ಸೋಂಕಿತ ಮಹಿಳೆ ದಾಖಲಿಸಿಕೊಳ್ಳಲು ನಕಾರ: ನಗರದ ಖಾಸಗಿ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲು
ರೆಮ್ಡೆಸಿವಿರ್ ಚುಚ್ಚುಮದ್ದಿಗೆ ರೂ.15 ಸಾವಿರ ಕೇಳಿದ್ದ ಹಾಗೂ ಸೋಂಕಿತ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದ ಆರೋಪದಡಿ ನಗರದ ಖಾಸಗಿ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಾಗಿದೆ.
Published: 26th May 2021 08:24 AM | Last Updated: 26th May 2021 08:27 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರೆಮ್ಡೆಸಿವಿರ್ ಚುಚ್ಚುಮದ್ದಿಗೆ ರೂ.15 ಸಾವಿರ ಕೇಳಿದ್ದ ಹಾಗೂ ಸೋಂಕಿತ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದ ಆರೋಪದಡಿ ನಗರದ ಖಾಸಗಿ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿಬಿಎಂಪಿಯ ವಲಯದ ಆರೋಗ್ಯ ವೈದ್ಯಾಧಿಕಾರಿ ಡಾ. ರಾಜೇಂದ್ರ ನೀಡಿರುವ ದೂರು ಆಧರಿಸಿ ಆಸ್ಪತ್ರೆ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಕೊರೊನಾ ಸೋಂಕಿತ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಭಾರತಿ ಆಸ್ಪತ್ರೆಗೆ ಮೇ 8ರಂದು ದಾಖಲಿಸಲಾಗಿತ್ತು. ಆರೋಗ್ಯ ಹದಗೆಟ್ಟಿರುವುದಾಗಿ ಹೇಳಿದ್ದ ವೈದ್ಯರು, ರೆಮ್‌ಡಿಸಿವಿರ್ ಚುಚ್ಚುಮದ್ದು ನೀಡಲು ರೂ.15 ಸಾವಿರ ಕೇಳಿದ್ದರು. ದುಬಾರಿ ಬೆಲೆ ಕೇಳಿದ್ದರಿಂದಾಗಿ ರೋಗಿಯ ಕಡೆಯವರು, ಔಷಧ ನಿಯಂತ್ರಕರಿಗೆ ವಿಷಯ ತಿಳಿಸಿದ್ದರು. ಅವರ ಮೂಲಕ ಚುಚ್ಚುಮದ್ದು ತರಿಸಿ ಮಹಿಳೆಗೆ ನೀಡಲೆಂದು ವೈದ್ಯರಿಗೆ ಕೊಟ್ಟಿದ್ದರು.
ತಾವು ಹೇಳಿದ ದರ ಕೊಟ್ಟು ಚುಚ್ಚುಮದ್ದು ಖರೀದಿಸದೇ ಔಷಧ ನಿಯಂತ್ರಕರನ್ನು ಸಂಪರ್ಕಿಸಿದ್ದಕ್ಕಾಗಿ ಗರಂ ಆದ ಆಸ್ಪತ್ರೆ ವೈದ್ಯರು, ಚಿಕಿತ್ಸೆ ಮುಂದುವರಿಸಲು ಆಗುವುದಿಲ್ಲವೆಂದು ಹೇಳಿ ಮಹಿಳೆಯನ್ನು ಆಸ್ಪತ್ರೆಯಿಂದ ಹೊರಹಾಕಿದ್ದರು. ಡಿಸ್ಚಾರ್ಜ್ ಸಮ್ಮರಿಯಲ್ಲಿ ಮಹಿಳೆ ಗುಣಮುಖರಾಗಿದ್ದಾರೆಂದು ತಿಳಿಸಿದ್ದಾರೆ.
ಬಳಿಕ ಮಹಿಳೆಯನ್ನು ಕುಟುಂಬಸ್ಥರು ಮನೆಗೆ ಕರೆತಂದಿದ್ದಾರೆ. ಈ ವೇಳೆ ಮಹಿಳೆಯಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಮತ್ತೆ ಅದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆಯವರು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ದಿಕ್ಕು ತೋಚದಂತಾದ ಸಂಬಂಧಿಕರು, ಮಹಿಳೆಯನ್ನು ಬೇರೊಂದು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.