ಕೊರೋನಾ 2ನೇ ಅಲೆ ವಿರುದ್ಧ ದಿಟ್ಟ ಹೋರಾಟ: ಜಿಲ್ಲೆಗಳಲ್ಲೂ ಚಿಕಿತ್ಸಾ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧಾರ
ಮಹಾಮಾರಿ ಕೊರೋನಾ 2ನೇ ಅಲೆ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರುವ ರಾಜ್ಯ ಸರ್ಕಾರ ಇದೀಗ ಜಿಲ್ಲೆ ಜಿಲ್ಲೆಗಳಲ್ಲೂ ಚಿಕಿತ್ಸಾ ಕೇಂದ್ರ ಸ್ಥಾಪನೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
Published: 17th May 2021 09:56 AM | Last Updated: 17th May 2021 09:56 AM | A+A A-

ಸಂಗ್ರಹ ಚಿತ್ರ
ಬೆಂಗಳೂರು; ಮಹಾಮಾರಿ ಕೊರೋನಾ 2ನೇ ಅಲೆ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರುವ ರಾಜ್ಯ ಸರ್ಕಾರ ಇದೀಗ ಜಿಲ್ಲೆ ಜಿಲ್ಲೆಗಳಲ್ಲೂ ಚಿಕಿತ್ಸಾ ಕೇಂದ್ರ ಸ್ಥಾಪನೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸೋಂಕು ಹೆಚ್ಚಾಗುತ್ತಿರುವ ಬೆಳಗಾವಿ, ಬಳ್ಳಾರಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ದಾವಣಗೆರೆ, ವಿಜಯಪುರ, ಶಿವಮೊಗ್ಗ ಮತ್ತು ತುಮಕೂರು ಪಾಲಿಕೆ ನಿಯಂತ್ರಣದಲ್ಲಿ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಸಾಕಷ್ಟು ಜನರು ಅಗತ್ಯತೆಯಿಲ್ಲದಿದ್ದರೂ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದರಿಂದ ಗಂಭೀರ ಸ್ಥಿತಿಯಲ್ಲಿರುವ ಜನರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದಂತಾಗಿದೆ. ಈ ಬೆಳವಣಿಗೆಗಳನ್ನು ನಿಯಂತ್ರಿಸುವ ಸುಲುವಾಗಿ ಚಿಕಿತ್ಸಾ ಕೇಂದ್ರಗಳ ಅಗತ್ಯವಿದೆ ಎಂದು ಹೇಳಲಾಗುತ್ತಿದೆ. ಪ್ರತೀನಿತ್ಯ ದಾಖಲಾಗುವ ಸೋಂಕು ಪ್ರಕರಣಗಳ ಆಧಾರದ ಮೇಲೆ ಚಿಕಿತ್ಸಾ ಕೇಂದ್ರಗಳನ್ನು ತೆರೆಯುವ ಕುರಿತು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಪ್ರತೀ ನಗರ ಅಥವಾ ಟೌನ್ ನಲ್ಲಿ 3-4 ಚಿಕಿತ್ಸಾ ಕೇಂದ್ರಗಳ ಅಗತ್ಯವಿದೆ. ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರಗಳೊಂದಿಗೆ ಈ ಚಿಕಿತ್ಸಾ ಕೇಂದ್ರಗಳೂ ಕೂಡ ಕಾರ್ಯನಿರ್ವಹಿಸಲಿವೆ.
ಚಿಕಿತ್ಸಾ ಕೇಂದ್ರಗಳಿಗೆ ಬರುವ ರೋಗಿಗಳ ಆರೋಗ್ಯ ಸ್ಥಿತಿ ಪರಿಶೀಲಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸುವುದು, ಕೋವಿಡ್ ಕೇರ್ ಕೇಂದ್ರಗಳಿಗೆ ಕಳುಹಿಸುವುದು, ಹೋಂ ಐಸೋಲೇಷನ್ ನಲ್ಲಿರುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಒಂದು ವೇಳೆ ಸೋಂಕಿತರು ಹೋಂ ಐಸೋಲೇಷನ್ ನಲ್ಲಿರಬೇಕಾದರೆ, ಅವರ ಮೇಲೆ ಆರೋಗ್ಯ ಕಾರ್ಯಕರ್ತರು ನಿಗಾ ಇರಿಸಲಿದ್ದಾರೆ. 5-10 ದಿನಗಳ ನಂತರವೂ ರೋಗಿಯ ಆರೋಗ್ಯ ಮೊದಲಿನಂತೆಯೇ ಇದ್ದರೆ, ಹೋಂ ಐಸೋಲೇಷನ್ ನಲ್ಲಿರಿಸುವುದು ಸರಿಯಲ್ಲ ಎಂದು ಆರೋಗ್ಯ ಕಾರ್ಯಕರ್ತರಿಗೆ ಎನಿಸಿದರೆ, ಅಂತಹವರಿಗೆ ಅಗತ್ಯ ವೈದ್ಯಕೀಯ ಸೇವೆಗಳು ಒದಗಿಸಲಾಗುತ್ತದೆ.
ಸೋಂಕಿತ ವ್ಯಕ್ತಿಗಳ ಆರೋಗ್ಯ ಪರಿಸ್ಥಿತಿಯನ್ನು 10ನೇ ದಿನ ಆರೋಗ್ಯ ಕಾರ್ಯಕರ್ತರು ಪರಿಶೀಲಿಸಲಿದ್ದು, ಪರಿಸ್ಥಿತಿ ನೋಡಿ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದಾದರೆ ಮಾತ್ರ ಹೋಂ ಐಸೋಲೇಷನ್ ನಿಂದ ಬಿಡುಗಡೆ ಮಾಡಲಾಗುತ್ತದೆ. ಈ ವೇಳೆ ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ನು ಅನುಸರಿಸಲಾಗುತ್ತದೆ ಎಂದು ತಿಳಿದುಬಂದಿದೆ.