ಕೊರೋನಾ 3ನೇ ಅಲೆ ಜನರ ವರ್ತನೆ ಮೇಲೆ ಅವಲಂಬಿತವಾಗಿದೆ: ಬಿಬಿಎಂಪಿ ಆಯುಕ್ತ

ಕೊರೋನಾ 2ನೇ ಅಲೆ ಈಗಷ್ಟೇ ಇಳಿಯುತ್ತಿದ್ದು, ಆಗಲೇ 3ನೇ ಅಲೆ ಭೀತಿ ಶುರುವಾಗಿದ್ದು, ಜನರ ವರ್ತನೆ ಹಾಗೂ ನಡವಳಿಕೆ ಮೇಲೆ ಕೊರೋನಾ ಮೂರನೇ ಅಲೆ ಅವಲಂಬಿತವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು: ಕೊರೋನಾ 2ನೇ ಅಲೆ ಈಗಷ್ಟೇ ಇಳಿಯುತ್ತಿದ್ದು, ಆಗಲೇ 3ನೇ ಅಲೆ ಭೀತಿ ಶುರುವಾಗಿದ್ದು, ಜನರ ವರ್ತನೆ ಹಾಗೂ ನಡವಳಿಕೆ ಮೇಲೆ ಕೊರೋನಾ ಮೂರನೇ ಅಲೆ ಅವಲಂಬಿತವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ. 

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೊವಿಡ್-19 2ನೇ ಅಲೆ ಸಾಕಷ್ಟು ಸಾವು ನೋವಿಗೆ ಕಾರಣವಾಗಿದೆ. ತಜ್ಞರು ಮೂಲನೇ ಅಲೆಯ ಭೀತಿಯಿದೆ ಎಂದು ಹೇಳಿದ್ದಾರೆ. ಸಾರ್ವಜನಿಕರು ಈಗಲಾದರೂ ಎಚ್ಚೆತ್ತುಕೊಂಡು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಮೂರನೇ ಅಲೆ ತಪ್ಪಿಸಬಹುದು ಎಂದು ಹೇಳಿದ್ದಾರೆ. 

ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಪ್ರಯತ್ನ ಮಾಡುತ್ತಿವೆ. ಆದರೂ ಹೊಸ ಪ್ರಕರಣಗಳು ಕೆಲ ದೇಶಗಳಲ್ಲಿ ಬರುತ್ತಿವೆ. ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು. ಇಲ್ಲದಿದ್ದರೆ, ನಾವು ಮತ್ತೆ ಕಷ್ಟಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಹೀಗಾಗಿ ನಾವು ಸುರಕ್ಷಿತವಾಗಿ ಇರಬೇಕು ಎಂದು ಸಲಹೆ ನೀಡಿದರು. 

ಕೋವಿಡ್ ಮೂರನೇ ಅಲೆ ಸಂಬಂಧ ರಾಜ್ಯ ಸರ್ಕಾರ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದು, ಇದರ ಅನ್ವಯ ನಗರದೆಲ್ಲೆಡೆ ಪೂರ್ವ ಸಿದ್ಧತೆ ಪ್ರಕ್ರಿಯೆ ಚಾಲ್ತಿಯಲ್ಲಿವೆ. ಈಗಾಗಲೇ ಹಾಸಿಗೆಗಳ ಮಾಹಿತಿ ಕಲೆ ಹಾಕಲಾಗಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಸಮನ್ವಯದಲ್ಲಿ ಒಟ್ಟು ಐಸಿಯು ಮತ್ತು ಆಕ್ಸಿಜನ್ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯ ಕೊರತೆ ಇಲ್ಲದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. 

ಲಾಕ್ಡೌನ್, ಜನತಾ ಕರ್ಫ್ಯೂ ಪರಿಣಾಮದಿಂದಾಗಿ ನಗರದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ತಗ್ಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಪೂರ್ವ ವಲಯದ ಕೋವಿಡ್ ವಾರ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಸಿಗೆಗಳ ಕೊರತೆಯೂ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಜನರು ಮಾರ್ಗಸೂಚಿಗಳನ್ನು ಪಾಲಿಸಿ ಇದೇ ರೀತಿ ಸಹಕಾರ ನೀಡಿದರೆ ರೋಗ ಮುಕ್ತ ಸಮಾಜ ನಿರ್ಮಾಣವಾಗಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com