ಕೊರೋನಾ ವಾರಿಯರ್ ಆದರೂ ತಪ್ಪದ ಸಂಕಷ್ಟ: ಸೋಂಕಿತ ಪತಿಗೆ ಬೆಡ್ ಒದಗಿಸಲು ಪರದಾಡಿದ ಆಶಾ ಕಾರ್ಯಕರ್ತೆ!

ಜನ ಸಾಮಾನ್ಯರಾದರೇನೂ, ಕೊರೋನಾ ವಾರಿಯರ್ಸ್ ಆದರೇನು? ವ್ಯವಸ್ಥೆ ಇರುವುದೇ ಹೀಗೆ... ಎಲ್ಲರೂ ಸಂಕಷ್ಟ ಅನುಭವಿಸಲೇಬೇಕು ಎಂಬಂತಿದೆ ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಪರಿಸ್ಥಿತಿ...
ಪತಿಯೊಂದಿಗೆ ಆಶಾ ಕಾರ್ಯಕರ್ತೆ ಕನ್ಯಾಕುಮಾರಿ
ಪತಿಯೊಂದಿಗೆ ಆಶಾ ಕಾರ್ಯಕರ್ತೆ ಕನ್ಯಾಕುಮಾರಿ

ಮೈಸೂರು: ಜನ ಸಾಮಾನ್ಯರಾದರೇನೂ, ಕೊರೋನಾ ವಾರಿಯರ್ಸ್ ಆದರೇನು? ವ್ಯವಸ್ಥೆ ಇರುವುದೇ ಹೀಗೆ... ಎಲ್ಲರೂ ಸಂಕಷ್ಟ ಅನುಭವಿಸಲೇಬೇಕು ಎಂಬಂತಿದೆ ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಪರಿಸ್ಥಿತಿ...

ಮೈಸೂರಿನಲ್ಲಿ ಕೊರೋನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯೊಬ್ಬರು ಸೋಂಕಿಗೊಳಗಾದ ತಮ್ಮ ಪತಿಯನ್ನು ಆಸ್ಪತ್ರೆಗೆ ದಾಖಲಿಸಲು ಪರದಾಡಿದ ಘಟನೆಯೊಂದು ನಡೆದಿದೆ. 

ಟಿ ನರಸೀಪುರ ತಾಲೂಕು ಬನ್ನೂರಿನ ಚಾಮನಹಳ್ಳಿಯ ನಿವಾಸಿಯಾಗಿರುವ ಕನ್ಯಾಕುಮಾರಿ ಎಂಬುವವ ಪತಿ ಸ್ವಾಮಿ (42) ಎಂಬುವವರಿಗೆ ಕೆಲ ದಿನಗಳ ಹಿಂದಷ್ಟೇ ಕೊರೋನಾ ಸೋಂಕು ದೃಢಪಟ್ಟಿದೆ. 

ತಾಲೂಕು ಆಸ್ಪತ್ರೆಯ ವೈದ್ಯರು ಹಾಗೂ ಮೈಸೂರಿನ ಆಸ್ಪತ್ರೆಯ ವೈದ್ಯರು ಪತಿಯನ್ನು ಮನೆಯಲ್ಲಿಯೇ ಐಸೋಲೇಷನ್ ನಲ್ಲಿ ಇರಿಸುವಂತೆ ತಿಳಿಸಿದ್ದರು. ಆದರೆ, ಅವರ ಆಕ್ಸಿಜನ್ ಪ್ರಮಾಣ ಕುಸಿಯುತ್ತಿತ್ತು. 85ಕ್ಕಿಂತಲೂ ಕಡಿಮೆಯಾಗಿತ್ತು. ಮಧುಮೇಹ ಮಟ್ಟ 200ಕ್ಕಿಂತಲೂ ಹೆಚ್ಚಾಗಿತ್ತು. ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿತ್ತು. ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯವಾಗಿತ್ತು. ನಮ್ಮದು ಅತ್ಯಂತ ಸಣ್ಣ ಮನೆಯಾಗಿದ್ದು, ಅವರನ್ನು ಐಸೋಲೇಷನ್ ನಲ್ಲಿ ಇರಿಸುವುದೂ ಕೂಡ ಕಷ್ಟಕರವಾಗಿತ್ತು. ಕೋವಿಡ್ ಮಿತ್ರ ಸಹಾಯ ಕೇಳಿದರೂ ಸಿಗಲಿಲ್ಲ. ಜಿಲ್ಲಾ ವಾರ್ ರೂಮ್ ನಿಂದಲೂ ಯಾವುದೇ ಸಹಾಯಗಳಾಗಲಿಲ್ಲ. ಮತ್ತೆ ಸಂಪರ್ಕಿಸುವುದಾಗಿ ತಿಳಿಸುತ್ತಿದ್ದರೂ. ಆದರೆ, ಮತ್ತೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಕೆಲ ಹೊತ್ತಿನ ಬಳಿಕ ಪತಿಗೆ ಉಸಿರಾಯ ಸಮಸ್ಯೆ ಎದುರಾಗಿತ್ತು. ಬಳಿಕ ಅವರನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿನ ಸಿಬ್ಬಂದಿಗಳು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಬಳಿಕ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿದ್ದೆವು. ಎಲ್ಲಿಯೂ ಚಿಕಿತ್ಸೆ ಸಿಗಲಿಲ್ಲ. ಖಾಸಗಿ ಆಸ್ಪತ್ರೆಗೆ ತೆರಳಿದರೆ ಮೊದಲೇ ರೂ.50,000 ಕಟ್ಟುವಂತೆ ತಿಳಿಸಿದ್ದರು ಎಂದು ಕನ್ಯಾಕುಮಾರಿಯವರು ವ್ಯವಸ್ಥೆ ಕುರಿತು ಬೇರಸ ವ್ಯಕ್ತಪಡಿಸಿದರು. 

ಬಳಿಕ ಮಂಡ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿನ ವೈದ್ಯರು ಹಾಸಿಗೆ ಖಾಲಿಯಿಲ್ಲ ಎಂದು ಹೇಳಿ ತಮ್ಮ ಕೈತೊಳೆದುಕೊಂಡರು ಎಂದು ತಿಳಿಸಿದ್ದಾರೆ. 

ಘಟನೆ ಬಗ್ಗೆ ಉಳಿದ ಆಶಾ ಕಾರ್ಯಕರ್ತೆಯರು ಹಾಗೂ ಸಂಘಟನೆಯ ಕಾರ್ಯಕರ್ತರು ಧ್ವನಿ ಎತ್ತಿದ ಬಳಿಕ ಎಚ್ಚೆತ್ತ ಮೈಸೂರು ಜಿಲ್ಲಾಧಿಕಾರಿಗಳು ಹಾಸಿಗೆ ಒದಗಿಸಿಕೊಡುವ ಭರವಸೆ ನೀಡಿದರು. ಆದರೆ ಕೋವಿಡ್ ಆಸ್ಪತ್ರೆಗೆ ತೆರಳಿದಾಗ ಅಲ್ಲಿನ ಸಿಬ್ಬಂದಿಗಳು ಮತ್ತೆ ಹಾಸಿಗೆ ಇಲ್ಲ ಎಂದು ಹೇಳಿದ್ದಾರೆ. ಬಳಿಕ ಮತ್ತೊಂದು ಸುತ್ತು ಸುತ್ತಾಡಿದಾಗ ನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಸಿಕ್ಕಿತ್ತು ಎಂದು ಕನ್ಯಾಕುಮಾರಿಯವರು ತಿಳಿಸಿದ್ದಾರೆ. 

ಆರೋಗ್ಯ ಕಾರ್ಯಕರ್ತೆಯರನ್ನು ಪ್ರಶಂಸಿಸುವಾಗ ಅಧಿಕಾರಿಗಳು ಆಸ್ಪತ್ರೆಗೆ ದಾಖಲಾಗುವುದು ಮತ್ತು ವೈದ್ಯಕೀಯ ಆರೈಕೆ ಪಡೆಯುವುದು ಎಷ್ಟು ಸುಲಭ ಎಂದು ಗಂಟೆಗಳ ಕಾಲ ಮಾತನಾಡುತ್ತಾರೆ. ಆದರೆ, ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಭಾಗವಾಗಿರುವ ಒಬ್ಬ ಕಾರ್ಯಕರ್ತೆ ತನ್ನ ಪತಿಗೆ ಚಿಕಿತ್ಸೆ ಕೊಡಿಸಲು ಇಷ್ಟೆಲ್ಲಾ ಸಂಕಷ್ಟ ಪಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತಾ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಖಜಾಂಚಿ ಸಂಧ್ಯಾ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com