ಐಸಿಯುನಲ್ಲಿರುವ ತಮ್ಮ ಕೋವಿಡ್ ರೋಗಿಗಳ ಸ್ಥಿತಿಗತಿ ತಿಳಿಯಲು ಕುಟುಂಬಸ್ಥರ ಪರದಾಟ; ನಿತ್ಯವೂ ಆತಂಕ!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅದೆಷ್ಟೋ ಕೋವಿಡ್ ರೋಗಿಗಳು-ಕುಟುಂಬ ಸದಸ್ಯರ ನಡುವೆ ಸಂಪರ್ಕವೇ ಏರ್ಪಡದೇ, ರೋಗಿಯ ಆರೋಗ್ಯದ ಬಗ್ಗೆ ಮಾಹಿತಿಯೂ ಲಭ್ಯವಾಗದೇ ಆತಂಕಕ್ಕೆ ಅದೆಷ್ಟೋ ಕುಟುಂಬಗಳು ಒಳಗಾಗಿವೆ. 

Published: 22nd May 2021 04:45 PM  |   Last Updated: 22nd May 2021 05:01 PM   |  A+A-


For representational purposes

ಐಸಿಯು ಬೆಡ್ ಗಳು (ಸಂಗ್ರಹ ಚಿತ್ರ)

Posted By : Srinivas Rao BV
Source : The New Indian Express

ಬೆಂಗಳೂರು: ದೀಪ್ತಿ ರವಿ (ಹೆಸರು ಬದಲಾವಣೆ ಮಾಡಲಾಗಿದೆ) ಇತ್ತೀಚೆಗಷ್ಟೇ ಕೋವಿಡ್-19 ನಿಂದಾಗಿ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಇದಾದ ಎರಡು ದಿನಗಳ ಬಳಿಕ ಆಕೆಯ ಸಹೋದರನಿಗೆ ಆಕ್ಸಿಜನ್ ಪ್ರಮಾಣ ಕುಸಿಯುತ್ತಿತ್ತು. ತಕ್ಷಣವೇ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅದೃಷ್ಟವೆಂಬಂತೆ ಬಿಬಿಎಂಪಿ ಕೋಟಾದಿಂದ ಐಸಿಯು ಬೆಡ್ ಕೂಡಾ ಲಭ್ಯವಾಗಿತ್ತು. ಆದರೆ ಆ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಬಳಿಕ ಈ ವರೆಗೂ ಆತನ ಕುಟುಂಬ ಸದಸ್ಯರಿಗೆ ಆರೋಗ್ಯದ ಬಗ್ಗೆ ಕುರಿತು ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ! ರೋಗಿಯೊಂದಿಗೆ ಸಂಪರ್ಕ ಸಾಧಿಸಲು ಅಥವಾ ಆತನ ಆರೋಗ್ಯದ ಕುರಿತು ಮಾಹಿತಿ ಪಡೆಯಲು ಕುಟುಂಬ ಸದಸ್ಯರು ತೀವ್ರವಾಗಿ ಯತ್ನಿಸುತ್ತಿದ್ದಾರೆ ಆದರೂ ಸಹ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. 

ಇದೇ ರೀತಿಯಲ್ಲಿ ಭದ್ರತಾ ಸಿಬ್ಬಂದಿಯ ಗರ್ಭಿಣಿ ಪತ್ನಿಯನ್ನು ಕೋವಿಡ್-19 ಸೋಂಕು ತಗುಲಿದ ಹಿನ್ನೆಲೆ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2 ದಿನದ ಹಿಂದೆ ಆಕೆಗೆ ಹೆರಿಗೆಯೂ ಆಗಿದ್ದು, ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಐಸಿಯುಗೆ ದಾಖಲಿಸಲಾಗಿದೆ. ಆಕೆಯನ್ನು ಐಸಿಯುಗೆ ದಾಖಲಿಸಿದ ನಂತರ ರೋಗಿಯ ಆರೋಗ್ಯದ ಕುರಿತು ಕುಟುಂಬ ಸದಸ್ಯರಿಗೆ  ಯಾವುದೇ ಮಾಹಿತಿಯೂ ಲಭ್ಯವಾಗುತ್ತಿಲ್ಲ.  

ಇದು ಕೇವಲ ಎರಡು ಪ್ರಕರಣಗಳಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅದೆಷ್ಟೋ ರೋಗಿಗಳು-ಕುಟುಂಬ ಸದಸ್ಯರ ನಡುವೆ ಸಂಪರ್ಕವೇ ಏರ್ಪಡದೇ, ರೋಗಿಯ ಆರೋಗ್ಯದ ಬಗ್ಗೆ ಮಾಹಿತಿಯೂ ಲಭ್ಯವಾಗದೇ ಆತಂಕಕ್ಕೆ ಅದೆಷ್ಟೋ ಕುಟುಂಬಗಳು ಒಳಗಾಗಿವೆ. 

ಕೋವಿಡ್-19 ನಿಂದ ನಮ್ಮ ತಂದೆ ಮೃತಪಟ್ಟಿದ್ದರು, ನಮ್ಮ ತಾಯಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆಯ ಅಂತ್ಯಕ್ರಿಯೆಗಳಲ್ಲಿ ಕುಟುಂಬ ಸದಸ್ಯರು ಗಮನ ಹರಿಸುತ್ತಿದ್ದಾರೆ. ಇತ್ತ ತಾಯಿಯ ಆರೋಗ್ಯದಲ್ಲಿ ಸುಧಾರಣೆ ಇದೆ ಎಂಬುದನ್ನು ಬಿಟ್ಟರೆ ಸತತ ನಾಲ್ಕು ದಿನಗಳಿಂದ ಕುಟುಂಬ ಸದಸ್ಯರಿಗೆ ಯಾವುದೇ ಹೆಚ್ಚಿನ ಮಾಹಿತಿಯೂ ಲಭ್ಯವಾಗುತ್ತಿಲ್ಲ.  ಮತ್ತೋರ್ವ ರೋಗಿಯ ಮೊಬೈಲ್ ನಿಂದ ನಮ್ಮ ತಾಯಿ ನಮಗೆ ಕರೆ ಮಾಡಿದ್ದರು, ನೀರು ಬೇಕೆಂದು ಕೇಳುತ್ತಿದ್ದರು. ನಾವು ವೈದ್ಯರೊಂದಿಗೆ ಸಂಪರ್ಕ ಸಾಧಿಸಲು ಹರಸಾಹಸಪಟ್ಟೆವು. 5 ನೇ ದಿನ ಆಕೆಯೂ ಮೃತಪಟ್ಟಿದ್ದಾಗಿ ವಿಕ್ಟೋರಿಯಾ ಆಸ್ಪತ್ರೆಯಿಂದ ಮಾಹಿತಿ ಬಂದಿತು". ಎಂದು ತಮ್ಮ ನೋವನ್ನು ಸೌಜನ್ಯ ರಮೇಶ್ ಹೇಳಿಕೊಂಡಿದ್ದಾರೆ. 

ನನ್ನ ಪತಿ ಆಸ್ಪತ್ರೆಯಲ್ಲಿದ್ದುಕೊಂಡು ಭಾವೋದ್ವೇಗಕ್ಕೆ ಒಳಗಾಗಿದ್ದರು, ನಾನು ಕರೆ ಮಾಡಿದಾಗ ಕಣ್ಣೀರಿಡಲು ಪ್ರಾರಂಭಿಸಿದ್ದರು. ಅಸಹಾಯಕರಾಗಿ ಅವರು ಹೇಳುವುದನ್ನು ಆಲಿಸುವುದು ಬಿಟ್ಟರೆ ಬೇರೇನೂ ಮಾಡದ ಪರಿಸ್ಥಿತಿಯಲ್ಲಿದ್ದೆವು. ಕೊನೆಗೆ ತೀವ್ರ ಪ್ರಯತ್ನದಿಂದ ವೈದ್ಯರನ್ನು ಸಂಪರ್ಕಿಸಿದೆವು, ಎಂದು ಆಸ್ಪತ್ರೆಯ ಹೆಸರನ್ನು ಹೇಳಲು ಇಚ್ಛಿಸದ ಕ್ರಿಸ್ಟೀನ್ ರಾಜ್ ಅಲ್ಲಿನ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ. 

ಆದರೆ ತೀವ್ರವಾಗಿರುವ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಐಸಿಯು ಒಳಗೆ ಮೊಬೈಲ್ ಫೋನ್ ಗಳನ್ನು ತರುವುದಕ್ಕೆ ಅವಕಾಶವಿಲ್ಲ ಎಂದು ಆಸ್ಪತ್ರೆಗಳು ಹೇಳುತ್ತಿವೆ. ಪ್ರಕರಣಗಳು ಹೆಚ್ಚಿದೆ. ನಾವು ರೋಗಿಗಳ ಕುಟುಂಬದವರೊಂದಿಗೆ ದಿನವೂ ಮಾತನಾಡುವುದಿಲ್ಲ, ದಿನ ಬಿಟ್ಟು ದಿನ ಮಾತನಾಡುತ್ತೇವೆ. ತುರ್ತು ಇದ್ದಾಗ ಸಂಬಂಧಿಕರಿಗೆ ಕರೆ ಮಾಡುತ್ತೇವೆ ಎಂದು ಬೌರಿಂಗ್ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ. 

ಇನ್ನು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿದ್ದು, ಮಧ್ಯಹ್ನ 1.30 ಹಾಗೂ ರಾತ್ರಿ 8.30 ರ ನಡುವೆ ರೋಗಿಗಳ ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುತ್ತೇವೆ ಎಂದು ಹೇಳಿದ್ದಾರೆ. 


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp