ಲಾಕ್ ಡೌನ್ ವಿಸ್ತರಣೆ ಮಾಡಿದರೆ ಒಳಿತು; ಸಿಎಂ ಗೆ ಮನವರಿಕೆ ಮಾಡಿಕೊಡುತ್ತೇವೆ: ಸಚಿವ ಆರ್.ಅಶೋಕ್

ಲಾಕ್ ಡೌನ್ ಮಾಡಿರುವುದರಿಂದ ಕೊರೋನಾ ಸೋಂಕು ಕಡಿಮೆಯಾಗಲು ಸಹಕಾರಿಯಾಗಿದೆಯೇ ಎಂದು ನೋಡಿಕೊಂಡು ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಹಾಗೂ ಬೆಂಗಳೂರು ಜಿಲ್ಲೆ ಉಸ್ತುವಾರಿ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದ ಸಚಿವ ಆರ್ ಅಶೋಕ್
ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದ ಸಚಿವ ಆರ್ ಅಶೋಕ್

ಬೆಂಗಳೂರು: ಈಗಾಗಲೇ ಘೋಷಣೆಯಾಗಿರುವ ಮೇ 24ರವರೆಗಿನ ಲಾಕ್ ಡೌನ್ ಗಿಂತ ಮೂರ್ನಾಲ್ಕು ದಿನ ಮೊದಲು ಸಭೆ ನಡೆಸಿ ಲಾಕ್ ಡೌನ್ ಮಾಡಿರುವುದರಿಂದ ಕೊರೋನಾ ಸೋಂಕು ಕಡಿಮೆಯಾಗಲು ಸಹಕಾರಿಯಾಗಿದೆಯೇ ಎಂದು ನೋಡಿಕೊಂಡು ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಹಾಗೂ ಬೆಂಗಳೂರು ಜಿಲ್ಲೆ ಉಸ್ತುವಾರಿ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್​ಡೌನ್​ ಮಾಡಿದ ಬಳಿಕ ಕೊರೋನಾ ಪ್ರಕರಣಗಳು ಕಡಿಮೆಯಾಗಿವೆ. ಹೀಗಾಗಿ ಲಾಕ್​ಡೌನ್​ ವಿಸ್ತರಣೆ ಮಾಡುವುದು ಒಳಿತು ಎಂದು ಎಂಬುದು ನನ್ನ ಅಭಿಪ್ರಾಯ, ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಹೇಳುತ್ತೇನೆ. ಅಂತಿಮವಾಗಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅವರೇ ಎಂದರು.

ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಬಿಬಿಎಂಪಿಯ ನೂತನ ಟ್ರಯಾಜ್ ಮತ್ತು ಕೋವಿಡ್ ಸ್ಥಿರೀಕರಣ ಘಟಕ ಉದ್ಘಾಟನೆ ಮಾಡಿ ಬಳಿಕ ಅವರು ಮಾತನಾಡಿದರು. ಲಾಕ್ ಡೌನ್ ಮುಂದುವರೆಸಿದರೆ ಅನುಕೂಲವಾಗುತ್ತದೆ. ಈಗ ಕೇಸ್ ಕಡಿಮೆ ಆಗ್ತಿದೆ. ಇದೇ ಸಂದರ್ಭದಲ್ಲಿ ಲಾಕ್ ಡೌನ್ ಮುಂದುವರೆಸಿದರೆ ಮತ್ತಷ್ಟು ಅನುಕೂಲವಾಗುತ್ತದೆ. ಸಿಎಂ ಯಡಿಯೂರಪ್ಪರವರಿಗೂ ಈ ಬಗ್ಗೆ ಮನವರಿಕೆ ಮಾಡುತ್ತೇವೆ. ಬೆಂಗಳೂರಿನ ನಾಗರಿಕನಾಗಿ ಲಾಕ್ ಡೌನ್ ಮುಂದುವರಿಸಿದರೆ ಉತ್ತಮ ಎಂಬುದು ನನ್ನ ಅಭಿಪ್ರಾಯ ಎಂದರು.

ಸಚಿವರು ಉದ್ಘಾಟಿಸಿದ ಈ ಬಿಬಿಎಂಪಿ ಆಸ್ಪತ್ರೆಯಲ್ಲಿ 40 ಬೆಡ್ ಸೌಲಭ್ಯವಿದೆ. 20 ಬೆಡ್ ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಹಾಗೂ 20 ನಾರ್ಮಲ್ ಬೆಡ್ ವ್ಯವಸ್ಥೆ ಇರುವ ಆಸ್ಪತ್ರೆ ಇದಾಗಿದೆ.

ನಾವು ಕೆಲಸ ಮಾಡುತ್ತೇವೆ, ಅವರಿಗೆ ಈ ಸ್ಥಿತಿ ಬಂದಿರಲಿಲ್ಲ: ಇನ್ನು, ಸರ್ಕಾರದ ವಿರುದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಗಳಿಗೆ ಆರ್​.ಅಶೋಕ್​ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಮನೆಯಲ್ಲಿ ಕುಳಿತು ಟ್ವೀಟ್ ಮಾಡ್ತಾರೆ. ನಾವು ಹೊರಗೆ ಹೋಗಿ 24 ಗಂಟೆ ಜನರ ಜೊತೆ ಇದ್ದು, ಜನರ ಮಧ್ಯೆ ಓಡಾಡಿ ಕೆಲಸ ಮಾಡುತ್ತೇವೆ. ಈ ಸಮಯದಲ್ಲಿ ರಾಜಕೀಯ ಮಾಡೋದು ಬೇಡ. ಮೋದಿ ಎಲ್ಲಿ‌ ಇದ್ದಾರೆ ಅಂತ ಜಗತ್ತಿಗೆ ಗೊತ್ತು. ಸಿದ್ದರಾಮಯ್ಯ ಎಲ್ಲಿದ್ದಾರೆ ಅಂದ್ರೆ ಟ್ವಿಟರ್ ನಲ್ಲಿ ಇದ್ದಾರೆ. ನಾವು, ನಮ್ಮ ಸಂಸದರು 24 ಗಂಟೆ ಕೆಲಸ ಮಾಡ್ತಿದ್ದೇವೆ. ಸಿದ್ದರಾಮಯ್ಯ ಅವ್ರು ರಾಜಕೀಯ ಬಿಟ್ಟು ಸಹಕಾರ ಕೊಡಲಿ. ಈ ಸಮಯದಲ್ಲಿ ರಾಜಕೀಯ ಮಾಡೋದು ಬೇಡ ಎಂದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಇಂತಹ ಪರಿಸ್ಥಿತಿ, ಕಷ್ಟಗಳು ಬಂದಿರಲಿಲ್ಲ, ಅದೆಲ್ಲಾ ಈಗ ನಮ್ಮ ಸರ್ಕಾರ ಇರುವಾಗ ಬಂದಿದೆ. ನಾವದನ್ನು ಸಮರ್ಥವಾಗಿ ಎದುರಿಸುತ್ತಿದ್ದೇವೆ ಎಂದು ಅಶೋಕ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com