ಬೆಂಗಳೂರಿನಲ್ಲಿ ತಗ್ಗಿದ ಕೊರೋನಾ ಅಬ್ಬರ; ವೈದ್ಯಕೀಯ ಸಿಬ್ಬಂದಿಗೆ ಕೊಂಚ ನಿರಾಳ!

ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೋನಾ ವೈರಸ್ ಆರ್ಭಟ ಇಳಿಯುತ್ತಿದ್ದು, ಈ ನಡುವೆ ಭಾರೀ ಒತ್ತಡಕ್ಕೆ ಸಿಲುಕಿದ್ದ ವೈದ್ಯಕೀಯ ಸಿಬ್ಬಂದಿಗಳಿಗೆ ಕೊಂಚ ನಿರಾಳ ದೊರೆತಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೋನಾ ವೈರಸ್ ಆರ್ಭಟ ಇಳಿಯುತ್ತಿದ್ದು, ಈ ನಡುವೆ ಭಾರೀ ಒತ್ತಡಕ್ಕೆ ಸಿಲುಕಿದ್ದ ವೈದ್ಯಕೀಯ ಸಿಬ್ಬಂದಿಗಳಿಗೆ ಕೊಂಚ ನಿರಾಳ ದೊರೆತಂದಾಗಿದೆ.

ಮೇ ತಿಂಗಳ ಆರಂಭದಲ್ಲಿ ನಗರದಲ್ಲಿ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ದಾಖಲಾಗುತ್ತಿತ್ತು. ಆದರೆ, ಮೇ. 10ರ ನಂತರ ದಿನ ಕಳೆದಂತೆ ಸೋಂಕು ಪ್ರಮಾಣ ಇಳಿಮುಖವಾಗುತ್ತಿರುವುದು ಕಂಡು ಬರುತ್ತಿದೆ. ಮೇ 10 ರಂದು 16,747 ಪ್ರಕರಣಗಳು ಕಂಡು ಬಂದಿದ್ದು, ತದನಂತರ ಮೇ.11, 15,879, ಮೇ.12, 16,286, ಮೇ.13, 15,191, ಮೇ.14, 14,316, ಮೇ.15, 13,402, ಮೇ.16. 8,344 ಪ್ರಕರಣಗಳು ದಾಖಲಾಗಿವೆ. ಆದರೆ, ಮೇ.17 ರಂದು ಮಾತ್ರ 13,338 ಹೊಸ ಪ್ರಕರಣಗಳು ದಾಖಲಾಗಿವೆ. 

ಆದರೆ, ಮೇ ಮೊದಲ ವಾರ ದಾಖಲಾಗುತ್ತಿದ್ದ ಪ್ರಕರಣಗಳಿಗೆ ಹೋಲಿಕೆ ಮಾಡಿದರೆ, ಈ ಬೆಳವಣಿಗೆ ಉತ್ತಮವೆಂದೇ ಹೇಳಬಹುದಾಗಿದೆ. 

ವಾರ್ ರೂಮ್ ಮಾಹಿತಿ ನೀಡಿರುವ ಪ್ರಕಾರ ಏಪ್ರಿಲ್ 23 ಮತ್ತು 29 ರ ನಡುವೆ ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇಕಡಾ 23.3 ರಷ್ಟಿತ್ತು, ನಂತರ ಏಪ್ರಿಲ್ 30 ಮತ್ತು ಮೇ 6 ರ ನಡುವೆ ಇದು ಶೇ,30.6 ಏರಿಕೆಯಾಗಿದೆ. ಮೇ 7 ಮತ್ತು 13 ರ ನಡುವೆ ಈ ಪ್ರಮಾಶ ಮತ್ತೆ ಶೇ.38.3 ಕ್ಕೆ ಏರಿಕೆಯಾಗಿದ್ದು, ಮೇ 14 ಮತ್ತು 16 ರ ನಡುವೆ ಶೇಕಡಾ 28.7ಕ್ಕೆ ಇಳಿಕೆಯಾಗಿರುವುದು ಕಂಡು ಬಂದಿದೆ. 

ಆಕ್ಸಿಜನ್ ದೊರೆಯುತ್ತಿರುವುದರಿಂದ ಜನರು ಮನೆಗಳಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲು ಆರಂಭಿಸಿದ್ದಾರೆ. ಇದಲ್ಲದೆ ಮೇಕ್'ಶಿಫ್ಟ್ ಆಸ್ಪತ್ರೆ, ಕೋವಿಡ್ ಕೇರ್ ಕೇಂದ್ರಗಳ ಸ್ಥಾಪನೆ ಕೂಡ ಸೋಂಕು ಇಳಿಮುಖವಾಗಲು ಸಹಾಯಕವಾದಿವೆ. ಆದರೆ, ಪ್ರಮುಖವಾಗಿ ಹೇಳುವುದಾದರೆ ಲಾಕ್ಡೌನ್ ಪ್ರಮುಖ ಕಾರಣವೆಂದೇ ಹೇಳಬಹುದು ಎಂದು ತಜ್ಞರು ತಿಳಿಸಿದ್ದಾರೆ. 

ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯ, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ನಾಗರಾಜ್ ಅವರು ಮಾತನಾಡಿ, ಸೋಂಕು ಇಳಿಮುಖವಾಗಲು ಲಾಕ್ಡೌನ್ ಪ್ರಮುಖ ಕಾರಣವಾಗಿದೆ. ಆದರೂ ಸೋಂಕು ಇಳಿಕೆಯಾಗುತ್ತಿದೆ ಎಂಬುದನ್ನು ಹೇಳಲು ಮತ್ತೊಂದು ವಾರ ಪರಿಸ್ಥಿತಿ ಅವಲೋಕಿಸಬೇಕು ಎಂದು ಹೇಳಿದ್ದಾರೆ. 

ರಾಜ್ಯದ ಕೊರೋನಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, 10 ದಿನಗಳ ಹಿಂದೆ ಇದ್ದ ಹಾಸಿಗೆ ಸಮಸ್ಯೆಗಳು ಇದೀಗ ಕಡಿಮೆಯಾಗಿದೆ. ಆಕ್ಸಿಜನ್ ಬೆಡ್ ಗಳಿಗೆ ಹಾಹಾಕಾರ ಶುರುವಾಗಿತ್ತು. ಇಧೀಗ ಜನರಿಗೆ ಆಕ್ಸಿಜನ್ ಬೆಡ್ ಗಳು ಸಿಗುತ್ತಿವೆ. ಆಕ್ಸಿಜನ್ ಬೆಡ್ ಸಂಖ್ಯೆ ಏರಿಗೆ ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲೂ ಈ ಸೌಲಭ್ಯಗಳಿರುವುದು ಸೋಂಕು ಇಳಿಕೆಯಾಗಲು ಒಂದು ಕಾರಣವಾಗಿದೆ ಎಂದು ರೆಗಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸೂರಿ ರಾಜು ವಿ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com