ಬೆಳಗಾವಿ: ಪೊಲೀಸ್ ಇಲಾಖೆ ವಶದಲ್ಲಿದ್ದ 4.5 ಕೆಜಿ ಚಿನ್ನ ನಾಪತ್ತೆ; ಪೊಲೀಸರ ಮೇಲೆ ಶಂಕೆ!

ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 4.5ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದ ಪೊಲೀಸರ ಮೇಲೆಯೇ ಆ ಚಿನ್ನ ಕದ್ದ ಆರೋಪ ಬಂದಿದ್ದು, ಪ್ರಕರಣ ಸಂಬಂಧ ಹಲವು ಪೊಲೀಸರ ವರ್ಗಾವಣೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 4.5ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದ ಪೊಲೀಸರ ಮೇಲೆಯೇ ಆ ಚಿನ್ನ ಕದ್ದ ಆರೋಪ ಬಂದಿದ್ದು, ಪ್ರಕರಣ ಸಂಬಂಧ ಹಲವು ಪೊಲೀಸರ ವರ್ಗಾವಣೆ ಮಾಡಲಾಗಿದೆ.

ಹೌದು.. ಇದೊಂದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಾಗಿದ್ದು, ರಕ್ಷಣೆ ನೀಡಬೇಕಾದ ಪೊಲೀಸರೇ ಭಕ್ಷಕರಾದ ಪ್ರಕರಣವಾಗಿದೆ. ಮಂಗಳೂರಿನಿಂದ ಬೆಳಗಾವಿ ಮೂಲಕ ಕೊಲ್ಲಾಪುರಕ್ಕೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದ ಪೊಲೀಸರು ಅದೇ ಚಿನ್ನವನ್ನು ಕದ್ದು, ಇಲಾಖೆಗೆ ತೀವ್ರ  ಮುಜುಗರವನ್ನುಂಟು ಮಾಡಿದ್ದಾರೆ. ಜಪ್ತಿ ಮಾಡಿದ್ದ ಸುಮಾರು 4.5ಕೆಜಿ ಚಿನ್ನ ಅಂದಾಜು 2.5ಕೋಟಿ ರೂ ಮೌಲ್ಯದ ಚಿನ್ನ ನಾಪತ್ತೆಯಾಗಿದ್ದು, ಈ ಚಿನ್ನವನ್ನು ಪೊಲೀಸರ ಕದ್ದ ಆರೋಪ ಎದುರಿಸುತ್ತಿದ್ದಾರೆ.

ಮಂಗಳೂರಿನಿಂದ ಬೆಳಗಾವಿ ಮೂಲಕ ಕೊಲ್ಲಾಪುರಕ್ಕೆ ಕಾರಿನಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಚಿನ್ನ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಯಮಕನಮರಡಿ ಠಾಣೆ ಪೊಲೀಸರು ಜನವರಿ 9 ರಂದು ಹತ್ತರಗಿ ಟೋಲ್‌ ಗೇಟ್‌ ಬಳಿ ತಪಾಸಣೆ ಕೈಗೊಂಡಿದ್ದರು. ಈ ವೇಳೆ ಕಾರನ್ನು  ತಡೆದು ಪರಿಶೀಲನೆ ನಡೆಸಿದ್ದರು. ಆದರೆ, ಚಿನ್ನ ಸಿಗದೇ ಇದ್ದರೂ ಇತರ ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ಸಂಶಯಾಸ್ಪದ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳಿಗೂ ಕಾರಿನಲ್ಲಿ ಬಂಗಾರ ಸಿಕ್ಕಿಲ್ಲ ಎಂದು ಜಪ್ತಿ ಮಾಡಿದ್ದ ಪೊಲೀಸರು ಮಾಹಿತಿ ನೀಡಿದ್ದರು.  ಆದರೆ, ನಾಲ್ಕು ತಿಂಗಳ ನಂತರ ನಗರಕ್ಕೆ ಆಗಮಿಸಿರುವ ಸಿಐಡಿ ಪೊಲೀಸರಿಂದ ಇಡೀ ಪ್ರಕರಣ ಬಯಲಾಗಿದೆ.

ಏನಿದು ಪ್ರಕರಣ?
ಮಂಗಳೂರಿನ ತಿಲಕ್‌ ಪೂಜಾರಿ ಎಂಬುವವರು ಕಾರಿನಲ್ಲಿ 4.5 ಕೆಜಿ ಚಿನ್ನವನ್ನು ಮಂಗಳೂರಿನಿಂದ ಬೆಳಗಾವಿ ಮೂಲಕ ಕೊಲ್ಲಾಪುರಕ್ಕೆ ಕಳುಹಿಸುತ್ತಿದ್ದರು. ಈ ಮಾಹಿತಿ ತಿಳಿದ ತಿಲಕ್‌ ಪೂಜಾರಿ ಅವರ ಸ್ನೇಹಿತ ಧಾರವಾಡದ ಕಿರಣ ವೀರನಗೌಡರ ಬೆಳಗಾವಿಯ ಡಿವೈಎಸ್ಪಿಯೊಬ್ಬರಿಗೆ ಮಾಹಿತಿ ನೀಡಿದ್ದರು.  ಡಿವೈಎಸ್ಪಿ ಯಮಕನಮರಡಿ ಠಾಣೆ ಪೊಲೀಸರ ಮೂಲಕ ವಾಹನ ಜಪ್ತಿ ಮಾಡಿಸಿದ್ದರು. ಜಪ್ತಿ ಸಂದರ್ಭದಲ್ಲಿ ಕಾರಿನಲ್ಲಿ ಯಾವುದೇ ಅಕ್ರಮ ವಸ್ತು ಸಿಕ್ಕಿಲ್ಲ. ಆದರೆ, ಮೋಟಾರು ಕಾಯಿದೆ ನಿಯಮ ಉಲ್ಲಂಘಿಸಿ ವಾಹನವನ್ನು ಬದಲಾಯಿಸಿರುವುದು ಕಂಡು ಬಂದಿದೆ ಎಂದು ಪಿಎಸ್‌ಐ ರಮೇಶ್‌ ಪಾಟೀಲ ಮತ್ತು ಸಿಬ್ಬಂದಿ  96 ಕೆಪಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಾಹನವನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಕಾರಿನ ಏರ್ ಬ್ಯಾಗ್ ನಲ್ಲಿತ್ತು 4.5ಕೆಜಿ ಚಿನ್ನ
ಚಿನ್ನ ಕಳ್ಳ ಸಾಗಣೆ ಮಾಹಿತಿ ಮೇರೆಗೆ ಕಾರಿನ ಶೋಧ ನಡೆಸಿದ್ದ ಪೊಲೀಸರಿಗೆ ಕಾರಿನಲ್ಲಿ ಚಿನ್ನ ಸಿಗಲಿಲ್ಲ. ಆದರೆ ಕಾರಿನ ಇಂಚಿಂಚೂ ಭಾಗವನ್ನೂ ಶೋಧಿಸಿದ್ದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಕಾರಿನ ಏರ್ ಬ್ಯಾಗ್ ಕಂಪಾರ್ಟ್ ಮೆಂಟ್ ನಲ್ಲಿ ಚಿನ್ನ ದೊರೆತಿತ್ತು. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ  ಕಾರಿನ ಮಾಲೀಕ ಅಪಾರ ಪ್ರಮಾಣದ ಚಿನ್ನವನ್ನು ಕಾರಿನ ಏರ್ ಬ್ಯಾಗ್ ಬಾಕ್ಸ್ ಅಡಗಿಸಿಟ್ಟಿದ್ದ. ಈ ವಿಚಾರ ತಿಳಿದ ಪೊಲೀಸರು ಯಾರಿಗೂ ಹೇಳದೇ ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೇ 4.5 ಕೆಜಿ ಬಂಗಾರವನ್ನು ದೋಚಿದ್ದರು. ಬಳಿಕ ಕಾರಿನಲ್ಲಿ ಏನೂ ದೊರೆತಿಲ್ಲ ಎಂದು ಹೇಳಿ.. ಮೋಟಾರು ಕಾಯಿದೆ  ನಿಯಮ ಉಲ್ಲಂಘನೆ ಆರೋಪದ ಮೇರೆಗೆ ಕಾರನ್ನು ಜಪ್ತಿ ಮಾಡಿದ್ದರು. ಬಳಿಕ ಮಾಲೀಕರಿಗೆ ನ್ಯಾಯಾಲಯದಲ್ಲಿ ದಂಡ ಕಟ್ಟಿ ಕಾರನ್ನು ಬಿಡಿಸಿಕೊಳ್ಳುವಂತೆ ಸೂಚಿಸಿದ್ದರು. 

ನ್ಯಾಯಾಲಯದಿಂದ ಕಾರು ಬಿಡಿಸಿಕೊಳ್ಳಲು ಕಾರಿನ ಮಾಲೀಕರು ಯತ್ನಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಚಿನ್ನ ಇಲ್ಲದಿರುವುದು ಮಾಲೀಕ ತಿಲಕ್‌ ಅವರಿಗೆ ಗೊತ್ತಾಗಿದ್ದು ಅವರು ಯಮಕನಮರಡಿ ಪೊಲೀಸರ ವಿರುದ್ಧ ಐಜಿಪಿಗೆ ದೂರು ನೀಡಿದ್ದರು. ದೂರು ಪಡೆದುಕೊಂಡ ಐಜಿಪಿ ಪ್ರಕರಣದ ತನಿಖೆ ನಡೆಸುವಂತೆ ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದರು. ಅವರು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ತಂಡ ರಚಿಸಿದ್ದರು. ತನಿಖೆಯಲ್ಲಿ ಹಿರಿಯ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಂಶಯ ಬಂದಾಗ, ಇಲಾಖೆ ಗಮನಕ್ಕೆ ತಂದು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com