'ಅಪ್ಪನ ಮೃತದೇಹ ಬೇಡ, ಅಪ್ಪನ ಹಣ ಬೇಕು' ಕೋವಿಡ್ ನಿಂದ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರಕ್ಕೆ ಬಾರದೆ ಅಮಾನವೀಯತೆ ತೋರಿಸಿದ ಮಗ!

ಅಪ್ಪನ ದುಡ್ಡು ಬೇಕು, ಆದರೆ ಅಪ್ಪನ ಮೃತದೇಹ ಬೇಡ, ತಂದೆಯ ಕೊನೆಕಾಲದಲ್ಲಿ ಅಮಾನವೀಯತೆ ತೋರಿಸಿದ ಮಗನ ಕಥೆಯಿದು.
ಮೃತದೇಹವನ್ನು ಕೊಂಡೊಯ್ಯುತ್ತಿರುವ ಕೊರೋನಾ ಕಾರ್ಯಕರ್ತರು
ಮೃತದೇಹವನ್ನು ಕೊಂಡೊಯ್ಯುತ್ತಿರುವ ಕೊರೋನಾ ಕಾರ್ಯಕರ್ತರು

ಮೈಸೂರು: ಅಪ್ಪನ ದುಡ್ಡು ಬೇಕು, ಆದರೆ ಅಪ್ಪನ ಮೃತದೇಹ ಬೇಡ, ತಂದೆಯ ಕೊನೆಕಾಲದಲ್ಲಿ ಅಮಾನವೀಯತೆ ತೋರಿಸಿದ ಮಗನ ಕಥೆಯಿದು.

ಮಕ್ಕಳ ಮೇಲೆ ಅಪಾರ ನಿರೀಕ್ಷೆಯಿಟ್ಟು ತಂದೆ-ತಾಯಿ ಸಾಕಿ ಸಲುಹಿ ಬೆಳೆಸಿ ದೊಡ್ಡವರನ್ನಾಗಿ ಮಾಡಿರುತ್ತಾರೆ, ಆದರೆ ಸಂಧ್ಯಾಕಾಲದಲ್ಲಿ ಅಪ್ಪ-ಅಮ್ಮನ ಆಸ್ತಿಪಾಸ್ತಿಗಳನ್ನೆಲ್ಲಾ ಲಪಟಾಯಿಸಿ ವೃದ್ಧರನ್ನು ಬೀದಿಪಾಲು ಮಾಡುವ ಮಕ್ಕಳನ್ನು ನಾವು ಸಾಕಷ್ಟು ಕಡೆ ನೋಡಿದ್ದೇವೆ, ಕೇಳಿದ್ದೇವೆ, ಇದು ಕೂಡ ಅಂತಹದ್ದೇ ಕಥೆ.

ಮೈಸೂರಿನ 55 ವರ್ಷದ ವ್ಯಕ್ತಿ ಕೋವಿಡ್ ನಿಂದ ಮೃತಪಟ್ಟರು. ಅವರ ಮೃತದೇಹವನ್ನು ಸ್ವೀಕರಿಸಲು ಒಪ್ಪದ ಮಗ ತಂದೆಯ ಆಸ್ತಿ ಮತ್ತು ಹಣ ಮಾತ್ರ ಪಡೆಯಲು ಬಯಸಿದ್ದಾನೆ. ಕೊನೆಗೆ ಮೃತದೇಹದ ಅಂತ್ಯಕ್ರಿಯೆ ನಡೆಸಿದ್ದು ವಾರ್ಡ್ ಕಾರ್ಪೊರೇಟರ್ ಕೆ ವಿ ಶ್ರೀಧರ್ ಅವರ ಸಹಾಯದಿಂದ.

ವಿಡಿಯೊದಲ್ಲಿ ಮೃತದೇಹವನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಆಸ್ಪತ್ರೆಯಿಂದ ಹೊರಗೆ ತಂದು ಚಿತಾಗಾರಕ್ಕೆ ಕೊಂಡೊಯ್ಯುವ ಮೊದಲು ವಾಹನಕ್ಕೆ ಶಿಫ್ಟ್ ಮಾಡುವಾಗ ಕೊರೋನಾ ಕಾರ್ಯಕರ್ತ, ಮಗನಲ್ಲಿ ಮೊಬೈಲ್ ನ ಸ್ಪೀಕರ್ ಆನ್ ಮಾಡಿಟ್ಟು ಮಾತನಾಡುತ್ತಿದ್ದಾರೆ. 6 ಲಕ್ಷ ರೂಪಾಯಿ ನಗದು, ಎಟಿಎಂ ಕಾರ್ಡುಗಳು, ಮೂರು ಮೊಬೈಲ್ ಗಳು ನಿಮ್ಮ ಅಪ್ಪನ ಚೀಲದಲ್ಲಿವೆ ಏನು ಮಾಡುವುದು ಎಂದು ಕೇಳುತ್ತಾರೆ.

ಆಗ ಮೃತ ವ್ಯಕ್ತಿಯ ಮಗ ಹಣ, ಮೊಬೈಲ್ ಮತ್ತು ಎಟಿಎಂ ಕಾರ್ಡನ್ನು ಕಳುಹಿಸಿಕೊಡಿ ಎನ್ನುತ್ತಾನೆ. ಆಗ ಕೋಪಗೊಂಡ ಕೊರೋನಾ ಕಾರ್ಯಕರ್ತ, ನಿನಗೆ ನಾಚಿಗೆಯಾಗುವುದಿಲ್ಲವೇ, ನಿನಗೆ ಅಪ್ಪನ ದುಡ್ಡು, ಎಟಿಎಂ ಕಾರ್ಡು ಎಲ್ಲ ಬೇಕು, ನಿನ್ನ ತಂದೆಯ ಅಂತ್ಯಸಂಸ್ಕಾರ ಮಾಡಲು ನಿನಗೆ ಸಾಧ್ಯವಿಲ್ಲವೇ, ಇದೇನಾ ನಿನ್ನ ಸಂಸ್ಕೃತಿ ಎಂದು ಕೇಳಿದಾಗ ಮಗ, ಇಲ್ಲ ಸರ್ ಎನ್ನುತ್ತಾನೆ, ಮತ್ತೆ ನಡೆದ ಸಂಭಾಷಣೆ ಸರಿಯಾಗಿ ಅರ್ಥವಾಗುವುದಿಲ್ಲ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವ್ಯಾಪಕವಾಗಿ ಸುದ್ದಿಯಾಗುತ್ತಿದೆ. ನಾಡಿನಾದ್ಯಂತ ಜನರು ಮಗನ ಬುದ್ಧಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕೊರೋನಾದಿಂದ ಮೃತಪಟ್ಟು ಅನಾಥವಾಗಿರುವ ಶವಗಳನ್ನು ಜಾತಿ,ಧರ್ಮ, ಕುಲ,ಕುಟುಂಬ ಹಿನ್ನೆಲೆ ನೋಡದೆ ಹಲವು ಕಡೆ ಅಂತ್ಯಸಂಸ್ಕಾರ ಮಾಡುವವರ ಮಧ್ಯೆ ಸ್ವಂತ ಮಗನಿದ್ದೂ ತಂದೆಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಿಕೊಡದವನು ಎಂತಹ ಮಗ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com