'ಇದು ಕೇವಲ ಕಾಟಾಚಾರದ ಪ್ಯಾಕೇಜ್': ಡಿ.ಕೆ.ಶಿವಕುಮಾರ್; ಸರ್ಕಾರದ ಬೋಗಸ್ ಪ್ಯಾಕೇಜ್: ಹೆಚ್.ಡಿ. ಕುಮಾರಸ್ವಾಮಿ ಟೀಕೆ!

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಹಲವು ವರ್ಗಗಳ ಜನರಿಗೆ ರಾಜ್ಯ ಸರಕಾರ ಘೋಷಣೆ ಮಾಡಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಮೇಲೆ ನನಗೆ ಭರವಸೆಯಿಲ್ಲ, ಅದು ನಿಜವಾಗಿಯೂ ಫಲಾನುಭವಿಗಳಿಗೆ ತಲುಪುತ್ತದೆಯೇ ಎಂಬ ಸಂಶಯ ನನಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೀಕಿಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್
ಹೆಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್

ಬೆಂಗಳೂರು: ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಹಲವು ವರ್ಗಗಳ ಜನರಿಗೆ ರಾಜ್ಯ ಸರಕಾರ ಘೋಷಣೆ ಮಾಡಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಮೇಲೆ ನನಗೆ ಭರವಸೆಯಿಲ್ಲ, ಅದು ನಿಜವಾಗಿಯೂ ಫಲಾನುಭವಿಗಳಿಗೆ ತಲುಪುತ್ತದೆಯೇ ಎಂಬ ಸಂಶಯ ನನಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೂವು ಹಣ್ಣು ತರಕಾರಿ ಬೆಳೆಗಾರರಿಗೆ 1 ಹೆಕ್ಟೇರ್ ಗೆ ಹತ್ತು ಸಾವಿರ ರೂಪಾಯಿ, ಆಟೋ ಟ್ಯಾಕ್ಸಿ ಮ್ಯಾಕ್ಸಿ ಕ್ಯಾಬ್ ಡ್ರೈವರ್ ಗಳಿಗೆ 3 ಸಾವಿರ ರೂಪಾಯಿ, ಕಟ್ಟಡ ಕೂಲಿ ಕಾರ್ಮಿಕರಿಗೆ 3 ಸಾವಿರ , ಬೀದಿಬದಿ ವ್ಯಾಪಾರಿಗಳಿಗೆ 2 ಸಾವಿರ, ಕಲಾವಿದ ತಂಡಗಳಿಗೆ 3 ಸಾವಿರ ಘೋಷಣೆ ಮಾಡಿದೆ. ಆದರೆ ಇದು ಅರೆ ಕಾಸಿನ ಮಜ್ಜಿಗೆಗೂ ಸಾಲುವುದಿಲ್ಲ ಎಂದು ಹೇಳಿದರು.

ಸಮಾಜದಲ್ಲಿ ಇನ್ನೂ ಹಲವರು ಸಂಕಷ್ಟಕ್ಕೀಡಾದವರು ಇದ್ದಾರೆ, ದರ್ಜಿಗಳು, ನೇಕಾರರು, ನೇಯ್ಗೆಗಾರರು, ಅರ್ಚಕರು ಅವರಿಗೆಲ್ಲ ಸರ್ಕಾರ ಏನು ಧನಸಹಾಯ ಕೊಡುತ್ತಿದೆ, ಸರಕಾರ ಈಗ ಪ್ರಕಟಿಸಿರುವ ಧನಸಹಾಯ ಕೂಡ ಸರಿಯಾಗಿ ಸಕಾಲಕ್ಕೆ ಫಲಾನುಭವಿಗಳಿಗೆ ತಲುಪುತ್ತದೋ, ಇಲ್ಲವೋ ಎಂಬ ಸಂಶಯ ನನಗೆ, ಪಂಚಾಯತಿ ಸಿಬ್ಬಂದಿ, ಶಿಕ್ಷಕರಿಗೆ ಫಲಾನುಭವಿಗಳಿಗೆ ಹಣ ಹಂಚುವ ಜವಾಬ್ದಾರಿಯನ್ನು ನೀಡಿ, ಆಗ ಮಾತ್ರ ಫಲಾನುಭವಿಗಳಿಗೆ ಹಣ ತಲುಪುತ್ತದೆ ಎಂದು ಹೇಳಿದರು.

ಪಡಿತರ ವಿತರಣೆ ಬಗ್ಗೆಯೂ ಗೊಂದಲವಿದೆ. ಕಳೆದ ಬಾರಿಯೂ ಅರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಆದರೆ ಸರಿಯಾಗಿ ಫಲಾನುಭವಿಗಳಿಗೆ ಹಣ ತಲುಪಿರಲಿಲ್ಲ. ಆರ್ಥಿಕ ಪ್ಯಾಕೇಜ್ ನಲ್ಲಿ ಕಟ್ಟಡ ಕಾರ್ಮಿಕರಿಗೆ ಏನೂ ಕೊಟ್ಟಿಲ್ಲ, ಬೆಳೆ ಹಾನಿ ಬಗ್ಗೆ ಸರ್ವೆ ಮಾಡಿ ಸಹಾಯ ಮಾಡಬೇಕಿದೆ. ಇದು ಬಡವರ ಬಗ್ಗೆ ವೈಜ್ಞಾನಿಕವಾಗಿ ಚಿಂತನೆ ಮಾಡುವ ಸರ್ಕಾರವೇ ಎಂದು ಡಿ ಕೆ ಶಿವಕುಮಾರ್ ಟೀಕಿಸಿದರು. ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲು ಹೇಳಿದ್ದಕ್ಕೆ ಒತ್ತಾಯಪೂರ್ವಕವಾಗಿ ಸರ್ಕಾರ ಬಿಡುಗಡೆ ಮಾಡಿದಂತಿದೆ. ಪ್ಯಾಕೇಜ್ ಗೆ ಮುನ್ನ ಚರ್ಚೆ ಮಾಡಿದ್ದಾರಾ, ಬ್ಯಾಂಕ್ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದಾರ ಎಂದು ಡಿಕೆಶಿ ಪ್ರಶ್ನಿಸಿದರು.

ಹೆಚ್ ಡಿಕೆ ಟೀಕೆ: ಸರ್ಕಾರ ಇಂದು ಬಿಡುಗಡೆ ಮಾಡಿರುವ ಪರಿಹಾರ ಪ್ಯಾಕೇಜ್ ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಕೂಡ ಟೀಕಿಸಿದ್ದಾರೆ. ಹಣ್ಣು, ಹೂವು, ತರಕಾರಿ ಬೆಳೆಗಳು ಹಾನಿಗೀಡಾದವರಿಗೆ ಸರ್ಕಾರ ಹೆಕ್ಟೇರ್ ಗೆ 10 ಸಾವಿರ ರೂಪಾಯಿ ಘೋಷಿಸಿದೆ, ಅಂದರೆ ಎಕರೆಗೆ ಮೂರೂವರೆ ಸಾವಿರ ರೂಪಾಯಿಯಂತೆ ಸಿಗುತ್ತದೆ, ಒಂದು ಎಕರೆಯಲ್ಲಿ 3 ಸಾವಿರ ರೂಪಾಯಿಗೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆಯೇ, ಸರ್ಕಾರಕ್ಕೆ 20 ಸಾವಿರ ರೈತರ ಪಟ್ಟಿ ಯಾರು ಕೊಟ್ಟಿದ್ದು, ಇದು ಕೇವಲ ಕಣ್ಣೊರೆಸುವ ತಂತ್ರವಷ್ಟೆ ಎಂದು ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಕಳೆದ ಬಾರಿ 7 ಲಕ್ಷ ಇದ್ದ ಆಟೋ ಚಾಲಕರ ಪಟ್ಟಿ ಈ ಬಾರಿ 2 ಲಕ್ಷಕ್ಕೆ ಇಳಿದದ್ದು ಹೇಗೆ, ಹಿಂದೆ ಬಡವರಿಗೆ 7 ಕೆಜಿ ಅಕ್ಕಿ ಸಿಗುತ್ತಿತ್ತು, ಅದೀಗ 5 ಕೆಜಿಗೆ ಇಳಿಕೆ ಮಾಡಲಾಗಿದೆ. ಕಾರ್ಮಿಕರಿಗೆ ಸರ್ಕಾರದಿಂದ ಹಣ ಕೊಡುವುದಿಲ್ಲ, ಕಾರ್ಮಿಕರು ಇಟ್ಟಿರುವ ನಿಶ್ಚಿತ ಠೇವಣಿ ಹಣದಿಂದ ನೀಡುತ್ತಾರಷ್ಟೆ ಎಂದರು.

ಇದು ಕೇವಲ ಸರ್ಕಾರದ ಬೋಗಸ್ ಪ್ಯಾಕೇಜ್ ಆಗಿದೆ, ಜನರ ದುಡ್ಡನ್ನು ಜನರಿಗೆ ನೀಡುವುದಕ್ಕೆ ಹಿಂದೆ ಮುಂದೆ ಯೋಚಿಸುವುದೇಕೆ, ಬಡವರಿಗೆ ಹಣ ನೀಡಲು ಸರ್ಕಾರದಲ್ಲಿ ಹಣವಿಲ್ಲವೇ, ಸರ್ಕಾರವೇನು ಬೆವರು ಸುರಿಸಿ ಹಣ ನೀಡುತ್ತದೆಯೇ ಎಂದು ಹೆಚ್ ಡಿ ಕುಮಾರಸ್ವಾಮಿ ಕೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com