ಲಾಕ್ ಡೌನ್ ವಿಸ್ತರಣೆ ಬಗ್ಗೆ ಇಂದು ಸಂಜೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ನಿರ್ಧಾರ: ಆರೋಗ್ಯ ಸಚಿವ ಡಾ. ಸುಧಾಕರ್
ಇಂದು ಸಾಯಂಕಾಲ ಮುಖ್ಯಮಂತ್ರಿ ಯಡಿಯೂರಪ್ಪನವರು ಸಭೆ ಕರೆದಿದ್ದಾರೆ, ಅದರಲ್ಲಿ ನಾವೆಲ್ಲರೂ ಕೋವಿಡ್-19 ವಿಚಾರವಾಗಿ ಕೂಲಂಕಷವಾಗಿ ಚರ್ಚೆ ಮಾಡಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
Published: 17th May 2021 11:34 AM | Last Updated: 17th May 2021 01:14 PM | A+A A-

ಡಾ ಕೆ ಸುಧಾಕರ್
ಬೆಂಗಳೂರು: ಇಂದು ಸಾಯಂಕಾಲ ಮುಖ್ಯಮಂತ್ರಿ ಯಡಿಯೂರಪ್ಪನವರು ಸಭೆ ಕರೆದಿದ್ದಾರೆ, ಅದರಲ್ಲಿ ನಾವೆಲ್ಲರೂ ಕೋವಿಡ್-19 ವಿಚಾರವಾಗಿ ಕೂಲಂಕಷವಾಗಿ ಚರ್ಚೆ ಮಾಡಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಗ್ರಾಮೀಣ ಪ್ರದೇಶಗಳಿಗೆ ಹಬ್ಬುತ್ತಿದ್ದು ಅಲ್ಲಿ ಸೋಂಕಿತರನ್ನು ಯಾವ ರೀತಿ ಕ್ವಾರಂಟೈನ್ ಗೆ ಒಳಪಡಿಸಬೇಕು, ಅವರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು, ಹಳ್ಳಿ ಜನರಿಗೆ ಯಾವ ರೀತಿ ಅರಿವು ಮೂಡಿಸಬೇಕೆಂಬ ಬಗ್ಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಸರ್ಕಾರದ ಆದ್ಯತೆ, ಸವಾಲು: ಆದಷ್ಟು ಶೀಘ್ರದಲ್ಲಿ ಲಸಿಕೆಯನ್ನು ರಾಜ್ಯದ ಜನತೆಗೆ ನೀಡುವುದು ಸರ್ಕಾರದ ಮುಂದಿರುವ ಮೊದಲ ಸವಾಲಾದರೆ, ಕೊರೋನಾ ಎರಡನೇ ಅಲೆಯನ್ನು ಗ್ರಾಮೀಣ ಪ್ರದೇಶದಲ್ಲಿಯೂ ನಿಯಂತ್ರಣಕ್ಕೆ ತರುವುದು ಎರಡನೇ ಮುಖ್ಯ ಸವಾಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತ ವ್ಯಕ್ತಿಗಳು ಮನೆಗಳಲ್ಲಿಯೇ ಐಸೊಲೇಷನ್ ಆದವರಿಂದ ಸೋಂಕು ಹೆಚ್ಚು ಹರಡುತ್ತಿದೆ, ಐಸೊಲೇಷನ್ ನಿಯಮಗಳನ್ನು ಸರಿಯಾಗಿ ಪಾಲಿಸದೆ, ಐಸೊಲೇಷನ್ ಗಳಿಗೆ ವ್ಯವಸ್ಥೆಯಿಲ್ಲದೆ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎಂಬ ಖಚಿತ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಚಿಕಿತ್ಸಾ ವಲಯಗಳನ್ನು ಹೋಬಳಿ,ತಾಲ್ಲೂಕು ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೋಂಕಿತರನ್ನು ಇರಿಸಬೇಕು ಎಂದು ಸರ್ಕಾರ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ, ಜಿಲ್ಲಾಧಿಕಾರಿಗಳು ಇದನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದು ಸಚಿವ ಸುಧಾಕರ್ ಹೇಳಿದರು.
ಕೊರೋನಾ ರೂಪಾಂತರಿ ಹೊಸತು: ಈಗ ಎದ್ದಿರುವ ಎರಡನೇ ಅಲೆಯಲ್ಲಿ ಬಂದಿರುವ ಕೊರೋನಾ ರೂಪಾಂತರಿ ಸೋಂಕು ಹೊಸದು, ಬೇರೆ ದೇಶಗಳಲ್ಲಿ ಇಲ್ಲ, ನಮ್ಮ ದೇಶದಲ್ಲಿ ಮಾತ್ರ ಇದ್ದು, ವಿಜ್ಞಾನಿಗಳು ಇದರ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ, ಇದು ಬರುತ್ತದೆ ಎಂಬ ಬಗ್ಗೆ ನಮಗೆ ಒಂಚೂರು ಮಾಹಿತಿ ಇರಲಿಲ್ಲ. ಇನ್ನಷ್ಟು ಹರಡುವಂತಹ ವೈರಾಣು.
ಸಾಂಕ್ರಾಮಿಕ ರೋಗ ವಿಚಾರದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಹೇಳಿದರೂ ವಿರೋಧ ಪಕ್ಷ ನಾಯಕರು ರಾಜಕಾರಣ ಮಾಡುತ್ತಲೇ ಬಂದಿದ್ದಾರೆ. ನಿಮಗೆ ಬದ್ಧತೆಯಿದ್ದರೆ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಿ, ರಾಜಕಾರಣ ಮಾಡಬೇಡಿ ಎಂದು ಹೇಳಿದರು.
ಈಗಾಗಲೇ ಲಾಕ್ ಡೌನ್ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಮತ್ತು ಆರೋಗ್ಯ ಸಚಿವ ಡಾ ಕೆ ಸುಧಾಕರ್, ಗಣಿ ಖಾತೆ ಸಚಿವ ಮುರುಗೇಶ್ ನಿರಾಣಿ ಒಲವು ತೋರಿಸಿದ್ದಾರೆ. ಇಂದು ಸಂಜೆ ಮತ್ತೊಂದು ಸಭೆ ಸೇರಿ ಅದರಲ್ಲಿ ಚರ್ಚಿಸಿ ನಿರ್ಧರಿಸಲಿದ್ದಾರೆ, ಆದರೆ ಸರ್ಕಾರ ಇಂದೇ ಲಾಕ್ ಡೌನ್ ವಿಸ್ತರಣೆ ಘೋಷಣೆ ಮಾಡುವುದು ಸಂಶಯ.ಏಕೆಂದರೆ ನಾಳೆ ಪ್ರಧಾನಿ 17 ಜಿಲ್ಲೆಗಳ ಜಿಲ್ಲಾಧಿಕಾರಗಳ ಜೊತೆ ಸಂವಾದ ನಡೆಸಲಿದ್ದು ಅದರ ಬಳಿಕವಷ್ಟೇ ರಾಜ್ಯ ಸರ್ಕಾರ ಘೋಷಣೆ ಮಾಡುವ ಸಾಧ್ಯತೆಯಿದೆ.
ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ಹಿರಿಯ ಪದಾಧಿಕಾರಿಗಳು ಬಂದಿದ್ದರು. ಚಲನಚಿತ್ರ ರಂಗದ ಹತ್ತರಿಂದ ಹದಿನೈದು ಸಾವಿರ ಜನ ಕಾರ್ಮಿಕರು, ಉದ್ಯೋಗಸ್ಥರಿಗೆ ಪ್ರಾಶಸ್ತ್ಯದಲ್ಲಿ ಲಸಿಕೆ ಕೊಡಿಸಬೇಕೆಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಂದಿಗೆ, ನಮ್ಮ ಇಲಾಖೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಚಿವ ಸುಧಾಕರ್ ಹೇಳಿದರು.
ಇಂದು ಸಂಜೆ ಸಭೆಯಲ್ಲಿ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿ ನಾಳೆ ಪ್ರಧಾನಿಯೊಂದಿಗೆ ಯಾವೆಲ್ಲಾ ವಿಷಯಗಳನ್ನು ಮಾತನಾಡಬೇಕು, ಯಾವ ವಿಷಯಗಳನ್ನು ಪ್ರಧಾನಿ ಮುಂದಿಡಬೇಕು ಎಂದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.