ಟೌಕ್ಟೇ ಚಂಡಮಾರುತ: ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಮೂರು ದಿನ ಮಳೆ, ರೆಡ್ ಅಲರ್ಟ್ ಘೋಷಣೆ, ಪ್ರಧಾನಿಯಿಂದ ಉನ್ನತ ಮಟ್ಟದ ಸಭೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ತೌಕ್ತೆ ಚಂಡಮಾರುತ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ಅಪ್ಪಳಿಸಲಿದ್ದು ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಕೇರಳದಲ್ಲಿ ಇಂದು ಬೆಳಗ್ಗೆ ಸುರಿದ ಭಾರೀ ಮಳೆಯಿಂದ ರಸ್ತೆ ಮುಳುಗಿ ನೀರು ನುಗ್ಗಿರುವುದು, ಕರ್ನಾಟಕದ ಮಂಗಳೂರಿನಲ್ಲಿ ಇಂದು ಬೆಳಗ್ಗೆ ಸುರಿದ ಮಳೆ
ಕೇರಳದಲ್ಲಿ ಇಂದು ಬೆಳಗ್ಗೆ ಸುರಿದ ಭಾರೀ ಮಳೆಯಿಂದ ರಸ್ತೆ ಮುಳುಗಿ ನೀರು ನುಗ್ಗಿರುವುದು, ಕರ್ನಾಟಕದ ಮಂಗಳೂರಿನಲ್ಲಿ ಇಂದು ಬೆಳಗ್ಗೆ ಸುರಿದ ಮಳೆ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ತೌಕ್ತೆ ಚಂಡಮಾರುತ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ಅಪ್ಪಳಿಸಲಿದ್ದು ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಮಲೆನಾಡು ಭಾಗಗಳಲ್ಲಿ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕೆಲವು ಕಡೆಗಳಲ್ಲಿ 20 ಸೆಂಟಿ ಮೀಟರ್ ಗಳಿಗೂ ಅಧಿಕ ಮಳೆಯಾಗುವ ಸಾಧ್ಯತೆಯಿದೆ.ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ನಾಡಿದ್ದು 18ರಂದು, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಇಂದು ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ತೌಕ್ತೆ ಚಂಡಮಾರುತ ಈ ವರ್ಷದ ಮೊದಲ ಚಂಡಮಾರುತವಾಗಿದ್ದು ಗಂಟೆಗೆ 150ರಿಂದ 160 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಿ ಅದು 175 ಕಿಲೋ ಮೀಟರ್ ವೇಗವನ್ನು ಕೂಡ ಪಡೆಯುವ ಸಾಧ್ಯತೆಯಿದೆ. ನಿನ್ನೆ ಕೇರಳದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಗೆ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿರುವುದಲ್ಲದೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿದೆ.

ಮಂಗಳೂರಿನಲ್ಲಿ ಮಳೆ: ಚಂಡಮಾರುತದ ಪರಿಣಾಮವಾಗಿ ಭಾರೀ ಮಳೆ ಮಂಗಳೂರಿನಾದ್ಯಂತ ಸುರಿಯುತ್ತಿದೆ. ರಾಜ್ಯ ಹವಾಮಾನ ಇಲಾಖೆ ಇನ್ನು ಮೂರು ದಿನಗಳ ಕಾಲ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ. ರಕ್ಷಣೆಗೆ ಜಿಲ್ಲೆಗೆ ಎನ್ ಡಿಆರ್ ಎಫ್ ತಂಡ ಧಾವಿಸಿದೆ. 

ಭಾರೀ ಮಳೆಗೆ ಇಂದು ವಿದ್ಯುತ್ ಕಂಬಗಳು, ಮರದ ಕೊಂಬೆಗಳು ಧರೆಗುರುಳಿವೆ. 

ಕೇರಳದಲ್ಲಿ ಇಬ್ಬರು ಸಾವು: ಸಮುದ್ರದಲ್ಲಿ ಉಬ್ಬರವಿಳಿತದ ಅಲೆಗಳು ಒಂದು ಮೀಟರ್ ಎತ್ತರಕ್ಕೆ ಏರಿಕೆಯಾಗಿತ್ತು. ಜಿಲ್ಲಾಡಳಿತಗಳು ಕೇರಳದಲ್ಲಿ ಕರಾವಳಿ ಪ್ರದೇಶಗಳಲ್ಲಿನ ಅನೇಕ ಕುಟುಂಬಗಳನ್ನು ಸ್ಥಳಾಂತರಿಸಿವೆ.ಕೆಲವೆಡೆ ಚಂಡಮಾರುತದ ಮಳೆಯಿಂದ ಮನೆಗಳು ಬಹುತೇಕ ಹಾನಿಗೀಡಾಗಿವೆ.

ನಿನ್ನೆ ತೀವ್ರ ಮಳೆಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಕಿಝಕ್ಕೆದತುವಿನ ಮಧುಸೂದನ್ ಅವರ ಮಗ 19 ವರ್ಷದ ಆದರ್ಶ್ ಕೆ ಎಂ ಕೋಝಿಕ್ಕೋಡಿನ ಚೆನೊತ್ ನದಿಯಲ್ಲಿ ಸ್ನಾನ ಮಾಡುವಾಗ ಅಲೆಗೆ ಸಿಕ್ಕಿ ಮೃತಪಟ್ಟಿದ್ದಾರೆ. ಎರ್ನಾಕುಲಂನ ಚೆನ್ನನಂನಲ್ಲಿ ನೀರು ತುಂಬಿದ ಪ್ರದೇಶದಲ್ಲಿ ವಯೋವೃದ್ಧನ ಮೃತದೇಹವೊಂದು ತೇಲಿಕೊಂಡು ಬಂದಿದೆ.

ಮಲಪ್ಪುರಂನ ಪೊನ್ನಾನಿಯಲ್ಲಿ ಸುಮಾರು 50 ಮನೆಗಳಿಗೆ ನೀರು ನುಗ್ಗಿವೆ. ಕೊಡುಂಗಲ್ಲೂರಿನಲ್ಲಿ ಸುಮಾರು 100 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಬೈಪೊರೆ-ಗೋತೀಶ್ವರಂ ಸಮುದ್ರ ತೀರ ರಸ್ತೆ ಕೋಝಿಕ್ಕೋಡಿನಲ್ಲಿ ಹಾನಿಗೀಡಾಗಿವೆ.

ವಾಯುಭಾರ ಕುಸಿತ ತೀವ್ರಗೊಂಡ ಚಂಡಮಾರುತ ಅಬ್ಬರ ಮುಂದಿನ 12 ಗಂಟೆಗಳಲ್ಲಿ ಹೆಚ್ಚಲಿದ್ದು, ಉತ್ತರ-ವಾಯುವ್ಯ ಮತ್ತು ಮಂಗಳವಾರ ಬೆಳಿಗ್ಗೆ ಗುಜರಾತ್ ಕರಾವಳಿಗೆ ತಲುಪುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂದು ಕೂಡ ಕೇರಳದಲ್ಲಿ ತೀವ್ರ ಮಳೆಯಾಗಲಿದೆ.

ಕೇರಳದ ಮಲ್ಲಪುರಂ, ಕೋಝಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರ ಮತ್ತು ಪಾಲಕ್ಕಾಡ್ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ತೀವ್ರ ಮಳೆಯಾಗಲಿದೆ.

ದೆಹಲಿ, ಪಾಲ್ವಾಲ್, ಹೊಡಾಲ್, ಮನೇಸರ್, ಗುರುಗ್ರಾಮ್, ಫರಿದಾಬಾದ್, ಟಿಜಾರಾ, ಬುಲಂದ್‌ಶಹರ್, ಗುಲೋತಿ, ಸಿಯಾನಾ, ಜಟ್ಟಾರಿ, ಖುರ್ಜಾ, ಅತ್ರೌಲಿ, ಅಲಿಗಢ್, ಸದಾಬಾದ್, ಖೈರ್, ನೋಯ್ಡಾ, ಗ್ರೇಟರ್ ನೊಯ್ಡಾ, ಗಾಜಿಯಾಬಾದ್, ಪಿಲ್ಖುವಾ, ಹಾಪುರ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಇನ್ನೆರಡು ಗಂಟೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. 

ವಿಮಾನ ಹಾರಾಟದಲ್ಲಿ ವ್ಯತ್ಯಯ: ಅರಬೇಯಿನ್ ಸಮುದ್ರ ತೀರದಲ್ಲಿ ಪ್ರತಿಕೂಲ ಹವಾಮಾನದಿಂದ ಚೆನ್ನೈ, ತಿರುವನಂತಪುರ, ಕೊಚ್ಚಿ, ಬೆಂಗಳೂರು, ಮುಂಬೈ. ಪುಣೆ, ಗೋವಾ ಮತ್ತು ಅಹ್ಮದಾಬಾದ್ ಗಳಿಗೆ ಹೋಗುವ ಮತ್ತು ಬರುವ ವಿಮಾನ ಹಾರಾಟಕ್ಕೆ ಮೇ 17ರವರೆಗೆ ವ್ಯತ್ಯಯವಾಗಲಿದೆ. 

ಪ್ರಧಾನಿಯಿಂದ ಉನ್ನತ ಮಟ್ಟದ ಸಭೆ: ಒಂದೆಡೆ ಕೊರೋನಾ ಎರಡನೇ ಅಲೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಂಗೆಡಿಸಿದೆ. ಈ ಮಧ್ಯೆ ಕಳೆದ ಎರಡು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ತೌಕ್ತೆ ಚಂಡಮಾರುತ ಎದ್ದಿದೆ. ಕೇರಳದ ಹಲವು ಜಿಲ್ಲೆಗಳಲ್ಲಿ ಅಪಾರ ಸಾವು-ನೋವು ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ದೇಶದ ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ಪರಿಸ್ಥಿತಿ ಮತ್ತು  ಲಸಿಕೆ ಅಭಿಯಾನದ ಬಗ್ಗೆ ಸಭೆಯಲ್ಲಿ ಚರ್ಚಿಸಲಿದ್ದಾರೆ.

ಅಲ್ಲದೆ ತೌಕ್ತೆ ಚಂಡಮಾರುತ ತನ್ನ ಪ್ರಭಾವವನ್ನು ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಮಾಡಿಕೊಂಡಿರುವ ಸಿದ್ದತೆಗಳ ಬಗ್ಗೆ ಕೂಡ ಪ್ರಧಾನಿ ಪರಾಮರ್ಶೆ ನಡೆಸಲಿದ್ದು ಸರ್ಕಾರದ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com