ಸರ್ಕಾರದ ಪರಿಹಾರ ಪ್ಯಾಕೇಜ್ ಕೇವಲ ಕಣ್ಣೊರೆಸುವ ತಂತ್ರ: ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

ರಾಜ್ಯ ಸರ್ಕಾರ ಕೊರೋನಾ ಲಾಕ್ ಡೌನ್ ಕಾರಣದಿಂದ ಆರ್ಥಿಕವಾಗಿ ನಷ್ಟದಲ್ಲಿರುವವರಿಗೆ ಆರ್ಥಿಕ ಪರಿಹಾರ ನೀಡಲು ಬಿಡುಗಡೆ ಮಾಡಿರುವ 1250 ಕೋಟಿ ರೂಪಾಯಿ ಪ್ಯಾಕೇಜ್ ಅಸಮರ್ಪಕ ಮತ್ತು ಅವೈಜ್ಞಾನಿಕ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಟೀಕಿಸಿವೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಸರ್ಕಾರ ಕೊರೋನಾ ಲಾಕ್ ಡೌನ್ ಕಾರಣದಿಂದ ಆರ್ಥಿಕವಾಗಿ ನಷ್ಟದಲ್ಲಿರುವವರಿಗೆ ಆರ್ಥಿಕ ಪರಿಹಾರ ನೀಡಲು ಬಿಡುಗಡೆ ಮಾಡಿರುವ 1250 ಕೋಟಿ ರೂಪಾಯಿ ಪ್ಯಾಕೇಜ್ ಅಸಮರ್ಪಕ ಮತ್ತು ಅವೈಜ್ಞಾನಿಕ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಟೀಕಿಸಿವೆ. 

ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ ಪರಿಹಾರ ಘೋಷಣೆ ಕೇವಲ ಕಣ್ಣೊರೆಸುವ ತಂತ್ರ, ಬೇರೆ ರಾಜ್ಯ ಸರ್ಕಾರಗಳು ನೀಡಿದ ಪ್ಯಾಕೇಜ್, ಪರಿಹಾರಗಳನ್ನು ನೋಡಿಕೊಂಡು ರಾಜ್ಯ ಸರ್ಕಾರ ಪರಿಹಾರವನ್ನು ನೀಡಬೇಕಾಗಿತ್ತು ಎಂದು ಹೇಳಿದ್ದಾರೆ.

ಶ್ರಮಿಕ ವರ್ಗಕ್ಕೆ ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ರೂಪಾಯಿ ಮತ್ತು 10 ಕೆಜಿ ಅಕ್ಕಿ ನೀಡಬೇಕಾಗಿತ್ತು. ಮುಖ್ಯಮಂತ್ರಿಗಳು 1250 ಕೋಟಿ ರೂಪಾಯಿ ಪ್ಯಾಕೇಜ್ ಎನ್ನುತ್ತಾರೆ, ಆದರೆ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಪ್ಯಾಕೇಜ್ ಪಟ್ಟಿಯಲ್ಲಿ 1,111.82 ಕೋಟಿ ರೂಪಾಯಿ ಎಂದಿದೆ. ಅದರಲ್ಲಿ 494 ಕೋಟಿ ರೂಪಾಯಿ ನಿರ್ಮಾಣ ಕಾಮಗಾರಿ ನಡೆಸುವವರಿಗಾಗಿದೆ. ಆ ಹಣ ಕೂಲಿವರ್ಗಗಳ ಅಭಿವೃದ್ಧಿ ನಿಧಿಯಿಂದ ಬರುತ್ತದೆ, ಹಾಗಿರುವಾಗ ಅದನ್ನು ಪರಿಹಾರ ಪ್ಯಾಕೇಜ್ ನಲ್ಲಿ ಸೇರಿಸಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸಹಕಾರಿ ಬ್ಯಾಂಕುಗಳಿಂದ ಪಡೆದ ಸಾಲ ಮರುಪಾವತಿ ಸಮಯವನ್ನು ಸರ್ಕಾರ ಮೂರು ತಿಂಗಳು ವಿಸ್ತರಿಸಿದೆ. ಅದು 134.30 ಕೋಟಿ ರೂಪಾಯಿ ಮೊತ್ತವಾಗಿದೆ. ಇದನ್ನು ಪರಿಹಾರ ಪ್ಯಾಕೇಜ್ ಎಂದು ಪರಿಗಣಿಸಬಾರದು. ಕಳೆದ ವರ್ಷ ಕೊರೋನಾ ಒಂದನೇ ಅಲೆ ಬಳಿಕ ಲಾಕ್ ಡೌನ್ ಸಮಯದಲ್ಲಿ ಸರ್ಕಾರ 2,100 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿತ್ತು. ಅದರಲ್ಲಿ 850 ಕೋಟಿ ರೂಪಾಯಿ ಬಂದಿದ್ದು ನಿರ್ಮಾಣ ಕಾರ್ಮಿಕರ ಅಭಿವೃದ್ಧಿ ನಿಧಿಯಿಂದ, ಆದರೆ ಸರ್ಕಾರ ತನ್ನ ಬೊಕ್ಕಸದಿಂದ ಹಣ ನೀಡಿದೆ ಎಂದು ಹೇಳಿದೆ.

ಹಲವು ವರ್ಗದ ಜನರಿಗೆ ಪರಿಹಾರ ಸಿಗಬೇಕಿದೆ. ರಾಜ್ಯದ 7.75 ಲಕ್ಷ ಆಟೋ ಚಾಲಕರು ಮತ್ತು ಕ್ಯಾಬ್ ಚಾಲಕರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ ವಾಸ್ತವವಾಗಿ, ಕೇವಲ 2.10 ಲಕ್ಷ ಮಂದಿಗೆ ಇದರ ನೆರವು ಸಿಗುತ್ತದೆಯಷ್ಟೆ, ಶೇಕಡಾ 50ಕ್ಕೂ ಹೆಚ್ಚು ತೋಟಗಾರಿಕಾ ಬೆಳೆಗಾರರಿಗೆ ಸರ್ಕಾರದ ಪರಿಹಾರ ಸಿಕ್ಕಿಲ್ಲ. ತಮಿಳು ನಾಡು ಸರ್ಕಾರ 2.08 ಕೋಟಿ ಕುಟುಂಬಗಳಿಗೆ ತಲಾ 4 ಸಾವಿರ ರೂಪಾಯಿ ಪರಿಹಾರ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com