ಬ್ಲ್ಯಾಕ್ ಫಂಗಸ್ ಗೆ ಬೌರಿಂಗ್ ಆಸ್ಪತ್ರೆಯಲ್ಲಿ ನಾಳೆ ಪ್ರಾಯೋಗಿಕ ವಿಶೇಷ ಚಿಕಿತ್ಸೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ 

ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂದ್ರ) ಕಾಣಿಸಿಕೊಳ್ಳುತ್ತಿದೆ, ಇಂಥವರಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಾಳೆ ಅಂದರೆ ಮೇ 17ರಂದು ವಿಶೇಷ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂದ್ರ) ಕಾಣಿಸಿಕೊಳ್ಳುತ್ತಿದೆ, ಇಂಥವರಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಾಳೆ ಅಂದರೆ ಮೇ 17ರಂದು ವಿಶೇಷ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ನಾಳೆ ಬೌರಿಂಗ್ ಆಸ್ಪತ್ರೆಯಲ್ಲಿ ಆರಂಭವಾಗುವ ವಿಶೇಷ ಚಿಕಿತ್ಸೆ ಪ್ರಾಯೋಗಿಕವಾಗಿದ್ದು ಚಿಕಿತ್ಸೆಗೆ 7 ವಾರಗಳು ಬೇಕಾಗುತ್ತದೆ. 2ರಿಂದ ಮೂರು ಲಕ್ಷ ರೂಪಾಯಿ ಖರ್ಚಾಗುವ ಅಂದಾಜು ಇದೆ ಎಂದು ಹೇಳಿದರು.

ಕೊರೋನಾ ಗೆದ್ದರೂ ಅಧಿಕ ಸ್ಟಿರಾಯ್ಡ್ ತೆಗೆದುಕೊಂಡವರಿಗೆ ಬ್ಲಾಕ್ ಫಂಗಸ್ ದಾಳಿಯಾಗುವ ಸಾಧ್ಯತೆಯಿದೆ. ಕಿಡ್ನಿ ಪ್ಲ್ಯಾಂಟೇಶನ್ ಮಾಡಿಸಿಕೊಂಡವರು ಬ್ಲ್ಯಾಕ್ ಫಂಗಸ್ ಬಗ್ಗೆ ಎಚ್ಚರವಿರಬೇಕು. ರೋಗನಿರೋಧಕ ಶಕ್ತಿ ಕಡಿಮೆಯಿರುವವರಿಗೆ, ಮಧುಮೇಹ ಕಾಯಿಲೆಯಿದ್ದು ಕೊರೋನಾ ಸೋಂಕಿಗೆ ತುತ್ತಾಗಿದ್ದರೆ ಅದರಿಂದ ಗುಣಮುಖರಾಗಿ 10-15 ದಿನಗಳಲ್ಲಿ ಮೂಗಿನ ಮೂಲಕ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತದೆ. ಕಣ್ಣಿನ ನರಗಳು, ಕಣ್ಣಿನ ಹಿಂದೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡು ಕೊನೆಗೆ ದೃಷ್ಟಿ ಹೋಗುವ ಅಪಾಯ ಕೂಡ ಇದೆ ಎಂದು ಡಾ ಕೆ ಸುಧಾಕರ್ ವಿವರಿಸಿದರು.

ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ಸರಿಯಾಗಿ ಆಗದೇ ಹೋದರೆ ಸಾವು ಕೂಡ ಸಂಭವಿಸಬಹುದು. ಹಾಗಾಗಿ ಇದು ಕಾಣಿಸಿಕೊಂಡ ಕೂಡಲೇ ನೇತ್ರ ತಜ್ಞರ ಜೊತೆ ಸಮಾಲೋಚನೆ ಮಾಡಿ ಬೌರಿಂಗ್ ಆಸ್ಪತ್ರೆಯಲ್ಲಿ ವಿಶೇಷವಾಗಿ ಚಿಕಿತ್ಸೆಯನ್ನು ಉನ್ನತ ಮಟ್ಟದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭ ಮಾಡುತ್ತೇವೆ ಎಂದರು.

ತಜ್ಞರ ಸಮಿತಿ ರಚನೆ: ಈ ರೋಗ ಬಾಧಿತರು ರಾಜ್ಯದಲ್ಲಿ ಎಷ್ಟು ಮಂದಿಯಿದ್ದಾರೆ ಎಂಬ ನಿಖರ ಅಂಕಿಅಂಶ ತಿಳಿದಿಲ್ಲ, ಕೆಲವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಾರೆ. ವಾಸ್ತವಾಂಶ ಅಧ್ಯಯನಕ್ಕೆ ಸರ್ಕಾರ ಸಮಿತಿಯನ್ನು ಕೂಡ ರಚಿಸುತ್ತದೆ. ಮೂರ್ನಾಲ್ಕು ವಿಭಾಗಗಳ ಮುಖ್ಯಸ್ಥರ ನೇತೃತ್ವದಲ್ಲಿ ಸಮಿತಿ ಮಾಡಿ ಚರ್ಚಿಸಿ ಜನರಿಗೆ ಯಾವ ರೀತಿ ಚಿಕಿತ್ಸಾ ನೆರವು ನೀಡಬೇಕೆಂದು ಕಾಯಕಲ್ಪ ರೂಪಿಸುತ್ತೇವೆ ಎಂದು ಹೇಳಿದರು.

ಬ್ಲ್ಯಾಕ್ ಫಂಗಸ್ ಬಾಧಿತರಿಗೆ ವಿಶೇಷ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಗಳಿಗೆ ವಿಸ್ತರಿಸುವ ಚಿಂತನೆಯಿದೆ. ಉಚಿತವಾಗಿ ಚಿಕಿತ್ಸೆ ನೀಡುವ ಬಗ್ಗೆ ಸಿಎಂ ಬಿಎಸ್ ವೈ ಜೊತೆ ಚರ್ಚಿಸಿ  ನಿರ್ಧರಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com