ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ಶಿಕ್ಷಕರು ಕೊರೋನಾದಿಂದ ಮೃತ್ಯು: ರಾಜ್ಯ ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೊಟೀಸ್
ಇತ್ತೀಚಿನ ಚುನಾವಣೆ ವೇಳೆ ಕರ್ತವ್ಯದಲ್ಲಿ ನಿರತವಾಗಿ ಕೋವಿಡ್ ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ಹೈಕೋರ್ಟ್ ಭಾರತ ಚುನಾವಣಾ ಆಯೋಗ, ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿದೆ.
Published: 20th May 2021 11:14 AM | Last Updated: 20th May 2021 01:59 PM | A+A A-

ಹೈಕೋರ್ಟ್
ಬೆಂಗಳೂರು: ಇತ್ತೀಚಿನ ಉಪ ಚುನಾವಣೆ ಮತ್ತು ನಗರ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಕರ್ತವ್ಯದಲ್ಲಿ ನಿರತವಾಗಿ ಕೋವಿಡ್ ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ಹೈಕೋರ್ಟ್ ಭಾರತ ಚುನಾವಣಾ ಆಯೋಗ, ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮ ಮತ್ತು ಎಂ ನಾಗಪ್ರಸನ್ನ ಅವರನ್ನೊಳಗೊಂಡ ವಿಭಾಗೀಯ ಪೀಠ, ಬೀದರ್ ಕ್ರಾಂತಿಯ ಕಾರ್ಯಕರ್ತ ಅಂಬ್ರೇಶ್ ಕೆಂಚ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನೊಟೀಸ್ ಜಾರಿ ಮಾಡಿದೆ. ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಅರ್ಜಿದಾರ ಅಂಬ್ರೇಶ್ ಕೆಂಚ,ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ 55 ಶಿಕ್ಷಕರು ಕೋವಿಡ್ ನಿಂದ ಮೃತಪಟ್ಟರೆ ಕೆಲವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದಿದ್ದರು.
ಸಿಬ್ಬಂದಿಯ ಕುಟುಂಬಸ್ಥರಿಗೂ ಸೋಂಕು ತಗುಲಿದ ಪ್ರಕರಣಗಳಿವೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೂ ಈ ಬಗ್ಗೆ ಅರಿವಿದ್ದರೂ ಕೇಂದ್ರ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗಗಳು ಚುನಾವಣೆಗಳನ್ನು ನಡೆಸಿದ್ದು ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅಲ್ಲದೆ ರಾಜಕೀಯ ನಾಯಕರಿಗೆ ಕ್ಷೇತ್ರಗಳಲ್ಲಿ ಬೇಕಾಬಿಟ್ಟಿಯಾಗಿ ರ್ಯಾಲಿ, ಪ್ರಚಾರ ನಡೆಸಲು ಬಿಟ್ಟಿದ್ದರು. ತಾವು ಈ ಬಗ್ಗೆ ಚುನಾವಣೆಗೆ ಮುನ್ನವೇ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡುವಂತೆ ಹೇಳಿದ್ದರೂ ಅದಕ್ಕೆ ಯಾರೂ ಕ್ಯಾರೇ ಮಾಡಿರಲಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.
ಮೃತಪಟ್ಟ ಶಿಕ್ಷಕರ ಕುಟುಂಬಸ್ಥರಲ್ಲಿ ಯಾರಿಗಾದರೂ ಅನುಕಂಪ ಆಧಾರದ ಮೇಲೆ ಉದ್ಯೋಗ ಮತ್ತು 1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದರು. ಕುಟುಂಬ ಸದಸ್ಯರು ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಅವರಿಗೆ 30 ಲಕ್ಷ ರೂಪಾಯಿ ಪರಿಹಾರ ಮತ್ತು ಚಿಕಿತ್ಸೆಯ ಹಣವನ್ನು ಮತ್ತೆ ಕೊಡಿಸಬೇಕೆಂದು ಮನವಿ ಮಾಡಿಕೊಂಡಿದ್ದರು.