನವನ್ನು ಸೆಳೆದಿದೆ. 

ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ರಕ್ಷಣೆ ಕಷ್ಟಕರವಾಗಿರಲಿದೆ. ಇಂತಹ ಅನಾಥ ಮಕ್ಕಳನ್ನು ಕಳ್ಳಸಾಗಣೆ, ಅಕ್ರಮ ದತ್ತು, ದುರುಪಯೋಗ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗಲಿದೆ. ಹೀಗಾಗಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಿದೆ. 

ಅನಾಥ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗಳ ಮುಂದೆ ಹಾಜರುಪಡಿಸಬೇಕು ಮತ್ತು ಕಾನೂನಿನ ನಿಬಂಧನೆಗಳ ಪ್ರಕಾರ ಅವರನ್ನು ರಕ್ಷಣೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಫಾದರ್ ಆಂಥೋನಿ ತಿಳಿಸಿದ್ದಾರೆ. 

ಅನಾಥ ಮಕ್ಕಳು ಹೆಚ್ಚು ಸೋಂಕಿಗೊಳಗಾಗುವ ಸಾಧ್ಯತೆಗಳಿವೆ. ಮಾನಸಿಕವಾಗಿಯೂ ಆಘಾತಕ್ಕೊಳಗಾಗಲಿದ್ದಾರೆ. ಆದ್ದರಿಂದ, ಅವರಿಗೆ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಬೆಂಬಲ ಮತ್ತು ಸಮಾಲೋಚನೆ ನೀಡುವುದು ಅತ್ಯಗತ್ಯವಾಗಿದೆ. ಹೀಗಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮಾನಿಟರಿಂಗ್ ಸಮಿತಿಗಳನ್ನು ಕೂಡಲೇ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಮಕ್ಕಳ ಕಾರ್ಯಪಡೆ ಜೊತೆಗೆ ಸೋಂಕಿಗೊಳಗಾಗ ಮಕ್ಕಳಿಗೆ ಚಿಕಿತ್ಸೆ ನೀಡಲು ಸೌಕರ್ಯಗಳು, ಕ್ವಾರಂಟೈನ್ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com