18-44 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರು, ಆದ್ಯತೆ ವಲಯಗಳ ಸಿಬ್ಬಂದಿಗೆ ನಾಳೆಯಿಂದ ಕೋವಿಡ್ ಲಸಿಕೆ ನೀಡಿಕೆ

18 ರಿಂದ 44 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರು, ಆದ್ಯತೆ ವಲಯಗಳ ಸಿಬ್ಬಂದಿಗೆ ನಾಳೆ (ಮೇ22) ಮತ್ತೆ ಕೋವಿಡ್-19 ಲಸಿಕೆ ನೀಡುವ ಅಭಿಯಾನ ಪುನರಾರಂಭವಾಗಲಿದೆ.
ಕೋವಿಡ್ ಲಸಿಕೆ ಪಡೆದ ಯುವತಿ
ಕೋವಿಡ್ ಲಸಿಕೆ ಪಡೆದ ಯುವತಿ

ಬೆಂಗಳೂರು: 18ರಿಂದ 44 ವರ್ಷದ ಒಳಗಿನವರಿಗೆ ನಾಳೆ(ಮೇ22) ಮತ್ತೆ ಕೋವಿಡ್-19 ಲಸಿಕೆ ನೀಡುವ ಅಭಿಯಾನ ಪುನರಾರಂಭವಾಗಲಿದೆ. ಬಿಬಿಎಂಪಿ ಆಯುಕ್ತರು ಮತ್ತು ಉಪ ಆಯುಕ್ತರಿಂದ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ಕೋವಿಡ್ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತೆ ವಲಯಕ್ಕೆ ಅರ್ಹತಾ ಪ್ರಮಾಣಪತ್ರಗಳನ್ನು ನೀಡಲಿದ್ದು ಅವರು ಆರಂಭದಲ್ಲಿ ಲಸಿಕೆ ಪಡೆಯಲಿದ್ದಾರೆ.

ಕಳೆದ ಮೇ 1ರಂದು 18ರಿಂದ 44 ವರ್ಷದೊಳಗಿನವರಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನ ಆರಂಭವಾಗಿತ್ತಾದರೂ ರಾಜ್ಯದಲ್ಲಿ ಲಸಿಕೆ ಕೊರತೆಯಿಂದ ಅಭಿಯಾನವನ್ನು ಮುಂದೆ ಹಾಕಲಾಗಿತ್ತು.

ಮುಂಚೂಣಿ ಕಾರ್ಯಕರ್ತರ ಗುಂಪುಗಳಲ್ಲಿ ಯಾರು ಬರುತ್ತಾರೆ?: ಕೋವಿಡ್-19ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸುವ ಚಿತಾಗಾರ, ಶವಾಗಾರ ಮತ್ತು ದಹನ ಮೈದಾನಗಳಲ್ಲಿ ಕೆಲಸ ಮಾಡುವವರು, ಆರೋಗ್ಯ ವಲಯ ಕಾರ್ಯಕರ್ತರ ನಿಕಟ ಕುಟುಂಬ ಸದಸ್ಯರು, ಕೋವಿಡ್-19 ಕರ್ತವ್ಯದಲ್ಲಿರುವ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಚಾಲಕರು, ಕ್ಯಾಬ್ ಚಾಲಕರು, ವಿದ್ಯುಚ್ಛಕ್ತಿ, ನೀರು ಪೂರೈಕೆ ಸಿಬ್ಬಂದಿ, ಅಂಚೆ ಇಲಾಖೆ ನೌಕರರು, ರಸ್ತೆ ಕಾಮಗಾರಿ ಮಾಡುವವರು, ಭದ್ರತಾ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿ, ಕಚೇರಿಗಳಲ್ಲಿ, ನ್ಯಾಯಾಂಗ ಅಧಿಕಾರಿಗಳ ಬಳಿ ಕೆಲಸ ಮಾಡುವವರು, ಹಿರಿಯರು ಮತ್ತು ರೋಗಿಗಳನ್ನು ನೋಡಿಕೊಳ್ಳುವವರು, ಮಕ್ಕಳ ರಕ್ಷಣಾ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಆಸ್ಪತ್ರೆಗಳಿಗೆ ವಸ್ತುಗಳನ್ನು ಸರಬರಾಜು ಮಾಡುವವರು, ಎಣ್ಣೆ ತಯಾರಿಕೆ ಕೈಗಾರಿಕೆಗಳಲ್ಲಿ ದುಡಿಯುವವರು, ವಿಶೇಷ ಚೇತನರು, ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಆದ್ಯತೆಯಾಗಿ ಕೋವಿಡ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ.

ಆದ್ಯತೆ ವಲಯ ಗುಂಪುಗಳಲ್ಲಿ ಯಾರು ಸೇರುತ್ತಾರೆ?: ಆದ್ಯತೆಯ ಗುಂಪುಗಳಲ್ಲಿ ನಿರ್ಮಾಣ ಕಾರ್ಮಿಕರು, ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರು, ವಿಮಾನಯಾನ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಪೆಟ್ರೋಲ್ ಬಂಕ್ ನೌಕರರು, ಚಲನಚಿತ್ರೋದ್ಯಮ ಕಾರ್ಮಿಕರು, ವಕೀಲರು, ಹೋಟೆಲ್ ಮತ್ತು ಆತಿಥ್ಯ ವಲಯ, ರೈಲ್ವೆ ನೌಕರರು, ಉಡುಪು ಕಾರ್ಖಾನೆ ಕಾರ್ಮಿಕರು, ಅರಣ್ಯ ಇಲಾಖೆ ಸಿಬ್ಬಂದಿ, ಎನ್‌ಎಚ್‌ಎಐ ಮತ್ತು ಗೇಲ್ , ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ಕ್ರೀಡಾ ವ್ಯಕ್ತಿಗಳು ಮತ್ತು ಎಚ್‌ಎಎಲ್ ನೌಕರರು ಒಳಗೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com