ಸಾವಿನ ಸಂಖ್ಯೆ ಮುಚ್ಚಿಟ್ಟು ರಾಜ್ಯ ಸರ್ಕಾರ ಜನರನ್ನು ವಂಚಿಸುತ್ತಿದೆ: ಕಾಂಗ್ರೆಸ್ ಆರೋಪ

ಕೋವಿಡ್-19 ಸಾವಿನ ಸಂಖ್ಯೆಯನ್ನು ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದು, ತನ್ನ ಮರ್ಯಾದೆ ಉಳಿಸಿಕೊಳ್ಳಲು ಜನರನ್ನು ವಂಚಿಸುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಸಾವಿನ ಸಂಖ್ಯೆಯನ್ನು ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದು, ತನ್ನ ಮರ್ಯಾದೆ ಉಳಿಸಿಕೊಳ್ಳಲು ಜನರನ್ನು ವಂಚಿಸುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.

ಲಾಕ್‌ಡೌನ್ ಯಶಸ್ವಿ ಎಂದು ತೋರಿಸಲು ಕೋವಿಡ್ ಪರೀಕ್ಷೆ ಪ್ರಮಾಣ ಕಡಿತಗೊಳಿಸಿ, ಸೋಂಕಿತರ ಸಂಖ್ಯೆ ಕಡಿಮೆ ತೋರಿಸುವ ಜೀವ ವಿರೋಧಿ ತಂತ್ರಕ್ಕೆ ಇಳಿದಿದೆ. ಬಿಜೆಪಿ ಸರ್ಕಾರ ಶೇ. 50 ರಷ್ಟು ಪರೀಕ್ಷೆಗಳನ್ನು ಕಡಿಮೆ ಮಾಡುವಂತೆ ಎಲ್ಲಾ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದೆ. ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆ ತೋರಿಸುವುದು ಇದರ ಉದ್ದೇಶವಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವರದಿಯಂತೆ ಕೋವಿಡ್ ಸೋಂಕು ಪರೀಕ್ಷೆಗಳನ್ನ ಹೆಚ್ಚಾಗಿ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

33% ಸೋಂಕಿತರು ದಾಖಲಾಗಿರುವಾಗ ಸೋಂಕು ಇಳಿಕೆ ಎಂದು ನಂಬುವುದು ಅಪಾಯಕಾರಿ ಮೂರ್ಖತನವಾಗಿದೆ. ಪ್ರತಿ ಹಳ್ಳಿಗಳಲ್ಲಿ, ವಾರ್ಡ್‌ಗಳಲ್ಲಿ  ಪರೀಕ್ಷಾ ಕೇಂದ್ರಗಳನ್ನು ತೆರೆದು, ಜನತೆ ಪರೀಕ್ಷೆಗೊಳಪಡುವಂತೆ ಪ್ರೇರೇಪಿಸಬೇಕಾದ ಸರ್ಕಾರ ಕೋವಿಡ್ ಪರೀಕ್ಷೆ ಪ್ರಮಾಣವನ್ನು ಇಳಿಸಿದ್ದೇಕೆ?ಎಂದು ಕೆಪಿಸಿಸಿ ಟ್ವೀಟರ್ ಖಾತೆಯಲ್ಲಿ ಟೀಕಿಸಲಾಗಿದೆ.

ಪರೀಕ್ಷೆ ಹೆಚ್ಚಿಸಿ, ಐಸೋಲೇಶನ್ ನಿಯಮಗಳನ್ನು ಗಟ್ಟಿಗೊಳಿಸಿದಾಗ ಮಾತ್ರ ಸೋಂಕಿನ ನಿಯಂತ್ರಣ ಸಾಧ್ಯ. ಇದಕ್ಕೆ ಲಾಕ್‌ಡೌನ್ ಸಮಯ  ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದೆ. 

ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ನೀಡುವ ಅನುಮತಿ ಇದೆ, ಅದೇ ರೀತಿ ಕಾಂಗ್ರೆಸ್ ಪಕ್ಷಕ್ಕೂ ಅನುಮತಿ ನೀಡಲಿ.ಅಧಿಕಾರ ಹೊಂದಿರುವ ಸರ್ಕಾರಕ್ಕಿಂತಲೂ ಮೊದಲು ನಮ್ಮ ಜನರಿಗೆ ಲಸಿಕೆ ನೀಡಿ ತೋರಿಸುತ್ತೇವೆ. ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲದಿರಬಹುದು, ನಾವು ನಮ್ಮ ಜನರನ್ನು ಉಳಿಸಿಕೊಳ್ಳುತ್ತೇವೆ ಎಂದು ಕಾಂಗ್ರೆಸ್  ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com