ಆಡಳಿತ ಪಕ್ಷದಿಂದ ಮೈಸೂರಿನಲ್ಲಿಯೂ ಬೆಡ್ ಬ್ಲಾಕಿಂಗ್ ದಂಧೆ: ಕಾಂಗ್ರೆಸ್ ಆರೋಪ

ಆಡಳಿತಾರೂಢ ಪಕ್ಷದಿಂದ ಮೈಸೂರಿನಲ್ಲಿಯೂ ಬೆಡ್ ಬ್ಲಾಕಿಂಗ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಆಡಳಿತಾರೂಢ ಪಕ್ಷದಿಂದ ಮೈಸೂರಿನಲ್ಲಿಯೂ ಬೆಡ್ ಬ್ಲಾಕಿಂಗ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಸೋಂಕಿತರಿಗೆ ಬೆಡ್ ಸಿಗದೇ ಸಾವನ್ನಪ್ಪುತ್ತಿದ್ದಾರೆ, ಆದರೆ ಬಿಜೆಪಿ ನಾಯಕರಿಗೆ ಯಾವುದೇ ಅಡಚಣೆಯಿಲ್ಲದೇ ಸರಾಗವಾಗಿ ಬೆಡ್ ಸಿಗುತ್ತಿದೆ. ವಾರ್ ರೂಂ ನಲ್ಲಿ ಮತ್ತು ಕೋವಿಡ್ ಕಾರ್ಯಪಡೆಯಲ್ಲಿ ಬಿಜೆಪಿ ಕಾರ್ಯಕರ್ತರಿದ್ದು ತಮ್ಮ ನಾಯಕರಿಗೆ ಅನುಕೂಲವಾಗುವ ರೀತಿಯ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಡ್ ನೀಡಲು 8,500 ರಿಂದ 10 ಸಾವಿರಕ್ಕೆ ಲಾಬಿ ನಡೆಯುತ್ತಿದೆ. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಸಂಸದ ಪ್ರತಾಪ್ ಸಿಂಹ ಅವರಿಗೆ ತಕ್ಷಣವೇ ಬೆಡ್ ಸಿಗುತ್ತದೆ, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆದರೆ ಸಾಮಾನ್ಯ ಜನರಿಗೆ ಸೂಕ್ತ ಸಮಯಕ್ಕೆ ಯಾವುದು ಸಿಗುತ್ತಿಲ್ಲ, ಬೆಡ್ ಬ್ಲಾಕಿಂಗ್ ಮಾಡಿದ್ದಾರೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಅವರು ಆಪಾದಿಸಿದ್ದಾರೆ.

ಜಿಲ್ಲೆಯಲ್ಲಿ ಕರೊನಾ ಪರಿಸ್ಥಿತಿ ಹೀಗಿರುವಾಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಫೋಟೋ ಸೆಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದುದ್ದೇಶದಿಂದ ಕೆಲಸ ಮಾಡುವ ಎನ್ ಜಿಓಗಳಿಗೆ ಅವರು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಹೇಳಿದ್ದಾರೆ.

ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಸೀಮಿತ ಸಂಖ್ಯೆಯ ಪರೀಕ್ಷೆ ಮಾಡುತ್ತಿದೆ, ಹಳ್ಳಿಗಳಲ್ಲಿ ಸೋಂಕಿನ ಪ್ರಕರಣಗಳು ತೀವ್ರವಾಗುತ್ತಿರುವುದು ಅಪಾಯಕಾರಿ ಎಂದು ಹೇಳಿದ್ದಾರೆ.

ಲಸಿಕೆಗಾಗಿ ಜಾಗತಿಕ ಟೆಂಡರ್ ಕರೆದಿರುವುದು ಗಿಮಿಕ್ ಆಗಿದೆ, ಲಸಿಕೆ ಕೊರತೆಯಿದೆ ಪರಿಸ್ಥಿತಿ ಹೀಗಿರುವಾಗ ತಯಾರಕರು ಹೇಗೆ ಪೂರೈಸುತ್ತಾರೆ ಎಂದು ನಾವು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ.

ಸರಿಯಾದ ಟೆಂಡರ್ ಮಾರ್ಗ ಅನುಸರಿಸದೇ  ಸರ್ಕಾರ 135 ಕೋಟಿ ರು ವೆಚ್ಚದಲ್ಲಿ 15ಸಾವಿರ ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿಸಿದೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಚಾಮರಾಜನಗರಕ್ಕೆ ಸಹಾಯ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ ಹೈಕೋರ್ಟ್ ಸಮಿತಿ ಇದನ್ನು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಅವರು   ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com