ಕರೆ ಸ್ವೀಕರಿಸದ ಬಿಬಿಎಂಪಿ ಅಧಿಕಾರಿಗಳು, ಬೆಂಗಳೂರಿನಲ್ಲಿ ಮುಂದುವರೆದ ಸೋಂಕಿತರ ಪರದಾಟ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಪರದಾಟ ಮುಂದುವರೆದಿದ್ದು, ಇತ್ತ ಚಿಕಿತ್ಸೆ ಸಂಬಂಧಿ ಮಾಹಿತಿಗಳಿಗಾಗಿ ಸೋಂಕಿತರು ಬಿಬಿಎಂಪಿ ಅಧಿಕಾರಿಗಳಿಗೆ ಕರೆಮಾಡುತ್ತಿದ್ದು, ಅಧಿಕಾರಿಗಳು ಮಾತ್ರ ಕರೆ ಸ್ವೀಕರಿಸದೇ ಅವರಲ್ಲಿ ಒತ್ತಡ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ.
ಕೋವಿಡ್ ವಾರ್ ರೂಂ
ಕೋವಿಡ್ ವಾರ್ ರೂಂ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಪರದಾಟ ಮುಂದುವರೆದಿದ್ದು, ಇತ್ತ ಚಿಕಿತ್ಸೆ ಸಂಬಂಧಿ ಮಾಹಿತಿಗಳಿಗಾಗಿ ಸೋಂಕಿತರು ಬಿಬಿಎಂಪಿ ಅಧಿಕಾರಿಗಳಿಗೆ ಕರೆಮಾಡುತ್ತಿದ್ದು, ಅಧಿಕಾರಿಗಳು ಮಾತ್ರ ಕರೆ ಸ್ವೀಕರಿಸದೇ ಅವರಲ್ಲಿ ಒತ್ತಡ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ.

ಹೌದು ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಪರದಾಟ ಮುಂದುವರೆದಿದ್ದು, ಸೋಂಕಿತರ ಬಿಕ್ಕಟ್ಟುಗಳನ್ನು ಪರಿಹರಿಸಬೇಕಾದ ಬಿಬಿಎಂಪಿ ಅಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿಗಳು ಸೋಂಕಿತರ ಕರೆಗಳನ್ನು ಸ್ವೀಕರಿಸದೇ ಪರದಾಡುವಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಫಾತಿಮಾ ಎಂಬ ಮಹಿಳೆ  ದೂರಿದ್ದು, ತಮ್ಮ ಮನೆಯಲ್ಲಿ ತಮ್ಮ ಪತಿಯ ಸಹೋದರರಿಗೆ ಕೋವಿಡ್ ಸೋಂಕು ತಗುಲಿದೆ. ಆದರೆ ಚಿಕಿತ್ಸೆಗಾಗಿ ನಾನು ಬಿಬಿಎಂಪಿ ವಾರ್ ರೂಂ, ಬಿಬಿಎಂಪಿ ವಲಯ ಅಧಿಕಾರಿಗಳಿಗೆಲ್ಲಾ ಕರೆ ಮಾಡಿದೆ. ಆದರೆ 2 ದಿನಗಳೇ ಕಳೆದರೂ ಯಾರೂ ಕೂಡ ಕರೆ ಸ್ವೀಕರಿಸಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ದೇವಯಾನಿ ಎಂ (ಹೆಸರು ಬದಲಾಯಿಸಲಾಗಿದೆ) ಎಂಬ ಸೋಂಕಿತೆಯ ಪ್ರಕರಣವೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. "ನಾನು ಸೋಂಕಿಗೆ ತುತ್ತಾದ ನಂತರ, ಬಿಬಿಎಂಪಿ ನನ್ನನ್ನು ಪರೀಕ್ಷೆಗೊಳಪಡಿಸುತ್ತದೆ ಎಂದು ನನಗೆ ತಿಳಿಸಲಾಗಿತ್ತು. ಆದರೆ ನಾಲ್ಕು ದಿನಗಳೇ ಕಳೆದರೂ, ಯಾರೂ ಮುಂದಿನ ಹಂತದ ಬಗ್ಗೆ  ಮಾಹಿತಿ ನೀಡಿಲ್ಲ. ನಾನು ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ಸಹಾಯಕ್ಕಾಗಿ ಕರೆ ಮಾಡುತ್ತಲೇ ಇದ್ದೇನೆ. ಆದರೆ ಯಾರೂ ಉತ್ತರಿಸಲಿಲ್ಲ. ನನ್ನ ಆರೋಗ್ಯ ಪರಿಸ್ಥಿತಿ ಕ್ಷೀಣಿಸುತ್ತಲೇ ಇತ್ತು. ನನ್ನ ಫೋನ್ ಕರೆಗಳಿಗೆ ಉತ್ತರಿಸಲಾಗದೆ ಸ್ವಿಚ್ ಆಫ್ ಮಾಡುತ್ತಿದ್ದಾರೆ. ಕೊನೆಗೆ ಐದನೇ ದಿನ, ಕೇರಳದ ನನ್ನ  ಸಂಬಂಧಿಕರು ನನ್ನನ್ನು ಐಸಿಯುಗೆ ದಾಖಲಿಸಲು ಇತರೆ ಆಸ್ಪತ್ರೆಗಳಲ್ಲಿ ತಮ್ಮ ರಾಜಕೀಯ ಪ್ರಭಾವವನ್ನು ಬಳಸಬೇಕಾಯಿತು ಎಂದು ಹೇಳಿದ್ದಾರೆ.

ಕೇವಲ ಈ ಇಬ್ಬರು ಮಾತ್ರವಲ್ಲ ಇಂತಹ ಸಮಸ್ಯೆ ಹೊತ್ತ ಸಾವಿರಾರು ಮಂದಿ ಬೆಂಗಳೂರಿನಲ್ಲಿ ಪರದಾಡುತ್ತಿದ್ದಾರೆ. ಜಂಟಿ ಆಯುಕ್ತರು, ವಲಯ ಆಯುಕ್ತರು ಅಥವಾ ಇನ್‌ಚಾರ್ಜ್ ಆರೋಗ್ಯ ಅಧಿಕಾರಿಗಳು ಸೋಂಕಿತರ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಬಿಬಿಎಂಪಿ ಆಡಳಿತವನ್ನು ವಿಕೇಂದ್ರೀಕರಿಸಿದಾಗಿನಿಂದಲೂ,  ವಲಯಗಳಿಂದ ಸ್ಪಷ್ಟತೆ ಮತ್ತು ಹೊಣೆಗಾರಿಕೆ ಇಲ್ಲ ಎಂದು ಹಲವರು ಆರೋಪಿಸಿದ್ದಾರೆ. 

ಇಂತಹುದೇ ಅಭಿಪ್ರಾಯವನ್ನು ನಗರದ ಮಾಜಿ ಕಾರ್ಪೋರೇಟರ್ ಗಳು ವ್ಯಕ್ತಪಡಿಸುತ್ತಿದ್ದು, 'ನಾನು ನನ್ನ ವಲಯದ ಜಂಟಿ ಆಯುಕ್ತರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೆ. ಒಂದು ವಾರದಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಅವರ ಕಚೇರಿಯ ಲ್ಯಾಂಡ್‌ಲೈನ್ ಪ್ರತಿಕ್ರಿಯಿಸಿದಾಗ, ನನ್ನನ್ನು ಜೆ.ಸಿ.ಯ ವೈಯಕ್ತಿಕ  ಸಹಾಯಕರನ್ನು ಸಂಪರ್ಕಿಸುವಂತೆ ಸೂಚಿಸಿದರು. ನಮನ್ನೇ ಈ ರೀತಿ ನಡೆಸಿಕೊಂಡರೆ ಇನ್ನು ಜನ ಸಾಮಾನ್ಯರ ಗತಿ ಏನು? ಎಂದು ಹೆಸರು ಹೇಳಲಿಚ್ಛಿಸಿದ ಮಾಜಿ ಕಾರ್ಪೊರೇಟರ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ನಿರ್ವಹಣಾಧಿಕಾರಿ ರಾಕೇಶ್ ಸಿಂಗ್ ಅವರು, ಅಧಿಕಾರಿಗಳಿಂದ ಈ ರೀತಿಯ ವೃತ್ತಿಪರೇತರತೆ ನಡವಳಿಕೆ ಸ್ವೀಕಾರಾರ್ಹವಲ್ಲ. ಇಂತಹ ಸಾಂಕ್ರಾಮಿಕ ಸಂದರ್ಭದಲ್ಲಿ ಅವರು ಸದಾಕಾಲ ಸಾರ್ವಜನಿಕರಿಗೆ ಲಭ್ಯರಿರಬೇಕು. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com