ಸಂಕಷ್ಟದಲ್ಲಿರುವ ಶಿಕ್ಷಕರ ನೆರವಿಗೆ ವೇತನ ನೀಡಲು ಮೇಲ್ಮನೆಯ ಶಿಕ್ಷಕ-ಪದವೀಧರ ಕ್ಷೇತ್ರದ ಸದಸ್ಯರು ಮುಂದು

ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರು ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ಶಿಕ್ಷಕರ ನೆರವಿಗೆ ಧಾವಿಸಿರುವ ಮೇಲ್ಮನೆಯ ಶಿಕ್ಷಕ-ಪದವೀಧರ ಕ್ಷೇತ್ರದ ಪರಿಷತ್ ಸದಸ್ಯರು ತಮ್ಮ ವೇತನ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.
ಸುರೇಶ್ ಕುಮಾರ್
ಸುರೇಶ್ ಕುಮಾರ್

ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರು ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ಶಿಕ್ಷಕರ ನೆರವಿಗೆ ಧಾವಿಸಿರುವ ಮೇಲ್ಮನೆಯ ಶಿಕ್ಷಕ-ಪದವೀಧರ ಕ್ಷೇತ್ರದ ಪರಿಷತ್ ಸದಸ್ಯರು ತಮ್ಮ ವೇತನ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್,ಶಿಕ್ಷಕರ‌ ಹಾಗೂ ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರೊಂದಿಗೆ ಶಿಕ್ಷಕರ ಹಾಗೂ ಪದವಿಪೂರ್ವ ಶಿಕ್ಷಕರ ಸಂಘಟನೆಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದ ಸಭೆ‌ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ಕೆಲವು ತಿಂಗಳುಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಸಹಾಯ ಹಸ್ತವನ್ನು ಚಾಚಬೇಕು. ಸರ್ಕಾರ‌‌ ಇಂತಹ ಸಂಕಷ್ಟದ‌ ಸಂದರ್ಭದಲ್ಲಿಯೂ ಸರ್ಕಾರಿ ಶಾಲಾ‌ ಶಿಕ್ಷಕರೂ ಸೇರಿದಂತೆ ಯಾವುದೇ ವರ್ಗಕ್ಕೂ ವೇತನ‌ ಭತ್ಯೆಗಳ ಕಡಿತಕ್ಕೆ ಮುಂದಾಗಿಲ್ಲ. ರಾಜ್ಯ ಸರ್ಕಾರದ‌ ಆರ್ಥಿಕ ಸ್ಥಿತಿಗತಿಗಳ‌ ಬಗ್ಗೆ ಎಲ್ಲರಿಗೂ ಅರಿವಿದೆ. ಹಾಗಾಗಿ ನಮ್ಮದೇ ಖಾಸಗಿ ಅನುದಾನರಹಿತ ಶಿಕ್ಷಕ‌ ಸಮುದಾಯದ ನೆರವಿಗೆ ಬರಬೇಕಾದ್ದು ನಮ್ಮ‌ ಜವಾಬ್ದಾರಿಯೆಂದು ತಿಳಿಯಬೇಕೆಂದರು. ಆಗ ಶಿಕ್ಷಕ ಪದವೀಧರ‌ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರುಗಳು ತಮ್ಮೆಲ್ಲರಿಂದ ನಿರೀಕ್ಷಿಸುವ ವೇತನ ಮೊತ್ತವನ್ನು ನೀಡಲು ಮುಂದೆ ಬಂದು ಒಪ್ಪಿಗೆ ಸೂಚಿಸಿದರು.

ಮೇಲ್ಮನೆ ಸದಸ್ಯರ ನೆರವನ್ನು ಶ್ಲಾಘಿಸಿದ ಸುರೇಶ್ ಕುಮಾರ್, ಇದನ್ನು ಎಲ್ಲರೂ ಮಾದರಿಯಾಗಿ ಕಾಣಬೇಕಿದೆ.ಇಲಾಖೆಯ ಆಂತರಿಕ ಆರ್ಥಿಕ ಸಂಪನ್ಮೂಲಗಳನ್ನು ಬಳಸಲು ಸಹ ಆಲೋಚಿಸಲಾಗುತ್ತಿದ್ದು, ಸಂಪನ್ಮೂಲ‌ ಕ್ರೂಢೀಕರಣಕ್ಕೆ ಪ್ರಸ್ತಾವನೆ ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಒಂದು ವೇಳೆ ಮುಂದಿನ‌ ದಿನಗಳಲ್ಲಿ ಸರ್ಕಾರಿ‌ ನೌಕರರ ವೇತನ ಕಟಾವಣೆ ಮಾಡುತ್ತೇವೆಂದು ಸರ್ಕಾರ‌ ನಿರ್ಧರಿಸಿದಲ್ಲಿ, ಈಗ ನೀಡಲು ಶಿಕ್ಷಕರು ನೀಡಲು ಇಚ್ಛಿಸುವ ಮೊತ್ತವನ್ನು ವಿನಾಯ್ತಿ ನೀಡಲು ಆರ್ಥಿಕ ಇಲಾಖೆಯನ್ನು ಕೋರಲಾಗುವುದು ಎಂದು ಹೇಳಿದರು.

ಪ್ರೌಢ ಶಾಲಾ ಶಿಕ್ಷಕರ ಸಂಘಟನೆಯ ಮಂಜುನಾಥ್ ಮಾತನಾಡಿ, ನಿಶ್ಚಿತವಾಗಿಯೂ ಸಂಘಟನೆಯು ಈ ರೀತಿಯ ಮಾನವೀಯ ಸಹಕಾರವನ್ನು ತೋರಲು ಉತ್ಸುಕವಾಗಿದ್ದು, ಸರ್ಕಾರದ‌ ನಿಲುವನ್ನು ಬೆಂಬಲಿಸುತ್ತದೆ ಎಂದರು. ಇನ್ನು ಪದವಿಪೂರ್ವ ಉಪನ್ಯಾಸಕರ‌ ಸಂಘಟನೆಯ ಅಧ್ಯಕ್ಷ ನಿಂಗೇಗೌಡ ಸಂಘಟನೆಯ ಅಧ್ಯಕ್ಷ ಶಂಭುಗೌಡನ ಪಾಟೀಲ್, ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ‌ ನುಗ್ಲಿ ಅವರುಗಳು ಸಂಘಟನೆಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ತಮ್ಮ ಲಿಖಿತ ಒಪ್ಪಿಗೆ ನೀಡುತ್ತೇವೆಂದು ಹೇಳಿದರು.

ಸಭೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಡಾ. ವೈ.ಎ.ನಾರಾಯಣ ಸ್ವಾಮಿ, ಪುಟ್ಟಣ್ಣ, ಅರುಣ ಶಹಾಪುರ, ಶಶೀಲ್ ನಮೋಷಿ, ಸಂಕನೂರ, ಹಣಮಂತ ನಿರಾಣಿ, ಅ.ದೇವೇಗೌಡ ಹಾಗೂ ಚಿದಾನಂದ ಗೌಡ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com